ಬೆಂಗಳೂರು (ಜು. 07):  ಬೆಂಗಳೂರಿನ ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಕೊರೋನಾ ಸೋಂಕಿತರ ಆರೈಕೆ ಕೇಂದ್ರ ಆರಂಭಿಸಲಾಗುತ್ತಿದೆ. ಇದು ನವದೆಹಲಿಯ ಛತರ್‌ಪುರದ ರಾಧಾಸ್ವಾಮಿ ಸತ್ಸಂಗ್‌ ಬಿಯಾಸ್‌ನಲ್ಲಿ ಭಾನುವಾರ ಉದ್ಘಾಟಿಸಲಾದ ‘ಸರ್ದಾಲ್‌ ಪಟೇಲ್‌ ಕೋವಿಡ್‌ ಆರೈಕೆ’ ಕೇಂದ್ರಕ್ಕಿಂತ ಅತ್ಯಾಧುನಿಕ ಮಾದರಿ ಮತ್ತು ಅದಕ್ಕಿಂತ ಹೆಚ್ಚಿನ ಸಾಮರ್ಥ್ಯ ಹೊಂದಿರಲಿದೆ.

ಬಿಐಇಸಿ ಒಟ್ಟು 77,200 ಚ.ಮೀ ವಿಸ್ತೀರ್ಣ ಹೊಂದಿದ್ದು, ಐದು ದೊಡ್ಡ ಸಭಾಂಗಣಗಳಿವೆ. ಒಟ್ಟು 10,100 ಹಾಸಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ತಲಾ ಒಂದು ಸಭಾಂಗಣದಲ್ಲಿ ಸುಮಾರು 2 ಸಾವಿರ ಹಾಸಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ 7 ಸಾವಿರ ಹಾಸಿಗೆ ವ್ಯವಸ್ಥೆಯಾಗಿದ್ದು, ಮೂರ್ನಾಲ್ಕು ದಿನದಲ್ಲಿ ಉಳಿದ ಮೂರು ಸಾವಿರ ಹಾಸಿಗೆ ವ್ಯವಸ್ಥೆ ಮಾಡಿ ಚಿಕಿತ್ಸೆ ಆರಂಭಿಸಲಾಗುತ್ತಿದೆ.

ಐದು ಹಾಲ್‌ನಲ್ಲಿ 154 ವಾರ್ಡ್‌

‘ಸರ್ದಾರ್‌ ಪಟೇಲ್‌ ಕೋವಿಡ್‌ ಆರೈಕೆ’ ದೊಡ್ಡ ಹಾಲ್‌ನಲ್ಲಿ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಬಿಐಇಸಿಯಲ್ಲಿ ಆಸ್ಪತ್ರೆಯ ಮಾದರಿಯಲ್ಲಿ ವಾರ್ಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿ ವಾರ್ಡ್‌ನಲ್ಲಿ 66 ಮಂದಿ ಸೋಂಕಿತರಿಗೆ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಈ ಪ್ರಕಾರ ಪ್ರತಿ ಸಭಾಂಗಣದಲ್ಲಿ ಸುಮಾರು 30 ವಾರ್ಡ್‌ಗಳು ನಿರ್ಮಿಸಲಾಗುತ್ತಿದೆ.

ಉಚಿತ ವೈಫೈ

ಅತ್ಯಾಧುನಿಕ ಸೌಲಭ್ಯಗಳನ್ನು ಆರೈಕೆ ಕೇಂದ್ರದಲ್ಲಿ ನೀಡಲಾಗುತ್ತಿದೆ. ಪ್ರತಿ ಎರಡು ಹಾಸಿಗೆ ಒಂದು ಫ್ಯಾನ್‌ ಅಂತೆ 5,050 ಫ್ಯಾನ್‌ ಅಳವಡಿಸಲಾಗುತ್ತಿದೆ. ಪ್ರತಿ ಮೂರು ಅಡಿಗೆ ಒಂದು ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಹಾಸಿಗೆ ಒಂದು ಪ್ರತ್ಯೇಕ ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌, ಉಚಿತ ವೈಫೈ ವ್ಯವಸ್ಥೆ, ಸಿಸಿ ಕ್ಯಾಮೆರಾ ವ್ಯವಸ್ಥೆ ನೀಡಲಾಗುತ್ತಿದೆ.

100 ಹಾಸಿಗೆಯ ಐಸಿಯು ಘಟಕ

ಆರೈಕೆ ಕೇಂದ್ರದಲ್ಲಿ 10,100 ಹಾಸಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಪ್ರತಿ 100 ಸಾಮಾನ್ಯ ಹಾಸಿಗೆಗೆ ಒಂದರಂತೆ 100 ಹಾಸಿಗೆಯ ತೀವ್ರ ನಿಗಾ ಘಟಕವನ್ನು ಬಿಐಇಸಿಯಲ್ಲಿ ನಿರ್ಮಿಸಲಾಗುತ್ತಿದೆ.

ಶೇ.30 ರಷ್ಟುಮಹಿಳಾ ರೋಗಿಗೆ ಮೀಸಲು

ಪ್ರತಿ ಸಭಾಂಗಣದಲ್ಲಿ ಶೇ.30 ರಷ್ಟುಮಹಿಳಾ ಸೋಂಕಿತರಿಗೆ ಮೀಸಲಿಡಲು ತೀರ್ಮಾನಿಸಲಾಗಿದ್ದು, ಅದರಂತೆ 660 ಹಾಸಿಗೆಯನ್ನು ಮಹಿಳಾ ಸೋಂಕಿತರಿಗೆ ಮೀಸಲಿಡಲಾಗುತ್ತಿದೆ. ಅದರ ಜೊತೆಗೆ ಮಹಿಳೆಯರಿಗೆ ಪ್ರತ್ಯೇಕ ವಾರ್ಡ್‌ಗಳನ್ನು ನಿರ್ಮಿಸಲಾಗುತ್ತಿದೆ.

300 ವೈದ್ಯರು

ಬಿಐಇಸಿಯಲ್ಲಿ 10,100 ಮಂದಿ ಸೋಂಕಿತರಿಗೆ ಮೂರು ಪಾಳಿಯಲ್ಲಿ ಚಿಕಿತ್ಸೆ ನೀಡುವುದಕ್ಕೆ ಒಟ್ಟು 300 ವೈದ್ಯರು ಹಾಗೂ 600 ಮಂದಿ ನರ್ಸ್‌ಗಳ ಬೇಕಾಗಲಿದ್ದಾರೆ. ಈ ಸಿಬ್ಬಂದಿ ಬಿಐಇಸಿಯಲ್ಲಿಯೇ ಇದ್ದು, ಚಿಕಿತ್ಸೆ ನೀಡಲಿದ್ದಾರೆ. ವೈದ್ಯಕೀಯ ಸಿಬ್ಬಂದಿಯ ವಾಸ್ತವ್ಯಕ್ಕೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ.

4 ದಿಕ್ಕಗಳಲ್ಲಿ ಒಂದೊಂದು ಮನೋರಂಜನಾ ಕೇಂದ್ರ

ಸೋಂಕಿತರ ಮನೋರಂಜನೆಗಾಗಿ ಬಿಐಇಸಿಯ ನಾಲ್ಕು ದಿಕ್ಕಿನಲ್ಲಿ ಮನೋರಂಜನಾ ಕೇಂದ್ರ ನಿರ್ಮಿಸಲಾಗುತ್ತಿದೆ. ಈ ಇಲ್ಲ ಮಕ್ಕಳಿಗೆ ಆಟವಾಡುವುದಕ್ಕೆ ಬೇಕಾದ ಆಟಿಕೆಗಳು, ಹಿರಿಯರಿಗೆ ಮನೋರಂಜನೆಗೆ ದೊಡ್ಡ ಎಲ್‌ಇಡಿ ಪರದೆಯ ವ್ಯವಸ್ಥೆ, ದಿನಪತ್ರಿಕೆ, ಪುಸ್ತಕಗಳ ವ್ಯವಸ್ಥೆ ಮಾಡಲಾಗುತ್ತಿದೆ.

ಯೋಗ ಕೇಂದ್ರ

ಸೋಂಕಿತರಿಗೆ ನೆರವಾಗುವ ಉದ್ದೇಶದಿಂದ ಯೋಗ ಕೇಂದ್ರ ಸಹ ಆರೈಕೆ ಕೇಂದ್ರದಲ್ಲಿ ನಿರ್ಮಿಸಲಾಗುತ್ತಿದೆ. ಸೋಂಕಿತರು ಯೋಗ ತರಬೇತಿ ನೀಡಲಾಗುತ್ತದೆ. ಸೋಂಕಿತರಿಗೆ ತಜ್ಞ ವೈದ್ಯರಿಂದ ಸಮಾಲೋಚನೆ ವ್ಯವಸ್ಥೆ ಸಹ ಮಾಡಲಾಗುತ್ತಿದೆ.