ಪ್ರತಿ ಜಿಲ್ಲೆಯಲ್ಲೂ 100 ಎಕರೆ ವಿಸ್ತೀರ್ಣದ ಗೋಶಾಲೆ : ಚವ್ಹಾಣ್
- ಪ್ರತಿ ಜಿಲ್ಲೆಯಲ್ಲಿ 60ರಿಂದ 100 ಎಕರೆ ಜಾಗದಲ್ಲಿ ಸರ್ಕಾರಿ ಗೋ ಶಾಲೆ
- ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿಕೆ
ಚಿತ್ರದುರ್ಗ (ಆ.29): ಪ್ರತಿ ಜಿಲ್ಲೆಯಲ್ಲಿ 60ರಿಂದ 100 ಎಕರೆ ಜಾಗದಲ್ಲಿ ಸರ್ಕಾರಿ ಗೋ ಶಾಲೆಗಳನ್ನು ನಿರ್ಮಿಸಲಾಗುತ್ತದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.
"
ನಗರದ ಹೊರವಲಯದಲ್ಲಿ ಇರುವ ಆದಿಚುಂಚನಗಿರಿ ಗೋಶಾಲೆಗೆ ಶನಿವಾರ ಭೇಟಿ ನೀಡಿ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದ 30 ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆ ನಿರ್ಮಾಣಕ್ಕೆ ಈಗಾಗಲೇ ಕ್ಯಾಬಿನೆಟ್ ಅನುಮೋದನೆ ದೊರೆತಿದೆ. ಎಲ್ಲ ಜಿಲ್ಲಾಧಿಕಾರಿಗಳಿಗೂ ಗೋಮಾಳ ಜಾಗವನ್ನು ಗುರುತಿಸಿ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಯಾವ ಸ್ಥಳ ಸೂಕ್ತ ಎಂದು ಆಯ್ಕೆ ಮಾಡಿದ ಬಳಿಕ ಬರೋಬ್ಬರಿ 100 ಎಕರೆ ಜಾಗದಲ್ಲಿ ಸಕಲ ಸೌಲಭ್ಯದ ಗೋಶಾಲೆ ನಿರ್ಮಿಸಲಾಗುತ್ತದೆ. ಖಾಸಗಿ ಗೋಶಾಲೆಗಳಿದ್ದರೂ ಸರ್ಕಾರದಿಂದ ಪ್ರತ್ಯೇಕವಾಗಿ ನಿರ್ಮಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಪಶು ಸಹಾಯವಾಣಿಗೆ ಒಂದೇ ತಿಂಗಳಲ್ಲಿ 9000 ಕರೆ
ಪಶುಗಳ ಚಿಕಿತ್ಸೆಗೆ ಯಾವುದೇ ರೀತಿಯ ಶುಲ್ಕ ನಿಗಧಿ ಮಾಡುವ ಚಿಂತನೆ ನಡೆದಿಲ್ಲ. ಕೇಂದ್ರ, ರಾಜ್ಯ ಸರ್ಕಾರದಿಂದ ನೀಡುವ ಎಲ್ಲ ಲಸಿಕೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಜತೆಗೆ ಖಾಸಗೀಕರಣದ ವಿಷಯ ಸತ್ಯಕ್ಕೆ ದೂರವಾದದ್ದು. ಗೋಮಾತೆ ರಕ್ಷಣೆ ಸರ್ಕಾರದ ಹೊಣೆ. ಕಳೆದ ಸರ್ಕಾರದಲ್ಲಿ ಜಾರಿಯಾಗಿದ್ದ ಪಶು ಭಾಗ್ಯ ಯೋಜನೆಯನ್ನು ರದ್ದು ಮಾಡಿಲ್ಲ. ಆದರೆ ಯಾವುದೇ ಚಟುವಟಿಕೆ ಸದ್ಯಕ್ಕೆ ನಡೆದಿಲ್ಲ. ಅದರ ಬದಲು ಬೇರೆ ಯೋಜನೆಯನ್ನು ಜಾರಿಗೊಳಿಸುವ ಚಿಂತನೆ ನಡೆಯುತ್ತಿದೆ ಎಂದು ಹೇಳಿದರು.