ತುಮಕೂರು: ಶಿವೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಪುಣ್ಯಾರಾಧನೆ ಅಂಗವಾಗಿ ಸಿದ್ಧಗಂಗಾ ಮಠದ 10 ಸಾವಿರ ಮಂದಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಾಮೂಹಿಕ ಕೇಶಮುಂಡನ ಮಾಡಲು ಅಖಿಲ ಕರ್ನಾಟಕ ಸವಿತಾ ಸಮಾಜ ಯುವಕರ ಸಂಘ ಮುಂದೆ ಬಂದಿದ್ದಾರೆ. 

ಮಂಗಳವಾರ ಸಿದ್ಧಗಂಗಾ ಮಠದ ಆವರಣದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 1500 ಮಂದಿ ಕಾರ್ಯಕರ್ತರು ಬೆಳಿಗ್ಗೆ 6 ಗಂಟೆಯಿಂದ ರಾತ್ರಿಯವರೆಗೂ ಸಾಮೂಹಿಕ ಕೇಶ ಮುಂಡನ ಮಾಡಲಿದ್ದಾರೆ. 

ಸಂಘದ ಸ್ಥಾಪಕ ಅಧ್ಯಕ್ಷ ವಿ. ಲಕ್ಷ್ಮೇ ಪ್ರಸನ್ನ ಅವರು ಸಿದ್ಧಗಂಗಾ ಕಿರಿಯ ಶ್ರೀಗಳಿಗೆ ಕೇಶಮುಂಡನ ಮಾಡುವ ಬಗ್ಗೆ ಮನವಿ ಸಲ್ಲಿಸಿದ್ದು ಸಿದ್ಧಲಿಂಗ ಸ್ವಾಮೀಜಿ ಅವರು ಕೂಡ ಒಪ್ಪಿಗೆ ನೀಡಿದ್ದಾರೆ. ಭಾರತದಲ್ಲೇ ಇದೊಂದು ಅತಿ ದೊಡ್ಡ ಕಾರ್ಯವಾಗಿದ್ದು ಕೇಶಮುಂಡನ ಕಾರ್ಯದ ಮೂಲಕ ಸೇವೆ ಮಾಡುವ ಭಾಗ್ಯ ನಮ್ಮದಾಗಿದೆ ಎಂಬುದು ಯುವಕರ ಸಂಘದವರ ಅಭಿಪ್ರಾಯವಾಗಿದೆ.