ಬೆಂಗಳೂರು :  ‘ನಮ್ಮ ಮೆಟ್ರೋ’ ಸಂಸ್ಥೆಗೆ ಕೆಎಸ್‌ಐಎಸ್‌ಎಫ್‌ನ (ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ) ಒಂದು ಪೂರ್ಣ ಪ್ರಮಾಣದ 1350 ಮಂದಿಯುಳ್ಳ ಬೆಟಾಲಿಯನ್‌ ಅನ್ನು ಸೃಜಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ರಾಜ್ಯ ಸರ್ಕಾರ ಅನುಮೋದನೆ ನೀಡಿರುವ ಒಂದು ಪೂರ್ಣ ಪ್ರಮಾಣದ ಬೆಟಾಲಿಯನ್‌ನಲ್ಲಿ 1350 ಮಂದಿ ಸಿಬ್ಬಂದಿ ಇರಲಿದ್ದು, ಮೆಟ್ರೋ ಸಂಸ್ಥೆಯೇ ಈ ಸಿಬ್ಬಂದಿಗೆ ಇನ್ನು ಮುಂದೆ ವೇತನ, ಭತ್ಯ ಭರಿಸಲಿದೆ. ಪ್ರಸ್ತುತ ಕೆಎಸ್‌ಆರ್‌ಪಿ, ಸಿಎಆರ್‌, ಡಿಎಆರ್‌ ಮತ್ತು ಐಆರ್‌ಬಿ ಘಟಕಗಳಿಂದ ಅಧಿಕಾರಿ ಅಥವಾ ಸಿಬ್ಬಂದಿಗಳನ್ನು ಬಂದೋಬಸ್‌್ತ, ವಿವಿಐಪಿ ಭದ್ರತೆ, ಗನ್‌ ಮ್ಯಾನ್‌ ಮತ್ತು ಇತರೆ ಕರ್ತವ್ಯಗಳಲ್ಲದೆ, ವಿಶೇಷ ಘಟಕಗಳಿಗೂ ಸಹ ನಿಯೋಜಿಸಲಾಗುತ್ತಿತ್ತು. ಇದರಿಂದ ಈ ಘಟಕಗಳಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಸಂಸ್ಥೆಗೆ ಭದ್ರತೆ ಒದಗಿಸುವುದು ಕಷ್ಟವಾಗುತ್ತಿತ್ತು. ಹೀಗಾಗಿ ನಮ್ಮ ಮೆಟ್ರೋ ಸಂಸ್ಥೆಗೆ ಕೆಎಸ್‌ಐಎಸ್‌ಎಫ್‌ನ ಒಂದು ಪೂರ್ಣ ಪ್ರಮಾಣದ ಬೆಟಾಲಿಯನ್‌ ವಿವಿಧ ದರ್ಜೆಯ ಒಟ್ಟು 1350 ಹುದ್ದೆಗಳ ಸೃಜಿಸುವಂತೆ ಮನವಿ ಮಾಡಿದ್ದರು.

ಇದಲ್ಲದೆ, ವಿದ್ಯುತ್‌ ಉತ್ಪಾದನಾ ಕೇಂದ್ರಗಳ ಭದ್ರತೆಗಾಗಿ ಒಂದು ಪಡೆ ಇರುತ್ತದೆ. ಕರ್ನಾಟಕ ಪೊಲೀಸ್‌ ಅಕಾಡೆಮಿ, ಆಡಳಿತ ತರಬೇತಿ ಸಂಸ್ಥೆ ಹಾಗೂ ಧಾರವಾಡ ಹೈಕೋರ್ಟ್‌ ಪೀಠ, ಮೈಸೂರು ಅರಮನೆ, ಖಾಸಗಿ ಸಂಸ್ಥೆಗಳಾದ ಮಂಗಳೂರಿನ ಇಸ್ಫೋಸಿಸ್‌, ಬೆಂಗಳೂರಿನ ಟಫ್‌ರ್‍ ಕ್ಲಬ್‌ ಹಾಗೂ ಆರ್‌ಬಿಐನ ಮಾರ್ಗಸೂಚಿಯಂತೆ ರಾಜ್ಯದಲ್ಲಿನ ವಿವಿಧ ಬ್ಯಾಂಕ್‌ಗಳಿಗೆ ಒಂದು ಭದ್ರತೆ ಪಡೆಯ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ 4,5 ಮತ್ತು 6ನೇ ಬೆಟಾಲಿಯನ್‌ಗಳನ್ನು ಹೊಸದಾಗಿ ಸೃಜಿಸಲು ಮಂಜೂರಾತಿ ನೀಡುವಂತೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕಿ ನೀಲಮಣಿ ಎನ್‌.ರಾಜು ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

ಈ ಪೈಕಿ ಮೆಟ್ರೋಗೆ ಪೂರ್ಣ ಪ್ರಮಾಣದ ಕೆಎಸ್‌ಐಎಸ್‌ಎಫ್‌ ಬೆಟಾಲಿಯನ್‌ ಸೃಜಿಸಲು ಸರ್ಕಾರ ಅಸ್ತು ಎಂದಿದೆ.

ವಿವಿಧ ದರ್ಜೆಯ ಸಿಬ್ಬಂದಿ

ಕಮಾಂಡೆಂಟ್‌ 1, ಡೆಪ್ಯೂಟಿ ಕಮಾಂಡೆಂಟ್‌ 2, ಅಸಿಸ್ಟೆಂಟ್‌ ಕಮಾಂಡೆಂಟ್‌ 5, ಪೊಲೀಸ್‌ ಇನ್ಸ್‌ಪೆಕ್ಟರ್‌ 10, ಪಿಎಸ್‌ಐ 93, ಎಎಸ್‌ಐ 51, ಹೆಡ್‌ಕಾನ್ಸ್‌ಟೇಬಲ್‌ 65, ಕಾನ್ಸ್‌ಟೇಬಲ್‌ 1018, ಅನುಯಾಯಿಗಳು 105 ಹುದ್ದೆಗಳನ್ನು ಸೃಜಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.