ಪಿಡಿಒ ಪರೀಕ್ಷೆ ಗೊಂದಲ: ಮುಖ್ಯಮಂತ್ರಿಗೇ ತಪ್ಪು ಮಾಹಿತಿ ನೀಡಿತೇ ಕೆಪಿಎಸ್‌ಸಿ?
ಸೋರಿಕೆ ಸುದ್ದಿ ಹಬ್ಬಿಸಿದ ಕೊಠಡಿಯೊಂದರ 24 ವಿದ್ಯಾರ್ಥಿಗಳ ಪೈಕಿ 12 ವಿದ್ಯಾರ್ಥಿಗಳ ಮೇಲೆ ಪ್ರತಿಭಟನೆ- ಪ್ರಚೋದನೆ ದೂರಿನಡಿ 12 ಪ್ರಕರಣ ದಾಖಲಿಸಿ ದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಇದರ ಸಮಗ್ರ ತನಿಖೆಗೆ ಕೆಪಿಎಸ್‌ಸಿ ಮೂವರು ಸದಸ್ಯರ ಉಪ ಸಮಿತಿ ರಚಿಸಿದ್ದು, ಅದು ನೀಡುವ ವರದಿಯಂತೆ ಕ್ರಮ ಕೈಗೊಳ್ಳಲಾಗುವುದು ಎಂದ ಸಿಎಂ ಸಿದ್ದರಾಮಯ್ಯ
ಯಾದಗಿರಿ(ಡಿ.13): ರಾಯಚೂರು ಜಿಲ್ಲೆ ಸಿಂಧನೂರಿನ ಸರ್ಕಾರಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನ.17ರಂದು ಪಿಡಿಒ ಪರೀಕ್ಷೆ ವೇಳೆ ಉಂಟಾಗಿದ್ದ ಗೊಂದಲದ ವಾಸ್ತವಾಂಶವನ್ನು ಮರೆಮಾಚಿದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ), ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಪ್ಪು ಮಾಹಿತಿ ನೀಡಿದೆಯೇ?. ತಮ್ಮ ತಲೆದಂಡ ಉಳಿಸಿಕೊಳ್ಳಲು ಅಧಿಕಾರಿಗಳು ಸದನದಲ್ಲಿ ಸಿಎಂ ಮೂಲಕ ಸುಳ್ಳು ಹೇಳಿಸಿದರೇ?.
ಅಂದಲ್ಲಿ ಪಿಡಿಒ ಪರೀಕ್ಷೆ ವೇಳೆ, ನಿಗದಿತ ಅವಧಿ ಮೀರಿ ಸುಮಾರು 20-25 ನಿಮಿಷಗಳ ಕಾಲ ಪ್ರಶ್ನೆ ಪತ್ರಿಕೆ ನೀಡುವಲ್ಲಾದ ವಿಳಂಬ, ಪ್ರಶ್ನೆ ಪತ್ರಿಕೆ ಬಂಡಲ್‌ಗಳು ಮೊದಲೇ ಹರಿದಿದ್ದ. ಇದನ್ನು ಪ್ರಶ್ನಿಸಿದ್ದ 12 ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿರುವ ವಿಚಾರವಾಗಿ ಗುರುವಾರ ನಡೆದ ಅಧಿವೇಶನದಲ್ಲಿ ಪರಿಷತ್ತಿನಲ್ಲಿ ಸದಸ್ಯ ಶಶೀಲ್ ಜಿ. ನಮೋಶಿ ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ - 60 ಪಿಡಿಒ ಪರೀಕ್ಷೆ ಗೊಂದಲ ಕುರಿತು ಪರಿಷತ್ತಿನಲ್ಲಿ ಗುರುವಾರ ಶಶಿಲ್ ನಮೋಶಿ ಪ್ರಶ್ನಿಸಿದರು. (884)ಗೆ ಸಿಎಂ ನೀಡಿದ 'ಸಿದ್ದ' ಉತ್ತರ, ನೊಂದ ಅಭ್ಯರ್ಥಿಗಳ ವಲಯದಲ್ಲಿ ಆಕ್ರೋಶ ಮೂಡಿಸಿದೆ.
ಪ್ರಶ್ನೆ ಪತ್ರಿಕೆಗಳನ್ನುನೀಡುವಲ್ಲಿ ಯಾವುದೇ ವಿಳಂಬ ಆಗಿಲ್ಲ, ಬೆಳಗ್ಗೆ 9.26ಕ್ಕೆ ಪ್ರಶ್ನೆಪತ್ರಿಕೆ ನೀಡಲಾಗಿದೆ. ಅಭ್ಯರ್ಥಿಗಳ ಸಮ್ಮುಖದಲ್ಲೇ ಬಂಡಲ್ ತೆರೆಯಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಆಗಿಲ್ಲ ಎಂದು ಉತ್ತರಿಸಿರುವ ಸಿಎಂ, ಸೋರಿಕೆ ಸುದ್ದಿ ಹಬ್ಬಿಸಿದ ಕೊಠಡಿಯೊಂದರ 24 ವಿದ್ಯಾರ್ಥಿಗಳ ಪೈಕಿ 12 ವಿದ್ಯಾರ್ಥಿಗಳ ಮೇಲೆ ಪ್ರತಿಭಟನೆ- ಪ್ರಚೋದನೆ ದೂರಿನಡಿ 12 ಪ್ರಕರಣ ದಾಖಲಿಸಿ ದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಇದರ ಸಮಗ್ರ ತನಿಖೆಗೆ ಕೆಪಿಎಸ್‌ಸಿ ಮೂವರು ಸದಸ್ಯರ ಉಪ ಸಮಿತಿ ರಚಿಸಿದ್ದು, ಅದು ನೀಡುವ ವರದಿಯಂತೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಆದರೆ, ತಮ್ಮಿಂದಾದ ತಪ್ಪಿನಿಂದ ತಪ್ಪಿಸಿಕೊಳ್ಳಲು ಕೆಪಿಎಸ್‌ಸಿ ಹಾಗೂ ಪರೀಕ್ಷಾ ಅಧಿಕಾರಿಗಳು ಸಿಎಂ ಅವರಿಗೇ ತಪ್ಪು ಮಾಹಿತಿ ನೀಡಿದ್ದಾರೆ. ನಿಗದಿತ ಅವಧಿ ಮೀರಿ ಸುಮಾರು 25-30 ನಿಮಿಷಗಳ ಕಳೆದರೂ ಕೆಲವರಿಗೆ ಮಾತ್ರ ಪ್ರಶ್ನೆಪತ್ರಿಕೆ ನೀಡದಿರುವುದನ್ನು ಹಾಗೂ ಪ್ರಶ್ನೆ ಪತ್ರಿಕೆ ಬಂಡಲ್ ಮೊದಲೇ ತೆರೆದಿರುವ ಮುಂತಾದ ಅವ್ಯವಸ್ಥೆ ಬಗ್ಗೆ ಅಭ್ಯರ್ಥಿಗಳು ಪ್ರಶ್ನಿಸಿದ್ದಾರೆ. ಲೋಪಗಳ ಬಗ್ಗೆ ಸಾಕಷ್ಟು ವೀಡಿಯೋ ಸಾಕ್ಷಿಗಳಿದ್ದಾಗ್ಯೂ ಸಹ, ಅಂತಹುದ್ದೇನೂ ಪ್ರಮಾದ ನಡೆದೇ ಇಲ್ಲ ಎಂದು ಕೆಪಿಎಸ್‌ಸಿ ಹಾಗೂ ಪರೀಕ್ಷಾ ಅಧಿಕಾರಿಗಳು ಸಿಎಂ ಅವರಿಗೇ ದಾರಿ ಆರೋಪಿಸಿದ್ದಾರೆ.
ಇದು ಕೇವಲ ಆ ಒಂದು ಕೊಠಡಿಯಲ್ಲಷ್ಟೇ ನಡೆದಿಲ್ಲ, ಎಲ್ಲ 35 ಕೊಠಡಿಗಳಲ್ಲಿ ಇದೇ ತೆರನಾಗಿ ಆಗಿದ್ದರಿಂದ ಪರೀಕ್ಷಾ ಅಧಿಕಾರಿಗಳು ನೀಡಿದ ಸಮಜಾಯಿಷಿ ಒಪ್ಪದೆ, ತಮಗಾದ ಅನ್ಯಾಯದ ವಿರುದ್ಧ ಹೊರಬಂದು ಸಾವಿರಾರು ಅಭ್ಯರ್ಥಿಗಳು ಪ್ರತಿಭಟಿಸಿದ್ದಾರೆ. ರಾಜ್ಯಾದ್ಯಂತ ಇದು ಸುದ್ದಿಯಾಗುತ್ತಲೇ ಎಚ್ಚೆತ್ತ ಪರೀಕ್ಷಾ ಕೇಂದ್ರದ ಅಧಿಕಾರಿಗಳು ತಮ್ಮ ತಪ್ಪನ್ನು ಮರೆ ಮಾಚಲು ಅಭ್ಯರ್ಥಿಗಳ ಮೇಲೆ ದೂರು ದಾಖಲಿಸಿದ್ದಾರೆ ಎಂದು ನೊಂದ ಅಭ್ಯರ್ಥಿ ವೆಂಕಟೇಶ್ ಹೇಳಿದ್ದಾರೆ.
ಪ್ರಶ್ನೆ ಪತ್ರಿಕೆ ತಡವಾಗಿ ಬಂದಿದ್ದಕ್ಕೆ ಕೊಠಡಿ ಮೇಲ್ವಿಚಾರಕರೇ ಹೇಳಿದ್ದ ವಿಡಿಯೋ ದೃಶ್ಯಾವಳಿಗಳಿವೆ. ಒಎಂಆರ್‌ಶೀಟ್‌ನಲ್ಲಿ ಸಹಿ ಗೊಂದಲ ಬಗ್ಗೆ ಅಧಿಕಾರಿಗಳೇ ಸಹಿ ಮಾಡಿ ಪತ್ರ ನೀಡಿದ್ದಾರೆ. ಕೊಠಡಿಗೆ ತಂದು ಎಲ್ಲರ ಸಮ್ಮುಖದಲ್ಲಿ ಪ್ರಶ್ನೆ ಪತ್ರಿಕೆಗಳು ತೆರೆಯುವ ಬದಲು, ಆ ಬಂಡಲ್ ಒಡೆದಿರುವ ಬಗ್ಗೆ ಅಭ್ಯರ್ಥಿಗಳ ಪ್ರಶ್ನೆಗೆ ಆತಂಕಗೊಂಡ ಅಧಿಕಾರಿಗಳು ಇದೀಗ ಬಡ ಅಭ್ಯರ್ಥಿಗಳ ವಿರುದ್ಧವೇ ದೂರು ದಾಖಲಿಸಿರುವುದು ಅನ್ಯಾಯ ಎಂದು ನೊಂದ ಅಭ್ಯರ್ಥಿ ಬಸವರಾಜ್ ತಿಳಿಸಿದ್ದಾರೆ.