ಕೆಪಿಎಸ್ಸಿಯಿಂದ ನೇಮಕಾತಿ ಪ್ರಕ್ರಿಯೆಯಲ್ಲಿರುವ ಲೋಕೋಪಯೋಗಿ ಇಲಾಖೆಯ 330 ಕಿರಿಯ ಎಂಜಿನಿಯರ್‌ಗಳ ಅರ್ಹತಾ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಸಚಿವ ಸಿ.ಸಿ.ಪಾಟೀಲ ವಿಧಾನ ಸಭೆಯಲ್ಲಿ ಹೇಳಿದ್ದಾರೆ.

ವಿಧಾನಸಭೆ (ಡಿ27): ಕೆಪಿಎಸ್‌ಸಿಯಿಂದ ನೇಮಕಾತಿ ಪ್ರಕ್ರಿಯೆಯಲ್ಲಿರುವ ಲೋಕೋಪಯೋಗಿ ಇಲಾಖೆಯ 330 ಕಿರಿಯ ಎಂಜಿನಿಯರ್‌ಗಳ ಅರ್ಹತಾ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಸಚಿವ ಸಿ.ಸಿ.ಪಾಟೀಲ ತಿಳಿಸಿದರು. ಶೂನ್ಯವೇಳೆಯಲ್ಲಿ ಶಾಸಕ ಎಸ್‌. ಸುರೇಶಕುಮಾರ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಕಿರಿಯ ಎಂಜಿನಿಯರ್‌ಗಳ ನೇಮಕಾತಿಯಲ್ಲಿ ಯಾವುದೇ ಹಗರಣಗಳಿಗೆ ಅವಕಾಶವಾಗದಂತೆ ಎಚ್ಚರ ವಹಿಸಲಾಗಿದೆ. ಅರ್ಹತಾ ಪಟ್ಟಿಯನ್ನು ಆದಷ್ಟುಬೇಗ ಪ್ರಕಟಿಸಲಾಗುವುದು ಎಂದರು.

ಶಾಸಕ ಸುರೇಶಕುಮಾರ ಮಾತನಾಡಿ, 2019ರಲ್ಲೇ ಕಿರಿಯ ಎಂಜಿನಿಯರ್‌ಗಳ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ನಂತರ ಅಧಿಸೂಚನೆಯನ್ನು ಸರ್ಕಾರ ರದ್ದುಪಡಿಸಿತ್ತು. ಬಳಿಕ 2021ರಲ್ಲಿ ಮತ್ತೆ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿ ಪರೀಕ್ಷೆಯನ್ನು ನಡೆಸಿದೆ. ಆದರೆ ಈವರೆಗೂ ಅರ್ಹತಾ ಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿಲ್ಲ. ಇದರಿಂದ ಉದ್ಯೋಗ ಬಯಸುತ್ತಿರುವ ಯುವ ಸಮೂಹಕ್ಕೆ ನಿರಾಶೆಯಾಗುತ್ತಿದೆ. ಆದಷ್ಟುಬೇಗನೆ ಅರ್ಹತಾ ಪಟ್ಟಿಬಿಡುಗಡೆ ಮಾಡುವಂತೆ ಕೋರಿದರು. ಆಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ವಾಯತ್ತ ಸಂಸ್ಥೆಯಾಗಿರುವ ಕೆಪಿಎಸ್ಸಿ ವಿಶ್ವಾಸಾರ್ಹತೆ ಹೆಚ್ಚಿಸುವ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು.

2015ರವರೆಗಿನ ಖಾಲಿ ಬೋಧಕ ಹುದ್ದೆಗೆ ಶೀಘ್ರವೇ ನೇಮಕಾತಿ: ಸಚಿವ ಬಿ ಸಿ ನಾಗೇಶ್‌

ಬಾಗಲಕೋಟೆಯಲ್ಲಿ ಡಿ.30ರಂದು ಉದ್ಯೋಗ ಮೇಳ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು, ಹಳೆ ಕೋರ್ಚ್‌ ಆವರಣ, ಕೆನರಾ ಬ್ಯಾಂಕ್‌ ಎದುರುಗಡೆ, ಬಾಗಲಕೋಟೆ ಇಲ್ಲಿ ವಿವಿಧ ಖಾಸಗಿ ಕಂಪನಿಗಳ ಹಲವಾರು ಹುದ್ದೆಗಳ ನೇಮಕಾತಿಗಾಗಿ ಡಿ.30ರಂದು ಬೆಳಗ್ಗೆ 9.30ರಿಂದ ಸಂಜೆ 4 ಗಂಟೆಯವರೆಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ಎಸ್ಸೆಸ್ಸೆಲ್ಸಿ, ಐಟಿಐ, ಪಿಯುಸಿ, ಡಿಪ್ಲೊಮಾ, ಪದವಿ ಹಾಗೂ ಸ್ನಾತಕೋತ್ತರ ಪದವಿ ಹೊಂದಿರುವ, 18ರಿಂದ 35 ವರ್ಷ ವಯೋಮಿತಿಯವರು ಉದ್ಯೋಗಮೇಳದಲ್ಲಿ ಭಾಗವಹಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೆಟಾ ಮತ್ತು ಅಂಕ ಪಟ್ಟಿಗಳ ಝರಾಕ್ಸ್‌ ಪ್ರತಿಗಳೊಂದಿಗೆ ಹಾಜರಾಗಬಹುದು. ಮಾಹಿತಿಗೆ ದೂ: 08354-235337, ಮೊ: 7676692029 ಅಥವಾ 9483880224 ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾ​ಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

10 ಸಾವಿರ ಯುವಕರಿಗೆ ಉದ್ಯೋಗ ಪತ್ರ ನೀಡಿದ ಸಿಎಂ

ಫೀಲ್ಡ್‌ ಅಸಿಸ್ಟಂಟ್‌ ಹುದ್ದೆ ನೇಮಕಾತಿಗೆ ಸಂದರ್ಶನ
ವಿಜಯಪುರ: ವಿಜಯಪುರ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಫೀಲ್ಡ್‌ ಅಸಿಸ್ಟಂಟ್‌ ಹುದ್ದೆಯ ತಾತ್ಕಾಲಿಕ ನೇಮಕಾತಿಗೆ ಜ.6ರಂದು ಬೆಳಗ್ಗೆ 10 ಗಂಟೆಗೆ ವಿಜಯಪುರದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕರ ಕಚೇರಿಯಲ್ಲಿ ಸಂದರ್ಶನ ಏರ್ಪಡಿಸಲಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಶ್ವವಿದ್ಯಾಲಯ ಧಾರವಾಡ, ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ ವಿಜಯಪುರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.