ಮುಂಬೈ, [ಡಿ.20]: ಭಾರತದ ಮಹಿಳಾ ಕ್ರಿಕೆಟ್ ತಂಡದ ಕೋಚ್‌ ಸ್ಥಾನಕ್ಕೆ ಭಾರತದ ಮಾಜಿ ಆರಂಭಿಕ ಆಟಗಾರರಾದ ಡಬ್ಲ್ಯೂವಿ ರಾಮನ್ ಅವರು ಆಯ್ಕೆಯಾಗಿದ್ದಾರೆ. 

ಗುರುವಾರ (ಡಿಸೆಂಬರ್ 20) ಭಾರತದ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಕರೆಯಲಾದ ಸಂದರ್ಶನದಲ್ಲಿ ವಿದೇಶಿ ಅಭ್ಯರ್ಥಿಗಳೂ ಸೇರಿ ಒಟ್ಟು 11 ಮಂದಿ ಪಾಲ್ಗೊಂಡಿದ್ದರು. 

ಮಾಜಿ ಆಟಗಾರ ಕಪಿಲ್‌ದೇವ್, ಆಂಶುಮಾನ್ ಗಾಯಕ್ವಾಡ್ ಮತ್ತು ಶಾಂತ ರಂಗಸ್ವಾಮಿ ಅವರಿದ್ದ ತಂಡ ಸಂದರ್ಶನವನ್ನು ನಡೆಸಿತ್ತು. 

ಸಂದರ್ಶನದ ಬಳಿಕ ಪ್ರಕಟಿಸಲಾದ ಮೂವರ ಶಾರ್ಟ್ ಲಿಸ್ಟ್ ನಲ್ಲಿ ಭಾರತದ ಪುರುಷರ ತಂಡವನ್ನು ನಿಭಾಯಿಸಿದ ಅನುಭವವಿದ್ದ ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಗ್ಯಾರಿ ಕಸ್ಟರ್ಸ್, ಡಬ್ಲ್ಯೂವಿ ರಾಮನ್ ಮತ್ತು ಭಾರತದ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ಹೆಸರುಗಳಿದ್ದವು. 

ಆದರೆ ಅಂತಿಮವಾಗಿ ರಾಮನ್ ಅವರನ್ನು ಆಯ್ಕೆ ಮಾಡಲಾಗಿದ್ದು, ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿಯು ಶುಕ್ರವಾರ ಹೊಸ ಕೋಚ್​ ಹೆಸರನ್ನು ಅಧಿಕೃತವಾಗಿ ಘೋಷಿಸಲಿದೆ.

ರಾಮನ್​ ಭಾರತದ ಪರ 11 ಟೆಸ್ಟ್​ ಮತ್ತು 27 ಏಕದಿನ ಪಂದ್ಯಗಳನ್ನಾಡಿದ್ದಾರೆ. ಅವರು ತಮಿಳುನಾಡು ಮತ್ತು ಬಂಗಾಳ ರಣಜಿ ತಂಡಗಳ ಕೋಚ್​ ಆಗಿದ್ದರು ಮತ್ತು ಭಾರತ ಅಂಡರ್​-19 ತಂಡದೊಂದಿಗೆ ಕಾರ್ಯನಿರ್ವಹಿಸಿದ್ದಾರೆ.