ಪೊಲೀಸ್‌ ತನಿಖೆ ಬಗ್ಗೆ ಮತ್ತೆ ರೆಸ್ಲ​ರ್‌​ಗಳ ಅಪ​ಸ್ವ​ರ! ರಾಜಿಯಾಗುವಂತೆ ಒತ್ತ​ಡ​: ಸಾಕ್ಷಿ ಮಲಿಕ್ ಗಂಭೀರ ಆರೋಪ

ಬ್ರಿಜ್‌ಭೂಷಣ್‌ ಸಿಂಗ್ ಎದುರು ಚುರುಕುಗೊಂಡ ತನಿಖೆ
ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ ವಿರುದ್ದ 2 ಎಫ್‌​ಐ​ಆ​ರ್‌ ದಾಖ​ಲಾ​ಗಿ​ದೆ
ರಾಜಿ ಮಾಡಿಕೊಳ್ಳುವಂತೆ ನಮ್ಮ ಮೇಲೆ ಭಾರೀ ಒತ್ತಡವಿದೆ ಎಂದ ಸಾಕ್ಷಿ ಮಲಿಕ್

Wrestlers Protest Pressure On Us To Compromise Says Sakshi Malik kvn

ನವ​ದೆ​ಹ​ಲಿ(ಜೂ.11): ಲೈಂಗಿಕ ಕಿರು​ಕುಳ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಭಾರ​ತೀಯ ಕುಸ್ತಿ ಫೆಡ​ರೇ​ಶನ್‌(ಡ​ಬ್ಲ್ಯು​ಎ​ಫ್‌​ಐ) ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌ ವಿರು​ದ್ಧದ ಪೊಲೀ​ಸರ ತನಿಖೆ ಬಗ್ಗೆ ದೇಶದ ಅಗ್ರ ಕುಸ್ತಿ​ಪ​ಟು​ಗಳು ಮತ್ತೊಮ್ಮೆ ಅಪ​ಸ್ವರ ಎತ್ತಿ​ದ್ದಾರೆ. ಈ ಬಾರಿ ಕುಸ್ತಿ​ಪ​ಟು​ಗಳ ಅಸ​ಮಾ​ಧಾ​ನ​ಕ್ಕೆ ಕಾರ​ಣ​ವಾ​ಗಿ​ದ್ದು ಬ್ರಿಜ್‌ಭೂಷಣ್‌ ತಮ್ಮ ಮನೆ​ಯಲ್ಲೇ ಇರು​ವಾಗ ಅವರ ಮನೆ ಆವರಣದಲ್ಲೇ ಇರುವ ಕಚೇರಿಗೆ ದೂರು​ದಾ​ರೆ​ಯನ್ನು ಕರೆ​ದೊಯ್ದು ಸ್ಥಳ ಪರಿಶೀಲನೆ ನಡೆ​ಸಿ​ದ್ದು.

ಬ್ರಿಜ್‌ ವಿರುದ್ಧ ದೆಹಲಿ ಪೊಲೀ​ಸ​ರಿಗೆ ಅಪ್ರಾಪ್ತೆ ಸೇರಿ​ದಂತೆ 7 ಮಂದಿ ದೂರು ದಾಖ​ಲಿ​ಸಿದ್ದು, 2 ಎಫ್‌​ಐ​ಆ​ರ್‌ ದಾಖ​ಲಾ​ಗಿ​ದೆ. ಈ ಬಗ್ಗೆ ತನಿಖೆ ಕೈಗೊಂಡಿ​ರುವ ಪೊಲೀ​ಸರು ಶುಕ್ರ​ವಾರ ದೂರು​ದಾರೆ ಕುಸ್ತಿ​ಪ​ಟು​ವೊ​ಬ್ಬ​ರನ್ನು ಬ್ರಿಜ್‌ರ ಅಧಿ​ಕೃ​ತ ಕಚೇ​ರಿ​ಗೆ ಕರೆ​ತಂದು ಸುಮಾರು ಒಂದೂ​ವ​ರೆ ಗಂಟೆ​ಗಳ ಕಾಲ ಘಟನೆ ಬಗ್ಗೆ ವಿವರ ಕೇಳಿ​ದ್ದರು. ಆದರೆ ಈ ಬಗ್ಗೆ ಕಿಡಿ​ಕಾ​ರಿ​ರುವ ಕುಸ್ತಿ​ಪಟು ಭಜ​ರಂಗ್‌ ಪೂನಿಯಾ, ‘ಬ್ರಿಜ್‌ ಮನೆ​ಯ​ಲ್ಲಿ​ದ್ದಾ​ಗಲೇ ದೂರು​ದಾ​ರೆ​ಯನ್ನು ಸ್ಥಳ ಪರಿ​ಶೀ​ಲ​ನೆಗೆ ಕರೆ​ದೊ​ಯ್ಯ​ಲಾ​ಗಿದೆ. ಸ್ಥಳಕ್ಕೆ ತೆರಳುವ ಮುನ್ನ ಕುಸ್ತಿ​ಪಟು, ಬ್ರಿಜ್‌ ಮನೆಯಲ್ಲಿ ಇದ್ದಾರಾ ಎಂದು ಪ್ರಶ್ನಿ​ಸಿ​ದಾಗ ಪೊಲೀ​ಸರು ಇಲ್ಲ ಎಂದು ಸುಳ್ಳು ಹೇಳಿ​ದ್ದಾರೆ. ಬಳಿಕ ಬ್ರಿಜ್‌ ಅಲ್ಲೇ ಇರು​ವುದು ತಿಳಿದು ದೂರುದಾರೆ ಹೆದರಿದ್ದಾಳೆ’ ಎಂದಿ​ದ್ದು, ಇಡೀ ವ್ಯವ​ಸ್ಥೆಯೇ ಬ್ರಿಜ್‌​ರನ್ನು ರಕ್ಷಿ​ಸು​ತ್ತಿದೆ ಎಂದು ಗಂಭೀರ ಆರೋಪ ಮಾಡಿ​ದ್ದಾರೆ.

ರಾಜಿಯಾಗುವಂತೆ ಒತ್ತ​ಡ​: ಸಾಕ್ಷಿ

ಪ್ರಕ​ರ​ಣ​ಕ್ಕೆ ಸಂಬಂಧಿ​ಸಿ​ದಂತೆ ರಾಜಿ ಮಾಡಿಕೊಳ್ಳುವಂತೆ ಭಾರೀ ಒತ್ತಡ ಇರು​ವು​ದಾಗಿ ಕುಸ್ತಿ​ಪಟು ಸಾಕ್ಷಿ ಮಲಿಕ್‌ ಆರೋ​ಪಿ​ಸಿ​ದ್ದಾರೆ. ‘ರಾಜಿ ಮಾಡಿಕೊಳ್ಳುವಂತೆ ನಮ್ಮ ಮೇಲೆ ಭಾರೀ ಒತ್ತಡವಿದೆ. ದೂರು ಹಿಂಪಡೆಯುವಂತೆ ಅಪ್ರಾಪ್ತೆಯ ತಂದೆ ಮೇಲೆಯೂ ಇನ್ನಿಲ್ಲದಂತೆ ಒತ್ತಡ ಹೇರಲಾಗಿದೆ. ಇದರಿಂದ ಅವರು ಖಿನ್ನತೆಗೆ ಒಳಗಾಗಿದ್ದಾರೆ. ಬ್ರಿಜ್‌ಭೂಷಣ್‌ರನ್ನು ಬಂಧಿ​ಸಿ​ದ್ದರೆ ಅಪ್ರಾ​ಪ್ತೆಯ ತಂದೆ ಹೇಳಿಕೆ ಬದ​ಲಿ​ಸು​ತ್ತಿ​ರ​ಲಿಲ್ಲ. ಬ್ರಿಜ್‌ ಬಂಧಿ​ಸದ ಹೊರತು ನಿಷ್ಪ​ಕ್ಷ​ಪಾತ ತನಿಖೆ ಸಾಧ್ಯ​ವಿ​ಲ್ಲ’ ಎಂದು ಸಾಕ್ಷಿ ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದ್ದಾ​ರೆ.

Wrestlers Protest: ರೆಸ್ಲರ್‌ಗಳಿಂದ ಏಷ್ಯನ್‌ ಗೇಮ್ಸ್‌ ಬಾಯ್ಕಾಟ್‌ ಬೆದರಿಕೆ!

ಬಂಧಿ​ಸ​ದಿ​ದ್ದ​ರೆ ಮತ್ತೆ ಸತ್ಯಾ​ಗ್ರ​ಹ: ಪೂನಿ​ಯಾ

ಇನ್ನು ಬ್ರಿಜ್‌​ರ​ನ್ನು ಶೀಘ್ರ ಬಂಧಿ​ಸ​ದಿ​ದ್ದರೆ ಮತ್ತೆ ಸತ್ಯಾಗ್ರಹ ಆರಂಭಿ​ಸು​ವು​ದಾಗಿ ಭಜ​ರಂಗ್‌ ಎಚ್ಚ​ರಿಕೆ ನೀಡಿ​ದ್ದಾರೆ. ಈ ಬಗ್ಗೆ ಮಾಧ್ಯ​ಮ​ಗ​ಳಿಗೆ ಪ್ರತಿ​ಕ್ರಿ​ಯಿ​ಸಿ​ರುವ ಅವರು, ‘ಜೂ.15ರೊಳಗೆ ಬ್ರಿಜ್‌​ರನ್ನು ಬಂಧಿ​ಸ​ಬೇಕು. ಇಲ್ಲ​ದಿ​ದ್ದರೆ ಜೂ.17ರಂದು ಜಂತರ್‌ಮಂತರ್‌ ಅಥವಾ ರಾಮ್‌​ಲೀಲಾ ಮೈದಾ​ನ​ದಲ್ಲಿ ಮತ್ತೆ ಹೋರಾಟ ಶುರು ಮಾಡು​ತ್ತೇವೆ. ಶೀಘ್ರ ಬಂಧಿ​ಸ​ದಿ​ದ್ದರೆ ಅಪ್ರಾ​ಪ್ತೆ​ಯಂತೆಯೇ ಇತ​ರರೂ ತಮ್ಮ ಹೇಳಿ​ಕೆ​ಗ​ಳನ್ನು ಬದ​ಲಿ​ಸುವಂತೆ ಬ್ರಿಜ್‌ ತಮ್ಮ ಪ್ರಭಾವ ಬಳಸಿ ಒತ್ತಡ ಹೇರ​ಬ​ಹುದು. ಈಗಾ​ಗಲೇ ಅಪ್ರಾ​ಪ್ತೆಯ ತಂದೆ ಕೂಡಾ ತಮಗೆ ಒತ್ತ​ಡ​ ಇರು​ವು​ದನ್ನು ಒಪ್ಪಿ​ದ್ದಾ​ರೆ. ಅವರ ವಿರುದ್ಧ ಕಠಿಣ ಜಾರ್ಜ್‌​ಶೀಟ್‌ ಸಲ್ಲಿ​ಕೆ​ಯಾ​ದರೆ ಮಾತ್ರ ಬಂಧಿ​ಸ​ಲು ಸಾಧ್ಯವಾಗಲಿದೆ’ ಎಂದು ಹೇಳಿ​ದ್ದಾ​ರೆ.

ಸಮಸ್ಯೆ ಬಗೆಹರಿದರಷ್ಟೇ ಏಷ್ಯಾ​ಡ್‌​ ಸ್ಪರ್ಧೆ​: ಸಾಕ್ಷಿ

ಕುಸ್ತಿ​ಪ​ಟು​ಗಳು ಏಷ್ಯ​ನ್‌ ಗೇಮ್ಸ್‌​ನಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದಾರೆ ಎಂಬು ಸುದ್ದಿ​ ಪ್ರಸಾರಗೊಂಡ ನಡು​ವೆಯೇ, ಎಲ್ಲಾ ಸಮ​ಸ್ಯೆ​ಗಳು ಬಗೆ​ಹ​ರಿ​ದ​ರಷ್ಟೇ ಕೂಟ​ದಲ್ಲಿ ಪಾಲ್ಗೊ​ಳ್ಳು​ವು​ದಾಗಿ ಸಾಕ್ಷಿ ಮಲಿಕ್‌ ಸ್ಪಷ್ಟ​ಪ​ಡಿ​ಸಿ​ದ್ದಾರೆ. ‘ನಾವು ಮಾನ​ಸಿಕ ಹಿಂಸೆ ಅನು​ಭ​ವಿ​ಸು​ತ್ತಿ​ದ್ದೇವೆ. ಇದ​ರಿಂದ ದಿನ​ದೂ​ಡು​ವುದೇ ಕಷ್ಟ​ವಾ​ಗು​ತ್ತಿದೆ. ಸಮ​ಸ್ಯೆ​ಗಳು ಬಗೆ​ಹ​ರಿದರಷ್ಟೇ ನಾವು ಏಷ್ಯಾ​ಡ್‌​ನಲ್ಲಿ ಸ್ಪರ್ಧಿಸು​ತ್ತೇ​ವೆ’ ಎಂದಿ​ದ್ದಾರೆ. ಏಷ್ಯನ್‌ ಗೇಮ್ಸ್‌ ಸೆಪ್ಟೆಂಬ​ರ್‌-ಅಕ್ಟೋ​ಬ​ರ್‌​ನಲ್ಲಿ ಚೀನಾ​ದಲ್ಲಿ ನಡೆ​ಯ​ಲಿದ್ದು, ಇದಕ್ಕೆ ಇದೇ ತಿಂಗ​ಳಾಂತ್ಯಕ್ಕೆ ಆಯ್ಕೆ ಟ್ರಯಲ್ಸ್‌ ನಡೆ​ಯುವ ಸಾಧ್ಯ​ತೆ​ಯಿದೆ.

Latest Videos
Follow Us:
Download App:
  • android
  • ios