ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಕ್ವಾರ್ಟರ್‌ಗೆ ಲವ್ಲೀನಾ, ಸಾಕ್ಷಿ
ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಲವ್ಲೀನಾ, ಸಾಕ್ಷಿ ಕ್ವಾರ್ಟರ್‌ಗೆ ಲಗ್ಗೆ
ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಲವ್ಲೀನಾ, ಮೆಕ್ಸಿಕೋದ ಬಾಕ್ಸರ್ ಎದುರು ಗೆಲುವು
ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಲವ್ಲೀನಾ ಪದಕ ಗೆಲ್ಲಲು ಇನ್ನೊಂದು ಹೆಜ್ಜೆ ಸಾಕು
ನವದೆಹಲಿ(ಮಾ.21): ಟೋಕಿಯೋ ಒಲಿಂಪಿಕ್ಸ್ ಕಂಚು ವಿಜೇತೆ ಲವ್ಲೀನಾ ಬೊರ್ಗೊಹೈನ್ ಹಾಗೂ ಸಾಕ್ಷಿ ಚೌಧರಿ ಇಲ್ಲಿ ನಡೆಯುತ್ತಿರುವ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಸೋಮವಾರ ನಡೆದ ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಲವ್ಲೀನಾ(75 ಕೆ.ಜಿ.) ಮೆಕ್ಸಿಕೋದ ವೆನೆಸ್ಸಾ ಒರ್ಟಿಜ್ ವಿರುದ್ಧ 5-0 ಅಂತರದಲ್ಲಿ ಗೆಲುವು ಸಾಧಿಸಿದರು. ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಲವ್ಲೀನಾ, ಪದಕದಿಂದ ಇನ್ನೊಂದು ಹೆಜ್ಜೆ ದೂರವಿದ್ದಾರೆ. ಇದೇ 52 ಕೆ.ಜಿ. ವಿಭಾಗದ ಪ್ರಿ ಕ್ವಾರ್ಟರ್‌ನಲ್ಲಿ ಸಾಕ್ಷಿ, ಕಜಕಸ್ತಾನದ ಝಝೀರಾ ಉರಕಬಯೆವಾ ವಿರುದ್ಧ 5-0ಯಲ್ಲಿ ಜಯಿಸಿದರು. ಆದರೆ 54 ಕೆ.ಜಿ. ವಿಭಾಗದ ಪ್ರಿ ಕ್ವಾರ್ಟರ್‌ನಲ್ಲಿ 19 ವರ್ಷದ ಪ್ರೀತಿ, ಕಳೆದ ವರ್ಷ 52 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಥಾಯ್ಲೆಂಡ್‌ನ ಜಿಟ್ಪೊಂಗ್ ಜುಟಮಸ್ ವಿರುದ್ಧ 3-4 ಅಂತರದಲ್ಲಿ ಸೋಲು ಕಂಡರು.
61 ದಿನ ಟರ್ಕಿಯಲ್ಲಿ ನೀರಜ್ ಚೋಪ್ರಾ ಅಭ್ಯಾಸ
ನವದೆಹಲಿ: ಒಲಿಂಪಿಕ್ ಚಿನ್ನ ವಿಜೇತ ಜಾವಲಿನ್ ಥ್ರೋ ಪಟು ನೀರಜ್ ಚೋಪ್ರಾ ಮುಂಬರುವ ಏಷ್ಯನ್ ಗೇಮ್ಸ್, ವಿಶ್ವ ಚಾಂಪಿಯನ್‌ಶಿಪ್ ಸ್ಪರ್ಧೆಗಳಿಗಾಗಿ ಏ.1ರಿಂದ ಮೇ 31ರ ವರೆಗೂ 61 ದಿನಗಳ ಕಾಲ ಟರ್ಕಿಯಲ್ಲಿ ಅಭ್ಯಾಸ ನಡೆಸಲಿದ್ದಾರೆ. ನೀರಜ್‌ರ ಅಭ್ಯಾಸಕ್ಕೆ ಕೇಂದ್ರ ಕ್ರೀಡಾ ಸಚಿವಾಲಯ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆ(ಟಾಫ್ಸ್) ಅಡಿ ಆರ್ಥಿಕ ನೆರವು ನೀಡಲಿದೆ ಎಂದು ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.
ಸೂರ್ಯನನ್ನು ಬದಿಗಿಟ್ಟು ಸಂಜುಗೆ ಅವಕಾಶ ನೀಡಿ: ವಾಸೀಂ ಜಾಫರ್ ಆಗ್ರಹ
ಗ್ರ್ಯಾನ್ ಪ್ರಿ ಅಥ್ಲೆಟಿಕ್ಸ್: ರಾಜ್ಯದ ಮನುಗೆ ಬೆಳ್ಳಿ
ತಿರುವನಂತಪುರಂ: ಕರ್ನಾಟಕದ ತಾರಾ ಜಾವೆಲಿನ್ ಥ್ರೋ ಪಟು ಮನು ಡಿ.ಪಿ., ಸೋಮವಾರ ಇಲ್ಲಿ ನಡೆದ ಭಾರತೀಯ ಗ್ರ್ಯಾನ್ ಪ್ರಿ-1 ಅಥ್ಲೆಟಿಕ್ಸ್ ಕೂಟದಲ್ಲಿ ಬೆಳ್ಳಿ ಪದಕ ಜಯಿಸಿದರು. 80.61 ಮೀ. ದೂರಕ್ಕೆ ಜಾವೆಲಿನ್ ಎಸೆದ ಮನು 2ನೇ ಸ್ಥಾನ ಪಡೆದರು. ಒಡಿಶಾದ ಕಿಶೋರ್ 81.05 ಮೀ. ಎಸೆದು ಚಿನ್ನ ಗೆದ್ದರು. ಕಣದಲ್ಲಿ ಒಟ್ಟು 6 ಸ್ಪರ್ಧಿಗಳಿದ್ದರು. ಇನ್ನು ಪುರುಷರ ಲಾಂಗ್‌ಜಂಪ್‌ನಲ್ಲಿ ಸಿದ್ಧಾಥ್‌ರ್ 7.27 ಮೀ. ದೂರಕ್ಕೆ ಹಾರಿ ಬೆಳ್ಳಿ ಜಯಿಸಿದರೆ, ಕೇವಲ 4 ಸ್ಪರ್ಧಿಗಳಿದ್ದ ಪುರುಷರ ಹೈಜಂಪ್‌ನಲ್ಲಿ 2.16 ಮೀ.ನೊಂದಿಗೆ ಜೆಸ್ಸಿ ಸಂದೇಶ್ ಮೊದಲ ಸ್ಥಾನ ಪಡೆದರು.
ಪ್ಯಾರಾ ಅಥ್ಲೆಟಿಕ್ಸ್: 7 ಪದಕ ಗೆದ್ದ ಕರ್ನಾಟಕ
ಪುಣೆ: 21ನೇ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ 7 ಪದಕ ಗೆದ್ದಿದೆ. ಇಲ್ಲಿನ ಬಾಳೆವಾಡಿ ಕ್ರೀಡಾಂಗಣದಲ್ಲಿ ಮಾರ್ಚ್ 16ರಿಂದ 20ರ ವರೆಗೂ ನಡೆದ ಚಾಂಪಿಯನ್‌ಶಿಪ್‌ನಲ್ಲಿ 27 ರಾಜ್ಯಗಳ 900ಕ್ಕೂ ಹೆಚ್ಚು ಅಥ್ಲೀಟ್‌ಗಳು ಪಾಲ್ಗೊಂಡಿದ್ದರು. ಪುರುಷರ ಟಿ12 /13 ವಿಭಾಗದ 5000 ಮೀಟರ್ ಓಟದಲ್ಲಿ ಶರತ್, ಮಹಿಳೆಯರ ಟಿ11 ವಿಭಾಗದ 400 ಮೀಟರ್ ಓಟದಲ್ಲಿ ರಕ್ಷಿತಾ, ಮಹಿಳೆಯರ ಎಫ್33/34 ವಿಭಾಗದ ಶಾಟ್‌ಫುಟ್ ಎಸೆತ ಸ್ಪರ್ಧೆಯಲ್ಲಿ ಮೇಧಾ ಜಯಂತ್ ಚಿನ್ನದ ಪದಕ ಜಯಿಸಿದರು.