ಲಂಡನ್(ಮೇ.30): ಬ್ಯಾಟಿಂಗ್-ಬೌಲಿಂಗ್ ಹಾಗೂ ಫೀಲ್ಡಿಂಗ್ ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಆತಿಥೇಯ ಇಂಗ್ಲೆಂಡ್ ತಂಡ ನಿರೀಕ್ಷೆಯಂತೆಯೇ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ 104 ರನ್ ಗಳ ಜಯಭೇರಿ ಬಾರಿಸುವ ಮೂಲಕ ಇಯಾನ್ ಮಾರ್ಗನ್ ಪಡೆ ತವರಿನ ಅಭಿಮಾನಿಗಳನ್ನು ರಂಜಿಸಿತು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 311 ರನ್ ಬಾರಿಸಿತ್ತು. ಆ ಬಳಿಕ ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್, ಲಿಯಾಮ್ ಫ್ಲಂಕೆಟ್ ಮಾರಕ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ಕೇವಲ 207 ರನ್ ಗಳಿಸಲಷ್ಟೇ ಶಕ್ತವಾಯಿತು. ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ಕ್ವಿಂಟನ್ ಡಿಕಾಕ್ ವ್ಯಾನ್ ಡರ್ ಡಸ್ಸೆನ್ ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್ ಮನ್'ಗಳು ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಬೀಸಲಿಲ್ಲ. ಪ್ರಮುಖ ಬ್ಯಾಟ್ಸ್'ಮನ್ ಗಳಾದ ಹಾಶೀಂ ಆಮ್ಲಾ, ಜೆಪಿ ಡುಮಿನಿ, ನಾಯಕ ಫಾಫ್ ಡುಪ್ಲೆಸಿಸ್ ವಿಫಲವಾಗಿದ್ದು ಹರಿಣಗಳ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಮಿಂಚಿದ ಬೆನ್ ಸ್ಟೋಕ್ಸ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.

"

ಇದಕ್ಕೂ ಮೊದಲು ಜೇಸನ್ ರಾಯ್, ಜೋ ರೂಟ್, ಇಯಾನ್ ಮಾರ್ಗನ್ ಹಾಗೂ ಬೆನ್ ಸ್ಟೋಕ್ಸ್ ಬಾರಿಸಿದ ಭರ್ಜರಿ ಅರ್ಧಶತಕಗಳ ನೆರವಿನಿಂದ ಆತಿಥೇಯ ಇಂಗ್ಲೆಂಡ್ ತಂಡ 311 ರನ್ ಬಾರಿಸಿತ್ತು.