ಮೊದಲು ಇಂಗ್ಲೆಂಡ್ ತಂಡವನ್ನು ಕೇವಲ 104 ರನ್’ಗಳಿಗೆ ನಿಯಂತ್ರಿಸಿದ್ದ ಆಸ್ಟ್ರೇಲಿಯಾ ಆಬಳಿಕ ಇನ್ನೂ 29 ಎಸೆತಗಳು ಬಾಕಿ ಇರುವಂತೆಯೇ ಆಸ್ಟ್ರೇಲಿಯಾ 8 ವಿಕೆಟ್’ಗಳ ಭರ್ಜರಿ ಜಯ ದಾಖಲಿಸಿ ದಾಖಲೆಯ 4ನೇ ಬಾರಿಗೆ ಮಹಿಳಾ ವಿಶ್ವಕಪ್ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯ ಹಲವು ಅಪರೂಪದ ದಾಖಲೆಗಳಿಗೂ ಸಾಕ್ಷಿಯಾಗಿದೆ.

ಬೆಂಗಳೂರು[ನ.25]: ಆರನೇ ಆವೃತ್ತಿಯ ಐಸಿಸಿ ಮಹಿಳಾ ಟಿ20 ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದು ಆಸ್ಟ್ರೇಲಿಯಾ ಚಾಂಪಿಯನ್ ಆಗುವುದರೊಂದಿಗೆ ಚುಟುಕು ಕ್ರಿಕೆಟ್ ಸಂಗ್ರಾಮಕ್ಕೆ ತೆರೆಬಿದ್ದಿದೆ.

ಮೊದಲು ಇಂಗ್ಲೆಂಡ್ ತಂಡವನ್ನು ಕೇವಲ 104 ರನ್’ಗಳಿಗೆ ನಿಯಂತ್ರಿಸಿದ್ದ ಆಸ್ಟ್ರೇಲಿಯಾ ಆಬಳಿಕ ಇನ್ನೂ 29 ಎಸೆತಗಳು ಬಾಕಿ ಇರುವಂತೆಯೇ ಆಸ್ಟ್ರೇಲಿಯಾ 8 ವಿಕೆಟ್’ಗಳ ಭರ್ಜರಿ ಜಯ ದಾಖಲಿಸಿ ದಾಖಲೆಯ 4ನೇ ಬಾರಿಗೆ ಮಹಿಳಾ ವಿಶ್ವಕಪ್ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯ ಹಲವು ಅಪರೂಪದ ದಾಖಲೆಗಳಿಗೂ ಸಾಕ್ಷಿಯಾಗಿದೆ.

ಮಹಿಳಾ ಟಿ20 ಟೂರ್ನಿಯಲ್ಲಿ ನಿರ್ಮಾಣವಾದ ಅಪರೂಪದ ದಾಖಲೆಗಳು ನಿಮ್ಮ ಮುಂದೆ..

1. ಆಸ್ಟ್ರೇಲಿಯಾದ ಎಲಿಸಾ ಪೆರ್ರಿ ಇಂಗ್ಲೆಂಡ್’ನ ನಟಲೀ ಸ್ಕೀವಿರ್ ವಿಕೆಟ್ ಕಬಳಿಸುವ ಮೂಲಕ ಟಿ20 ಕ್ರಿಕೆಟ್’ನಲ್ಲಿ 100 ವಿಕೆಟ್ ಕಬಳಿಸಿದ ಎರಡನೇ ಬೌಲರ್ ಎನ್ನುವ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಈ ಮೊದಲು ವೆಸ್ಟ್ ಇಂಡೀಸ್ ತಂಡದ ಅನುಭವಿ ಆಫ್’ಸ್ಪಿನ್ನರ್ ಅನೀಶಾ ಮೊಹಮ್ಮದ್ ನೂರು ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು.

2. ಆಸ್ಟ್ರೇಲಿಯಾ ವನಿತೆಯರ ತಂಡ ನಾಲ್ಕನೇ ಬಾರಿಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೊದಲು 2010, 2012/13, 2013/14 ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

3. ಮಹಿಳಾ ಟಿ20 ವಿಶ್ವಕಪ್ ಫೈನಲ್’ನಲ್ಲಿ ರನೌಟ್ ಆದ 7ನೇ ಆಟಗಾರ್ತಿ ಎನ್ನುವ ಕುಖ್ಯಾತಿಗೆ ಇಂಗ್ಲೆಂಡ್’ನ ಆ್ಯಮಿ ಜೋನ್ಸ್ ಪಾತ್ರರಾಗಿದ್ದಾರೆ.

4. ಮಹಿಳಾ ವಿಶ್ವಕಪ್ ಟಿ20 ಟೂರ್ನಿಯ ಆವೃತ್ತಿಯೊಂದರಲ್ಲೇ ಗರಿಷ್ಠ ರನ್ ಸಿಡಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಏಲಿಸಾ ಹೀಲಿ[225 ರನ್] 4ನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಮಿಥಾಲಿ ರಾಜ್ ಅವರನ್ನು ಹಿಂದಿಕ್ಕಿದ್ದಾರೆ. 2014ರಲ್ಲಿ ಮಿಥಾಲಿ ರಾಜ್ 208 ರನ್ ಸಿಡಿಸಿದ್ದರು.

5. ಈ ಟೂರ್ನಿಯ ಅತಿ ಅಪರೂಪದ ದಾಖಲೆಯೆಂದರೇ ಏಲಿಸಾ ಹೀಲಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದು. ಏಲಿಸಾ ಹೀಲಿ ಆಸ್ಟ್ರೇಲಿಯಾ ಪುರುಷರ ತಂಡದ ಸ್ಟಾರ್ ಬೌಲರ್ ಮಿಚೆಲ್ ಸ್ಟಾರ್ಕ್ ಪತ್ನಿ. ಮಿಚೆಲ್ ಸ್ಟಾರ್ಕ್ 2015 ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಇದೀಗ ಸ್ಟಾರ್ಕ್ ಪತ್ನಿ ಹೀಲಿ ಮಹಿಳೆಯರ ವಿಶ್ವಕಪ್ ಟಿ20 ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸ್ಟಾರ್ಕ್-ಹೀಲಿ ಜೋಡಿ ಚಾಂಪಿಯನ್ ಕಪಲ್ಸ್ ಎಂದರೆ ಅತಿಶಯೋಕ್ತಿ ಆಗಲಾರದು.