Wimbledon 2023 ಪ್ರಿ ಕ್ವಾರ್ಟರ್ ಫೈನಲ್‌ಗೆ ಎಲೆನಾ ರಬೈಕೆನಾ ಲಗ್ಗೆ
ವಿಂಬಲ್ಡನ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ರಬೈಕೆನಾ ಗೆಲುವಿನ ನಾಗಾಲೋಟ
ವಿಶ್ವ ನಂ.2 ಅರೈನಾ ಸಬಲೆಂಕಾ, ಡ್ಯಾನಿಲ್ ಮೆಡ್ವೆಡೆವ್ ಪ್ರಿ ಕ್ವಾರ್ಟರ್ ಲಗ್ಗೆ
ಕಜಕಸ್ತಾನದ ರಬೈಕೆನಾ ಬ್ರಿಟನ್‌ನ ಕಾಟೀ ಬೌಲ್ಟರ್ ವಿರುದ್ಧ ಜಯ
ಲಂಡನ್(ಜು.10): ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಎಲೆನಾ ರಬೈಕೆನಾ, ವಿಶ್ವ ನಂ.2 ಅರೈನಾ ಸಬಲೆಂಕಾ, ಡ್ಯಾನಿಲ್ ಮೆಡ್ವೆಡೆವ್ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಮಹಿಳಾ ಸಿಂಗಲ್ಸ್ 3ನೇ ಸುತ್ತಿನ ಪಂದ್ಯದಲ್ಲಿ 3ನೇ ಶ್ರೇಯಾಂಕಿತೆ, ಕಜಕಸ್ತಾನದ ರಬೈಕೆನಾ ಬ್ರಿಟನ್‌ನ ಕಾಟೀ ಬೌಲ್ಟರ್ ವಿರುದ್ಧ 6-1, 6-1 ಸುಲಭ ಗೆಲುವು ಸಾಧಿಸಿದರು. ಪ್ರಿ ಕ್ವಾರ್ಟರ್‌ನಲ್ಲಿ ಅವರಿಗೆ ಬ್ರೆಜಿಲ್‌ನ ಹದ್ದಾದ್ ಮಿಯಾ ಸವಾಲು ಎದುರಾಗಲಿದೆ. ಇದೇ ವೇಳೆ ಬೆಲಾರಸ್‌ನ ಸಬಲೆಂಕಾ, ರಷ್ಯಾದ ಅನ್ನಾ ಬ್ಲಿಂಕೋವಾ ಅವರನ್ನು 6-2, 6-3 ಸೆಟ್‌ಗಳಲ್ಲಿ ಸೋಲಿಸಿ ಅಂತಿಮ 16ರ ಸುತ್ತು ಪ್ರವೇಶಿಸಿದರು. 6ನೇ ಶ್ರೇಯಾಂಕಿತೆ, ಟ್ಯುನೀಶಿಯಾದ ಒನ್ಸ್ ಜಬುರ್ ಕೂಡಾ 4ನೇ ಸುತ್ತಿಗೇರಿದರು.
ಮೆಡ್ವೆಡೆವ್, ಸಿಟ್ಸಿಪಾಸ್‌ಗೂ ಗೆಲುವು: ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ 2021 ಯುಎಸ್ ಓಪನ್ ಚಾಂಪಿಯನ್ ಮೆಡ್ವೆಡೆವ್ ಹಂಗೇರಿಯ ಮಾರ್ಟನ್ ಫುಸ್ಕೋವಿಕ್ಸ್ ವಿರುದ್ಧ 4-6, 6-3, 6-4, 6-4 ಸೆಟ್‌ಗಳಲ್ಲಿ ಗೆದ್ದರು. 5ನೇ ಶ್ರೇಯಾಂಕಿತ ಗ್ರೀಕ್‌ನ ಸಿಟ್ಸಿಪಾಸ್ ಸರ್ಬಿಯಾದ ಲಾಸ್ಲೊ ಡೆರೆ ವಿರುದ್ಧ ಗೆದ್ದು 4ನೇ ಸುತ್ತಿಗೇರಿದರು. ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್, ಡೆನ್ಮಾರ್ಕ್‌ನ ಹೋಲ್ಗರ್ ರ್‍ಯುನೆ ಕೂಡಾ ಅಂತಿಮ 16ರ ಘಟ್ಟ ಪ್ರವೇಶಿಸಿದರು. ಇದೇ ವೇಳೆ ರಷ್ಯಾದ ರೋಮನ್ ಸಫಿಯುಲಿನ್ ಚೊಚ್ಚಲ ಪ್ರಯತ್ನದಲ್ಲೇ ವಿಂಬಲ್ಡನ್ ಕ್ವಾರ್ಟರ್ ಫೈನಲ್‌ಗೇರಿದರು.
ಇಗಾ ಸ್ವಿಯಾಟೆಕ್, ನೋವಾಕ್ ಜೋಕೋವಿಚ್ ಪ್ರೀ ಕ್ವಾರ್ಟರ್‌ಗೆ ಲಗ್ಗೆ
ಮೈನೇನಿ-ಯೂಕಿ ಜೋಡಿಗೆ ಸೋಲು
ಪುರುಷರ ಡಬಲ್ಸ್‌ನಲ್ಲಿ ಕಣಕ್ಕಿಳಿದಿದ್ದ ಭಾರತದ ಜೋಡಿ ಸಾಕೇತ್ ಮೈನೇನಿ-ಯೂಕಿ ಬ್ಹಾಂಬ್ರಿ ಮೊದಲ ಸುತ್ತಲ್ಲೇ ಸೋಲಿನ ಆಘಾತ ಅನುಭವಿಸಿದರು. ಈ ಜೋಡಿ ಭಾನುವಾರ ಸ್ಪೇನ್‌ನ ಅಲೆಜಾಂಡ್ರೊ ಫೋಕಿನಾ-ಫ್ರಾನ್ಸ್‌ನ ಆ್ಯಡ್ರಿನಾ ಮನ್ನಾರಿನೊ ಜೋಡಿ ವಿರುದ್ಧ 4-6, 6-4, 4-6 ಅಂತರದಲ್ಲಿ ಸೋಲನುಭವಿಸಿತು. ಇನ್ನು, ಮಿಶ್ರ ಡಬಲ್ಸ್‌ನಲ್ಲಿ ಕೆನಡಾದ ಗ್ಯಾಬ್ರಿಯೆಲಾ ಡಬ್ರೋವ್ಸ್ಕಿ ಜೊತೆ ಕಣಕ್ಕಿಳಿದಿದ್ದ ಭಾರತದ ರೋಹನ್ ಬೋಪಣ್ಣ ಕೂಡಾ ಮೊದಲ ಸುತ್ತಲ್ಲೇ ಸೋತು ಹೊರಬಿದ್ದರು.
ಏಷ್ಯಾಡ್: ರೆಸ್ಲರ್ಸ್ ಹೆಸರು ಸಲ್ಲಿಕೆಗೆ ಗಡುವು ವಿಸ್ತರಣೆ
ನವದೆಹಲಿ: ಮುಂಬರುವ ಏಷ್ಯನ್ ಗೇಮ್ಸ್‌ಗೆ ಭಾರತೀಯ ಕುಸ್ತಿಪಟುಗಳ ಹೆಸರು ಸಲ್ಲಿಕೆಗೆ ನಿಗದಿಪಡಿಸಲಾಗಿದ್ದ ಅಂತಿಮ ದಿನಾಂಕವನ್ನು ಏಷ್ಯಾ ಒಲಿಂಪಿಕ್ ಕೌನ್ಸಿಲ್(ಒಸಿಎ) ಜು.22ರ ವರೆಗೆ ವಿಸ್ತರಿಸಿದೆ. ಗೇಮ್ಸ್ ಸೆ.23ಕ್ಕೆ ಆರಂಭಗೊಳ್ಳಲಿದ್ದು, ಇದಕ್ಕಾಗಿ ಎಲ್ಲಾ ದೇಶಗಳ ಅಥ್ಲೀಟ್‌ಗಳ ಹೆಸರು ಸಲ್ಲಿಕೆಗೆ ಒಸಿಎ ಈ ಮೊದಲು ಜು.15ರ ಗಡುವು ವಿಧಿಸಿತ್ತು.
ಆದರೆ ಪ್ರತಿಭಟನೆಯಿಂದಾಗಿ ಕುಸ್ತಿ ಅಂಕಣದಿಂದ ದೀರ್ಘ ಸಮಯದಿಂದ ದೂರವಿದ್ದ ಭಾರತದ ಅಗ್ರ ಕುಸ್ತಿಪಟುಗಳು, ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ಸಮಯಾವಕಾಶ ಬೇಕು ಎಂದು ಭಾರತೀಯ ಒಲಿಂಪಿಕ್ ಸಮಿತಿ(ಐಒಎ)ಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ಒಸಿಎಗೆ ಪತ್ರ ಬರೆದಿದ್ದ ಐಒಎ, ಕುಸ್ತಿಪಟುಗಳ ಹೆಸರು ಸಲ್ಲಿಕೆ ದಿನಾಂಕವನ್ನು ಆ.5ರ ವರೆಗೆ ವಿಸ್ತರಿಸುವಂತೆ ಮನವಿ ಮಾಡಿತ್ತು.