Asianet Suvarna News Asianet Suvarna News

ಕ್ರಿಕೆಟ್‌ನಲ್ಲಿ ಟಾಸ್ ಬದಲು ಬಿಡ್-ಹೊಸ ಐಡಿಯಾ

ಕಾಲಘಟ್ಟಕ್ಕೆ ತಕ್ಕಂತೆ ಕ್ರಿಕೆಟ್ ನೂತನ ನಿಯಮಗಳನ್ನ ಕ್ರಿಕೆಟ್ ಅಳವಡಿಸಿಕೊಳ್ಳುತ್ತಿದೆ. ಇದೀಗ ಟಾಸ್ ಲಾಭ ತಪ್ಪಿಸಲು ಕನ್ನಡಿಗ ಹೊಸ ಐಡಿಯಾ ನೀಡಿದ್ದಾರೆ. ನೂತನ ಟಾಸ್ ಬಿಡ್ಡಿಂಗ್ ನೀತಿಗೆ ವಿಶ್ವದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಏನಿದು ಟಾಸ್ ಬಿಡ್ಡಿಂಗ್? ಇದರ ಪ್ರಕ್ರಿಯೆ ಹೇಗೆ? ಇಲ್ಲಿದೆ

Will Cricket change Normal toss to Bid toss
Author
Bengaluru, First Published Aug 9, 2018, 12:20 PM IST

ಸ್ಪಂದನ್ ಕಣಿಯಾರ್ 
ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು(ಆ.09): ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್‌ನಲ್ಲಿ ಶೇ.100ಕ್ಕೆ 70 ರಿಂದ 80 ಬಾರಿ ಟಾಸ್ ಗೆಲ್ಲುವ ತಂಡ ಪಂದ್ಯ ಗೆಲ್ಲುವುದು ಸಾಮಾನ್ಯ ವಾಗಿ ಹೋಗಿದೆ. ಆತಿಥೇಯ ತಂಡಕ್ಕೆ ಅನುಕೂಲವಾಗುವಂತೆ ಪಿಚ್ ನಿರ್ಮಿಸುವ ಕಾರಣ, ಟಾಸ್‌ನಿಂದಲೂ ಅದೃಷ್ಟ ದೊರೆ ಯಲಿದೆ.

ಐಪಿಎಲ್‌ನಂತಹ ಟೂರ್ನಿಗಳಲ್ಲಂತೂ ಟಾಸ್ ಗೆಲ್ಲುವವರೇ ಬಾಸ್. ಟಾಸ್‌ನಿಂದ ಸಿಗುವ ಲಾಭವನ್ನು ತಪ್ಪಿಸಲು ಐಸಿಸಿ ಸಹ ಹೊಸ ಆಲೋಚನೆಗಳನ್ನು ನಡೆಸುತ್ತಿದೆ. ಟಾಸ್ ಪದ್ಧತಿಯನ್ನೇ ತೆಗೆದುಹಾಕಿ ಪ್ರವಾಸಿ ತಂಡಕ್ಕೆ ಬ್ಯಾಟಿಂಗ್ ಇಲ್ಲವೇ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುವ ಬಗ್ಗೆಯೂ ಪ್ರಸ್ತಾ ಪವಿತ್ತು. 

ಸಾಂಪ್ರದಾಯಿಕ ಟಾಸ್ ಪದ್ಧತಿಯನ್ನು ಸ್ಥಗಿತಗೊಳಿಸಲು ವಿರೋಧ ವ್ಯಕ್ತವಾಗಿದ್ದರಿಂದ ಆ ಆಲೋಚನೆ ಯನ್ನು ಐಸಿಸಿ ಕೈಬಿಟ್ಟಿತು. ಹಾಗಿದ್ದರೆ, ಟಾಸ್ ಜಯದಿಂದ ತಂಡಗಳು ಲಾಭ ಪಡೆ ಯುವುದನ್ನು ತಪ್ಪಿಸುವುದು ಹೇಗೆ? ಕನ್ನಡಿಗ ನಾಗೇಶ್ ಭಾರದ್ವಾಜ್ ಇದಕ್ಕೊಂದು ಸೂತ್ರ ಕಂಡು ಹಿಡಿದಿದ್ದಾರೆ. ಇದರಿಂದ ಟಾಸ್ ಜಯದಿಂದ ಸಿಗುವ ಅದೃಷ್ಟವನ್ನು ನಿಯಂತ್ರಿಸಬಹುದು.ಈ ಪದ್ಧತಿಗೆ ನಾಗೇಶ್ ಭಾರದ್ವಾಜ್ ಪದ್ಧತಿ (ಎನ್‌ಬಿಎಂ) ಎಂದು ಹೆಸರಿಟ್ಟಿದ್ದಾರೆ.

ಏನಿದು ಎನ್‌ಬಿಎಂ?: 
ಈ ಪದ್ಧತಿಯನ್ನು ಅಳವಡಿಸಿಕೊಂಡರೆ, ಟಾಸ್ ವೇಳೆ ಉಭಯ ತಂಡಗಳ ನಾಯಕರು ಮುಚ್ಚಿದ ಲಕೋಟೆಯಲ್ಲಿ ತಾವು ಮೊದಲು ಬ್ಯಾಟ್ ಇಲ್ಲವೇ ಫೀಲ್ಡ್ ಮಾಡಲು ಇಚ್ಛಿ
ಸುತ್ತಾರೆಯೇ ಎನ್ನುವುದನ್ನು ಬರೆದು ತರಲಿದ್ದಾರೆ. ಜತೆಗೆ ಇಂತಿಷ್ಟು ರನ್‌ಗಳನ್ನು ಬಿಡ್ ಮಾಡಲಿದ್ದಾರೆ. ಯಾವ ತಂಡ ಹೆಚ್ಚು ರನ್ ಬಿಡು ಮಾಡುತ್ತದೆಯೋ ಆ ತಂಡಕ್ಕೆ ತಾನು ಇಚ್ಛಿಸಿದಂತೆ ಬ್ಯಾಟಿಂಗ್ ಇಲ್ಲವೇ ಫೀಲ್ಡಿಂಗ್ ಅವಕಾಶ ಸಿಗಲಿದೆ.

ಡಕ್ವರ್ತ್-ಲೂಯಿಸ್‌ರಿಂದಲೂ ಮೆಚ್ಚುಗೆ: 
ಕ್ರಿಕೆಟ್‌ನ ಅತ್ಯಂತ ಕಷ್ಟಕರ ಸೂತ್ರಗಳಲ್ಲಿ ಒಂದಾದ ಡಕ್ವರ್ತ್ ಲೂಯಿಸ್ ಪದ್ಧತಿಯನ್ನು ಪರಿಚಯಿಸಿದ ಫ್ರಾಂಕ್ ಡಕ್ವರ್ತ್, ಟೋನಿ ಲೂಯಿಸ್,ಸ್ಟೀವನ್ ಸ್ಟರ್ಟ್ನ್ ಸಹ ನಾಗೇಶ್ ಭಾರದ್ವಾಜ್‌ರ ಟಾಸ್ ಬಿಡ್ಡಿಂಗ್ ಪದ್ಧತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಿಎಲ್‌ಎಸ್‌ಗೆ ಪರ್ಯಾಯ ವಾಗಿ ಆರಂಭವಾದ ವಿಜೆಡಿ ಪದ್ಧತಿಯ ಸೂತ್ರಧಾರ ಜಗದೀಶನ್ ಸಹ ಆಸಕ್ತಿ ತೋರಿಸಿದ್ದಾಗಿ ನಾಗೇಶ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು. 2012-13ರಲ್ಲಿ ಮೊದಲ ಬಾರಿಗೆ ಈ ಟಾಸ್ ಪದ್ಧತಿಯ ಬಗ್ಗೆ ನಾಗೇಶ್ ಪ್ರಸ್ತಾಪಿಸಿದ್ದರು. ಅಷ್ಟೇ ಅಲ್ಲ, ಇದಕ್ಕೆ ಪೇಟೆಂಟ್ (ಹಕ್ಕು) ಸಹ ಪಡೆದಿದ್ದಾರೆ.

ಕುಂಬ್ಳೆ ಜತೆಗೂ ಚರ್ಚೆ!: 
ಐಸಿಸಿ ಕ್ರಿಕೆಟ್ ಸಮಿತಿಯ ಮುಖ್ಯಸ್ಥರಾಗಿರುವ ಅನಿಲ್ ಕುಂಬ್ಳೆ ಮುಂದೆಯೂ ನಾಗೇಶ್ ತಮ್ಮ ಟಾಸ್ ಪದ್ಧತಿಯ ಪ್ರಸ್ತಾಪವಿಟ್ಟಿರುವುದಾಗಿ ತಿಳಿಸಿದರು. ಬಿಸಿಸಿಐಗೂ ಇವರು ಪ್ರಸ್ತುತಿ ನೀಡಿದ್ದಾರೆ. ಆದರೆ, ಸಾಂಪ್ರದಾಯಿಕ ಟಾಸ್ ಪದ್ಧತಿಯನ್ನು ಸ್ಥಗಿತಗೊಳಿಸಿ ಹೊಸ ಪದ್ಧತಿಯನ್ನು ಅಳವಡಿಸುವುದಕ್ಕೆ ಸಮಯ ಹಿಡಿಯಲಿದೆ.

ಲಾಭ ಹೇಗೆ?: ಈ ಪದ್ಧತಿ ಅಳವಡಿಸಿದರೆ, ಟಾಸ್ ನಿಂದ ಸಿಗುವ ಅದೃಷ್ಟವನ್ನು ತಪ್ಪಿಸಬಹುದು. ಎದುರಾಳಿ ಬಿಟ್ಟು ಕೊಡುವಷ್ಟು ರನ್‌ಗಳ ಲಾಭ ಮತ್ತೊಂದು ತಂಡಕ್ಕೆ ಲಭಿಸಲಿದೆ. ಇದು ಪಂದ್ಯದಲ್ಲಿ ಸಮತೋಲನ ಕಾಪಾಡಲಿದೆ ಎನ್ನುತ್ತಾರೆ ನಾಗೇಶ್ ಮುಚ್ಚಿದ ಲಕೋಟೆಯಲ್ಲಿ ಎರಡೂ ತಂಡದ ನಾಯಕರು ಮೊದಲು ಬ್ಯಾಟ್ ಮಾಡಲು ಇಚ್ಛಿಸುವುದಾಗಿ ಬರೆದಿದ್ದರೆ, ಯಾವ ತಂಡ ಹೆಚ್ಚು ರನ್ ಬಿಡ್ ಮಾಡಿದೆಯೋ ಆ ತಂಡಕ್ಕೆ ಮೊದಲು ಬ್ಯಾಟ್ ಮಾಡುವ ಅವಕಾಶ ಸಿಗಲಿದೆ. 

ಉದಾ: ಭಾರತ- ಇಂಗ್ಲೆಂಡ್ ಏಕದಿನ ಪಂದ್ಯದಲ್ಲಿ, ಭಾರತ ನಾಯಕ ಮೊದಲು ಬ್ಯಾಟ್ ಮಾಡಲು ಇಚ್ಛಿಸಿ 10 ರನ್ ಬಿಡ್ ಮಾಡಿರುತ್ತಾರೆ. ಇಂಗ್ಲೆಂಡ್ ನಾಯಕ 8 ರನ್ ಬಿಡ್ ಮಾಡಿರುತ್ತಾರೆ. ಆಗ ಭಾರತಕ್ಕೆ ಮೊದಲು ಬ್ಯಾಟ್ ಮಾಡುವ ಅವಕಾಶ ಸಿಗಲಿದೆ. 2ನೇ ಬ್ಯಾಟಿಂಗ್ ನಡೆಸುವ ಇಂಗ್ಲೆಂಡ್ ತನ್ನ ಇನ್ನಿಂಗ್ಸನ್ನು 10 ರನ್‌ಗಳಿಂದ ಆರಂಭಿಸಲಿದೆ. 250 ರನ್ ಗುರಿ ನಿಗದಿಯಾಗಿದ್ದರೆ, ಇಂಗ್ಲೆಂಡ್ 240 ರನ್ ಕಲೆಹಾಕಿದರೆ ಗೆದ್ದಂತೆ. ಮುಚ್ಚಿದ ಲಕೋಟೆಯಲ್ಲಿ ಎರಡೂ ತಂಡದ ನಾಯಕರು ಮೊದಲು ಬೌಲ್ ಮಾಡಲು ಇಚ್ಛಿಸುವುದಾಗಿ ಬರೆದಿದ್ದರೆ, ಯಾವ ತಂಡ ಹೆಚ್ಚು ರನ್ ಬಿಡ್ ಮಾಡಿದೆಯೋ ಆ ತಂಡಕ್ಕೆ ಮೊದಲು ಬೌಲ್ ಮಾಡುವ ಅವಕಾಶ ಸಿಗಲಿದೆ. 

ಉದಾಹರಣೆಗೆ ಭಾರತ-ಇಂಗ್ಲೆಂಡ್ ಏಕದಿನ ಪಂದ್ಯದಲ್ಲಿ, ಭಾರತ ನಾಯಕ ಮೊದಲು ಬೌಲ್ ಮಾಡಲು ಇಚ್ಛಿಸಿ 10 ಬಿಟ್ಟುಕೊಡಲು ಸಿದ್ಧರಿರುವುದಾಗಿ ತಿಳಿಸಿರುತ್ತಾರೆ. ಇಂಗ್ಲೆಂಡ್ ನಾಯಕ 8 ರನ್ ಬಿಡ್ ಮಾಡಿರುತ್ತಾರೆ. ಆಗ ಭಾರತಕ್ಕೆ ಮೊದಲು ಬೌಲ್ ಮಾಡುವ ಅವಕಾಶ ಸಿಗಲಿದೆ. ಮೊದಲು ಬ್ಯಾಟಿಂಗ್ ನಡೆಸುವ ಇಂಗ್ಲೆಂಡ್ ತನ್ನ ಇನ್ನಿಂಗ್ಸನ್ನು10 ರನ್‌ಗಳಿಂದ ಆರಂಭಿಸಲಿದೆ. 

ಒಂದು ತಂಡದ ನಾಯಕ ಮೊದಲು ಬ್ಯಾಟ್ ಮಾಡಲು ಇಚ್ಛಿಸುವುದಾಗಿ, ಮತ್ತೊಂದು ತಂಡದ ನಾಯಕ ಮೊದಲು ಬೌಲ್ ಮಾಡಲು ಇಚ್ಛಿಸುವುದಾಗಿ ತಿಳಿಸಿದರೆ, ಆಗ ಬಿಡ್ ಮಾಡಿದ ರನ್‌ಗಳು ಲೆಕ್ಕಕ್ಕೆ ಬರುವುದಿಲ್ಲ. ಮೊದಲು ಬ್ಯಾಟ್ ಮಾಡುವ ತಂಡ ಸೊನ್ನೆ ರನ್‌ಗಳೊಂದಿಗೆ ತನ್ನ ಇನ್ನಿಂಗ್ಸ್ ಆರಂಭಿಸಲಿದೆ. 2ನೇ ಬ್ಯಾಟಿಂಗ್ ಮಾಡುವ ತಂಡಕ್ಕೂ ರನ್ ಸಿಗುವುದಿಲ್ಲ. ತಂಡ ಪಿಚ್, ಸ್ಥಳೀಯ ವಾತಾವರಣ, ಎದು ರಾಳಿಯ ಸಾಮರ್ಥ್ಯ ಹೀಗೆ ಹಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ತನಗೆ ಸೂಕ್ತ ಎನಿಸುವಷ್ಟು ರನ್‌ಗಳನ್ನು ಬಿಡ್ ಮಾಡಬಹುದಾಗಿದೆ. ಬೇಕಿದ್ದರೆ ತಂಡ ಸೊನ್ನೆ ರನ್ ಬಿಡ್ ಮಾಡಲು ಸಹ ಅವಕಾಶವಿದೆ. 

ಟಾಸ್ ಬಿಡ್ ಐಡಿಯಾ ಹುಟ್ಟಿದ್ದು ಹೇಗೆ?:
ನೋಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರ ತಜ್ಞ ಅಮೆರಿಕದ ಜಾನ್ ನ್ಯಾಶ್‌ರ ಜೀವನಾಧಾರಿತ ಹಾಲಿವುಡ್ ಸಿನಿಮಾ ‘ದ ಬ್ಯೂಟಿಫುಲ್ ಮೈಂಡ್’ ವೀಕ್ಷಿಸಿದ ಬಳಿಕ, ಕ್ರಿಕೆಟ್ ಪಂದ್ಯದಲ್ಲಿ ಸಮತೋಲನ ಕಾಪಾಡುವುದು ಮುಖ್ಯ ಎನ್ನುವುದು ನಾಗೇಶ್ ಅವರಿಗೆ ಅನಿಸಲಾರಂಭಿಸಿತು. ಐಪಿಎಲ್ ಹರಾಜು ನೋಡಿದ ಮೇಲೆ ಟಾಸ್ ವೇಳೆಯೂ ಬಿಡ್ಡಿಂಗ್ ನಡೆದರೆ ಹೇಗೆ ಎಂದು ಯೋಚಿಸಿ, ಈ ಸೂತ್ರವನ್ನು ಸಿದ್ಧಪಡಿಸಿದ್ದಾಗಿ ನಾಗೇಶ್ ತಿಳಿಸಿದ್ದಾರೆ. ಕ್ರಿಕೆಟ್ ಅಭಿಮಾನಿಯಾಗಿರುವ ಬೆಂಗಳೂರಿನ ನಾಗೇಶ್ ಭಾರದ್ವಾಜ್ ಪ್ರತಿಷ್ಠಿತ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ. ಅಮೆರಿಕದಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Follow Us:
Download App:
  • android
  • ios