ಭಾನುವಾರಷ್ಟೇ ಮುಕ್ತಾಯವಾಗಿರುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ 303 ರನ್ ಸಿಡಿಸಿರುವ ಕರುಣ್ ನಾಯರ್ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ.

ವಿಶಾಖಪಟ್ಟಣ(ಡಿ.22): ಗಾಯದ ಸಮಸ್ಯೆಗೆ ಒಳಗಾಗಿರುವ ಭಾರತ ತಂಡದ ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಮುರುಳಿ ವಿಜಯ್ ಅನುಪಸ್ಥಿತಿಯಲ್ಲಿ ತಮಿಳುನಾಡು ತಂಡ, ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ 2ನೇ ಕ್ವಾರ್ಟರ್‌ ಫೈನಲ್‌'ನಲ್ಲಿ ಕರ್ನಾಟಕ ತಂಡವನ್ನು ಎದುರಿಸುತ್ತಿದೆ.

ಈ ಹಿಂದೆ, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ, ಅದ್ಭುತ ಫಾರ್ಮ್‌'ನಲ್ಲಿರುವ ಅಶ್ವಿನ್ ಹಾಗೂ ಮುರಳಿ ವಿಜಯ್ ಅವರನ್ನು ಆಡಿಸಲು ತಮಿಳುನಾಡು ಕ್ರಿಕೆಟ್ ಸಂಸ್ಥೆ ಯೋಚಿಸಿತ್ತು. ಆದರೆ, ಅವರಿಬ್ಬರೂ ಗಾಯದ ಸಮಸ್ಯೆಯಲ್ಲಿರುವುದರಿಂದ ತಂಡದಲ್ಲಿ ಸೇರ್ಪಡೆಗೊಳ್ಳಲು ಸಾಧ್ಯವಾಗಿಲ್ಲ ಎಂದು ತಮಿಳುನಾಡು ಕ್ರಿಕೆಟ್ ಸಂಸ್ಥೆ ಬುಧವಾರವೇ ತಿಳಿಸಿದೆ.

ಇತ್ತ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆದಿದ್ದರಿಂದ ಕೆಲ ರಣಜಿ ಪಂದ್ಯಗಳಿಂದ ವಂಚಿತರಾಗಿದ್ದ ಕರ್ನಾಟಕ ತಂಡದ ಆಟಗಾರರಾದ ಕರುಣ್ ನಾಯರ್, ಕೆ.ಎಲ್. ರಾಹುಲ್ ಹಾಗೂ ಮನೀಶ್ ಪಾಂಡೆ ರಾಜ್ಯ ತಂಡಕ್ಕೆ ಮರಳಿದ್ದಾರೆ. ಹೀಗಾಗಿ ವಿನಯ್ ಕುಮಾರ್ ಪಡೆ ಪ್ರಬಲವಾಗಿದ್ದು, ಎದುರಾಳಿ ತಮಿಳುನಾಡು ತಂಡಕ್ಕೆ ಉತ್ತಮ ಪೈಪೋಟಿ ನೀಡುವ ವಿಶ್ವಾಸದಲ್ಲಿದೆ. ಅದರಲ್ಲೂ ಭಾನುವಾರಷ್ಟೇ ಮುಕ್ತಾಯವಾಗಿರುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ 303 ರನ್ ಸಿಡಿಸಿರುವ ಕರುಣ್ ನಾಯರ್ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ.

ಇನ್ನು, ತಂಡದ ಬಗ್ಗೆ ಹೇಳುವುದಾದರೆ, ಲೀಗ್ ಹಂತದಲ್ಲಿ ಪ್ರಭಾವಿ ಆಟವಾಡಿದ್ದ ಕರ್ನಾಟಕ ತಂಡ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಕಳಪೆ ಫಾರ್ಮ್‌ನಿಂದ ಕಂಗೆಟ್ಟಿರುವ ರಾಬಿನ್ ಉತ್ತಪ್ಪ ಅವರನ್ನು ತಂಡದಿಂದ ಕೈಬಿಡಲಾಗಿದೆ.