ಅಂದು ಧೋನಿ ಮಹತ್ವದ ನಿರ್ಧಾರ ಪ್ರಕಟಿಸುತ್ತಿರುವ ವಿಚಾರದ ಸುಳಿವೇ ಯಾರಿಗೂ ಸಿಗೋದಿಲ್ಲ. ಧೋನಿ ಅಷ್ಟು ಕಾಮ್ ಆಗಿರುತ್ತಾರೆ. ಧೋನಿ ಅಂದು ನಿರ್ಧಾರ ಪ್ರಕಟಿಸುತ್ತಿದ್ದಂತೆಯೇ ಇಶಾನ್ ಕಿಶನ್ ಸೇರಿದಂತೆ ಎಲ್ಲಾ ಜಾರ್ಖಂಡ್ ಆಟಗಾರರಿಗೆ ಶಾಕ್ ಆಗಿತ್ತು.

ನಾಗಪುರ(ಜ. 07): ಭಾರತೀಯ ಕ್ರಿಕೆಟ್’ಗೆ ಹೊಸ ಮೆರುಗು ಕೊಟ್ಟ ಮಹೇಂದ್ರ ಸಿಂಗ್ ಧೋನಿ ಅವರದ್ದು ವಿಶೇಷ ವ್ಯಕ್ತಿತ್ವ. ಅಪ್ಪಟ ನಾಯಕತ್ವದ ಗುಣ ಅವರದ್ದು. ಕಳೆದ ವರ್ಷ ಟೆಸ್ಟ್ ಕ್ರಿಕೆಟ್’ನಿಂದ ನಿವೃತ್ತಿ ಹೊಂದಿದ್ದ ಎಂಎಸ್ ಧೋನಿ ಇದೇ ಜ.4ರಂದು ಚುಟುಕು ಕ್ರಿಕೆಟ್’ಗಳ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿದರು. ಆನ್’ಫೀಲ್ಡ್ ಆಗಲೀ, ಆಫ್’ಫೀಲ್ಡ್ ಆಗಲಿ ಸಾಕಷ್ಟು ಅಚ್ಚರಿ, ವಿಸ್ಮಯ ಮೂಡಿಸುವಂತಿರುತ್ತವೆ ಧೋನಿ ನಿರ್ಧಾರಗಳು. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಮಧ್ಯೆಯೇ ಅನಿರೀಕ್ಷಿತ ರೀತಿಯಲ್ಲಿ ಟೆಸ್ಟ್ ಕ್ರಿಕೆಟ್’ಗೆ ರಿಟೈರ್ಮೆಂಟ್ ಘೋಷಿಸಿದ್ದ ಧೋನಿ, ಇದೀಗ ಅಷ್ಟೇ ಅನಿರೀಕ್ಷಿತವಾಗಿ ಓಡಿಐ, ಟಿ20 ಕ್ರಿಕೆಟ್’ನ ಕ್ಯಾಪ್ಟನ್ಸಿಗೆ ವಿದಾಯ ಹೇಳಿದ್ದಾರೆ. ಧೋನಿ ಇಂತಹ ಮಹತ್ವದ ನಿರ್ಧಾರವನ್ನು ಘೋಷಿಸುವಾಗ ಬಹಳ ರಹಸ್ಯ ಕಾಪಾಡಿಕೊಳ್ಳುತ್ತಾರೆ. ಯಾರಿಗೂ ಕೂಡ ಅದರ ಸುಳಿವೇ ಸಿಗುವುದಿಲ್ಲ.

ಏಕದಿನ ಮತ್ತು ಟಿ20 ಕ್ರಿಕೆಟ್’ನ ಕ್ಯಾಪ್ಟನ್ಸಿಗೆ ವಿದಾಯ ಹೇಳುವ ದಿನವೂ ಧೋನಿ ಇಂತಹ ಸೀಕ್ರೆಸಿ ಮೇಂಟೇನ್ ಮಾಡಿದ್ದರು. ಅಂದು ನಾಗಪುರದಲ್ಲಿ ಜಾರ್ಖಂಡ್ ವರ್ಸಸ್ ಗುಜರಾತ್ ನಡುವಿನ ರಣಜಿ ಸೆಮಿಫೈನಲ್ ಪಂದ್ಯ ನಡೆಯುತ್ತಿತ್ತು. ಧೋನಿ ತಮ್ಮ ತವರು ಜಾರ್ಖಂಡ್ ತಂಡದ ಸದಸ್ಯರೊಂದಿಗಿದ್ದರು. ಆಟದ ಕುರಿತು ಜಾರ್ಖಂಡ್ ಪ್ಲೇಯರ್ಸ್ ಜೊತೆ ಸಾಕಷ್ಟು ಚರ್ಚೆ ನಡೆಸಿದರು. ಯುವ ಪ್ರತಿಭೆ ಇಶಾನ್ ಕಿಶನ್’ಗೆ ಒಂದಷ್ಟು ವಿಕೆಟ್’ಕೀಪಿಂಗ್ ಟಿಪ್ಸ್ ಕೊಟ್ಟರು. ಜಾರ್ಖಂಡ್ ಆಟಗಾರರು ಧೋನಿಯೊಂದಿಗೆ ಸಾಕಷ್ಟು ಒಡನಾಟ ನಡೆಸುತ್ತಾರೆ. ಆದರೆ, ಅಂದು ಧೋನಿ ಮಹತ್ವದ ನಿರ್ಧಾರ ಪ್ರಕಟಿಸುತ್ತಿರುವ ವಿಚಾರದ ಸುಳಿವೇ ಯಾರಿಗೂ ಸಿಗೋದಿಲ್ಲ. ಧೋನಿ ಅಷ್ಟು ಕಾಮ್ ಆಗಿರುತ್ತಾರೆ. ಧೋನಿ ಅಂದು ನಿರ್ಧಾರ ಪ್ರಕಟಿಸುತ್ತಿದ್ದಂತೆಯೇ ಇಶಾನ್ ಕಿಶನ್ ಸೇರಿದಂತೆ ಎಲ್ಲಾ ಜಾರ್ಖಂಡ್ ಆಟಗಾರರಿಗೆ ಶಾಕ್ ಆಗಿತ್ತು.