ವಿಂಬಲ್ಡನ್‌: ಪ್ರಿ ಕ್ವಾರ್ಟರ್ ತಲುಪಿದ ರಾಫೆಲ್ ನಡಾಲ್

Watch: Classy Rafael Nadal eases into Wimbledon last 16 with straight sets walkover
Highlights

ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿ ರೋಚಕ ಘಟ್ಟ ತಲುಪಿದೆ. ಗ್ರ್ಯಾಂಡ್ ಸ್ಲಾಂ ಮಾಸ್ಟರ್ ರಾಫೆಲ್ ನಡಾಲ್ ಅಬ್ಬರ ಮುಂದುವರಿದಿದ್ರೆ, ಅಗ್ರ ಶ್ರೇಯಾಂಕಿತ ಸಿಮೋನಾ ಹಾಲೆಪ್ ಹೋರಾಟ ಅಂತ್ಯಗೊಂಡಿದೆ. ವಿಂಬಲ್ಡನ್ ಹೋರಾಟದ ಡಿಟೇಲ್ಸ್ ಇಲ್ಲಿದೆ.
 

ಲಂಡನ್‌(ಜು.08): ವಿಂಬಲ್ಡನ್‌ ಗ್ರ್ಯಾಂಡ್‌ಸ್ಲಾಂ ಟೆನಿಸ್‌ ಟೂರ್ನಿ ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ರಾಫೆಲ್‌ ನಡಾಲ್‌ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರೆ, ಮಹಿಳಾ ಸಿಂಗಲ್ಸ್‌ನ ವಿಶ್ವ ನಂ.1 ಸಿಮೋನಾ ಹಾಲೆಪ್‌ 3ನೇ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ 3ನೇ ಸುತ್ತಿನ ಪಂದ್ಯದಲ್ಲಿ ನಡಾಲ್‌, ಆಸ್ಪ್ರೇಲಿಯಾದ 19 ವರ್ಷದ ಆಟಗಾರ ಅಲೆಕ್ಸ್‌ ಡೆ ಮಿನೌರ್‌ ವಿರುದ್ಧ 6-1,6-2,6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಮುನ್ನಡೆದರು. 17 ಗ್ರ್ಯಾಂಡ್‌ಸ್ಲಾಂಗಳ ಒಡೆಯ ನಡಾಲ್‌ಗೆ, ಮುಂದಿನ ವಾರ ಪ್ರಕಟಗೊಳ್ಳಲಿರುವ ಎಟಿವಿ ವಿಶ್ವ ರಾರ‍ಯಂಕಿಂಗ್‌ನ ನೂತನ ಪಟ್ಟಿಯಲ್ಲಿ ಅಗ್ರ ಸ್ಥಾನ ಉಳಿಸಿಕೊಳ್ಳಲು ಈ ಜಯ ಅಗತ್ಯವಿತ್ತು. ಅಂತಿಮ 16ರ ಸುತ್ತಿಗೆ ಪ್ರವೇಶ ಪಡೆಯುವ ಮೂಲಕ ರಾಫಾ, ವಿಶ್ವ ನಂ.1 ಪಟ್ಟವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ 3ನೇ ಸುತ್ತಿನಲ್ಲಿ ಜಯಗಳಿಸಿದ ಅಗ್ರ ಶ್ರೇಯಾಂಕಿತ ರೋಜರ್‌ ಫೆಡರರ್‌, ಪ್ರಿ ಕ್ವಾರ್ಟರ್‌ಗೇರಿದರು. ಜರ್ಮನಿಯ ಜಾನ್‌ ಸ್ಟ್ರಫ್‌ ವಿರುದ್ಧ 6-3, 7-5, 6-2 ಸೆಟ್‌ಗಳಲ್ಲಿ ಸುಲಭ ಗೆಲುವು ದಾಖಲಿಸಿದರು.

ಹಾಲೆಪ್‌ಗೆ ಭಾರೀ ಆಘಾತ: ಕಳೆದ ತಿಂಗಳಷ್ಟೇ ಫ್ರೆಂಚ್‌ ಓಪನ್‌ ಗೆದ್ದು, ಚೊಚ್ಚಲ ಗ್ರ್ಯಾಂಡ್‌ಸ್ಲಾಂ ಟ್ರೋಫಿಗೆ ಮುತ್ತಿಟ್ಟಿದ್ದ ವಿಶ್ವ ನಂ.1 ರೊಮೇನಿಯಾದ ಸಿಮೋನಾ ಹಾಲೆಪ್‌, ಮಹಿಳಾ ಸಿಂಗಲ್ಸ್‌ 3ನೇ ಸುತ್ತಿನಲ್ಲಿ ಸೋಲುಂಡು ಹೊರಬಿದ್ದಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ಚೈನೀಸ್‌ ತೈಪೆಯ ಶೀ-ಸು-ವೀ ವಿರುದ್ಧ 6-3, 4-6, 5-7 ಸೆಟ್‌ಗಳಲ್ಲಿ ಸೋಲುಂಡರು. ಮ್ಯಾಚ್‌ ಪಾಯಿಂಟ್‌ ಉಳಿಸಿಕೊಂಡ ಸು ವೀ ಛಲ ಬಿಡದೆ ಹೋರಾಡಿ ಸಿಂಗಲ್ಸ್‌ನಲ್ಲಿ ಮೊದಲ ಬಾರಿಗೆ ಪ್ರಿ ಕ್ವಾರ್ಟರ್‌ ಪ್ರವೇಶಿಸಿದರು.

ಅಗ್ರ ಶ್ರೇಯಾಂಕಿತೆ ಹಾಲೆಪ್‌ ಸೋಲುಂಡು ಹೊರಬೀಳುತ್ತಿದ್ದಂತೆ, ಮಹಿಳಾ ಸಿಂಗಲ್ಸ್‌ನಲ್ಲಿ ಅಗ್ರ 10 ಶ್ರೇಯಾಂಕಿತೆಯರ ಪೈಕಿ ಕೇವಲ ಕ್ಯಾರೋಲಿನಾ ಪ್ಲಿಸ್ಕೋವಾ (7ನೇ ಶ್ರೇಯಾಂಕಿತೆ) ಮಾತ್ರ ಉಳಿದಿದ್ದಾರೆ. ಅಗ್ರ ಆಟಗಾರ್ತಿಯರು ಆರಂಭಿಕ ಸುತ್ತುಗಳಲ್ಲೇ ಸೋಲು ಕಾಣುತ್ತಿರುವುದು, 25ನೇ ಶ್ರೇಯಾಂಕ ಹೊಂದಿರುವ ಮಾಜಿ ಚಾಂಪಿಯನ್‌ ಸೆರೆನಾ ವಿಲಿಯಮ್ಸ್‌ ಪ್ರಶಸ್ತಿ ಹಾದಿಯನ್ನು ಸುಗುಮಗೊಳಿಸುತ್ತಿದೆ.

ಅಂತಿಮ 16ರ ಸುತ್ತಿಗೆ ಶರಣ್‌ ಜೋಡಿ: ಪುರುಷರ ಡಬಲ್ಸ್‌ 2ನೇ ಸುತ್ತಿನಲ್ಲಿ ಅರ್ಜೆಂಟೀನಾದ ಜೆಬಾಲೋಸ್‌ ಹಾಗೂ ಚಿಲಿಯ ಪೆರಾಲ್ಟಜೋಡಿ ವಿರುದ್ಧ 6-7, 4-6, 6-3, 7-6, 6-4 ಸೆಟ್‌ಗಳಲ್ಲಿ ಗೆದ್ದ ಭಾರತದ ದಿವಿಜ್‌ ಶರಣ್‌ ಹಾಗೂ ನ್ಯೂಜಿಲೆಂಡ್‌ನ ಸಿಟಾಕ್‌ ಜೋಡಿ ಪ್ರಿ ಕ್ವಾರ್ಟರ್‌ ಪ್ರವೇಶಿಸಿದೆ.

loader