ಬೆಂಗಳೂರು(ಅ.31): ದೇಶದ ಹಳೆಯ ಕ್ರೀಡಾಂಗಣಗಳಲ್ಲಿ ಒಂದಾದ ಫಿರೋಜ್ ಶಾ ಕೋಟ್ಲಾ ಮೈದಾನ ಗೇಟ್'ವೊಂದಕ್ಕೆ ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್'ಮನ್ ವಿರೇಂದ್ರ ಸೆಹ್ವಾಗ್ ಅವರ ಹೆಸರಿಡುವ ಮೂಲಕ ವೀರೂ ಸಾಧನೆಯನ್ನು ಡೆಲ್ಲಿ ಕ್ರಿಕೆಟ್ ಸಂಸ್ಥೆ ಸ್ಮರಿಸಿಕೊಂಡಿದೆ.

ಡೆಲ್ಲಿ ಕ್ರಿಕೆಟಿಗ ಸೆಹ್ವಾಗ್ ಸಾಧನೆ ಸಾರುವ ಬೋರ್ಡ್'ನಲ್ಲಿ ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಬಾರಿಸಿದ ರನ್'ಗಳ ಕಿರುಪರಿಚಯವಿದೆ. ಇದರ ಜೊತೆಗೆ ಸೆಹ್ವಾಗ್ ನಿರ್ಮಿಸಿರುವ ವಿಶಿಷ್ಟ ಸಾಧನೆಗಳನ್ನು ಸ್ಮರಿಸಿಕೊಳ್ಳಲಾಗಿದೆ.

ಆದರೆ ಸೆಹ್ವಾಗ್ ಅವರನ್ನು ಬಣ್ಣಿಸುವ ಭರದಲ್ಲಿ ತ್ರಿಶತಕ ಸಿಡಿಸಿದ ಏಕೈಕ ಭಾರತೀಯ ಬ್ಯಾಟ್ಸ್'ಮನ್ ಎಂದು ಬರೆಯಲಾಗಿದೆ.

ಸೆಹ್ವಾಗ್ ಪಾಕಿಸ್ತಾನದ ವಿರುದ್ಧ 2004ರಲ್ಲಿ ಮುಲ್ತಾನಿನಲ್ಲಿ ಚೊಚ್ಚಲ ತ್ರಿಶತಕ(309) ಸಿಡಿಸಿದ್ದರು, ಆ ಬಳಿಕ 2008ರಲ್ಲಿ ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ(319 ರನ್) ಎರಡನೇ ತ್ರಿಶತಕ ದಾಖಲಿಸಿದ್ದರು.

ಆದರೆ ಭಾರತ ಪರ ಕರುಣ್ ನಾಯರ್ 2016ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಜೇಯ 303 ತ್ರಿಶತಕ ಸಿಡಿಸಿದ್ದನ್ನು ಡಿಡಿಸಿಎ ಮರೆತಿದೆ.

ಇನ್ನು ಐಪಿಎಲ್'ನಲ್ಲಿ ಡೆಲ್ಲಿ ಪ್ರಾಂಚೈಸಿ ತಂಡವಾದ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಕರುಣ್ ನಾಯರ್ ಅವರನ್ನೇ ಡಿಡಿಸಿಎ ಮರೆತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಖಂಡನೆಗೆ ಒಳಗಾಗುತ್ತಿದೆ.