ಕೊನೆಗೂ ಧೋನಿ ಬಗ್ಗೆ ಮುಲ್ತಾನಿನ ಸುಲ್ತಾನ ಕ್ರಿಕೆಟ್ ಟಾಕೀಸ್'ನಲ್ಲಿ ಎಕ್ಸ್'ಕ್ಲೂಸಿವ್ ಆದ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

ಭಾರತದ ಏಕದಿನ ಹಾಗೂ ಟಿ20 ತಂಡದ ನಾಯಕತ್ವಕ್ಕೆ ಮಹೇಂದ್ರ ಸಿಂಗ್ ಧೋನಿ ರಾಜಿನಾಮೆ ಸಲ್ಲಿಸಿದ್ದು ಕ್ರೀಡಾವಲಯದಲ್ಲಿ ಸಾಕಷ್ಟು ಸಂಚಲನವನ್ನೇ ಉಂಟು ಮಾಡಿತ್ತು.

ಸಚಿನ್'ರಿಂದ ಕೊಹ್ಲಿವರೆಗೂ ಪ್ರತಿಯೊಬ್ಬರೂ ಧೋನಿಯ ಸಾಧನೆಯನ್ನು ಕೊಂಡಾಡಿ ಶುಭಹಾರೈಸಿದ್ದು ನಿಮಗೆಲ್ಲಾ ಗೊತ್ತೆಯಿದೆ. ಆದರೆ ಸ್ಫೋಟಕ ಬ್ಯಾಟ್ಸ್'ಮನ್ ವಿರೇಂದ್ರ ಸೆಹ್ವಾಗ್ ಮಾತ್ರ ಈ ಕುರಿತಂತೆ ತಕ್ಷಣವಾಗಿ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲಕ್ಕೀಡಾಗುವಂತೆ ಮಾಡಿದ್ದಂತೂ ಸುಳ್ಳಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಸೆಹ್ವಾಗ್, ಧೋನಿ ನಿರ್ಧಾರದ ಬಗ್ಗೆ ಈವರೆಗೂ ತುಟಿ ಬಿಚ್ಚಿರಲಿಲ್ಲ. ಈಗ ಕೊನೆಗೂ ಧೋನಿ ಬಗ್ಗೆ ಮುಲ್ತಾನಿನ ಸುಲ್ತಾನ ಕ್ರಿಕೆಟ್ ಟಾಕೀಸ್'ನಲ್ಲಿ ಎಕ್ಸ್'ಕ್ಲೂಸಿವ್ ಆದ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

'ಮಹೇಂದ್ರ ಸಿಂಗ್ ಧೋನಿ ನಾಯಕತ್ವ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂದು ಗೊತ್ತಿತ್ತು. ಆದರೆ ನಾನು ಊಹಿಸಿದ್ದಕ್ಕಿಂತ ಮುಂಚಿತವಾಗಿಯೇ ರಾಜಿನಾಮೆ ನೀಡಿದ್ದಾರೆ. ಏಳು ಅವರ ಇಷ್ಟದ ನಂಬರ್, ಹಾಗಾಗಿ ಏಳನೇ ತಾರೀಕಿನಂದೇ ಶುಭ ಕೋರುತ್ತಿದ್ದೇನೆ. ಧೋನಿ ಹೃದಯವಂತ ಹಾಗೆಯೇ ಒಳ್ಳೆಯ ನಾಯಕ. ಭವಿಷ್ಯದ ದಿನಗಳಲ್ಲಿ ಏಳನೇ ಕ್ರಮಾಂಕದ ವಿಕೆಟ್ ಕೀಪರ್ ಬ್ಯಾಟ್ಸ್'ಮನ್'ಗೆ ಒಳಿತಾಗಲಿ' ಎಂದು ಸೆಹ್ವಾಗ್ ಶುಭಕೋರಿದ್ದಾರೆ.

ಇದು ಧೋನಿಗೆ ಕೋರಿದ ಶುಭಾಶಯವೋ, ಇದರಲ್ಲೂ ಕಾಲೆಳೆಯುವ ತಂತ್ರವಿದೆಯೋ ಎಂಬ ಗೊಂದಲ ಮಾತ್ರ ಕ್ರಿಕೆಟ್ ಅಭಿಮಾನಿಗಳೇ ಅರ್ಥಮಾಡಿಕೊಳ್ಳಬೇಕಿದೆ.