ಮೂರನೇ ಟೆಸ್ಟ್'ನಲ್ಲಿ ಸಮಯೋಚಿತವಾಗಿ ಬ್ಯಾಟಿಂಗ್ ನಡೆಸಿದ ನಾಯಕ ವಿರಾಟ್ ಕೊಹ್ಲಿ(ಅಜೇಯ 103) ಹಾಗೂ ಅಜಿಂಕ್ಯಾ ರಹಾನೆ(ಅಜೇಯ 79) 167 ರನ್'ಗಳ ಮುರಿಯದ ಜೊತೆಯಾಟವಾಡಿದ್ದಾರೆ. ಈ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ.
ಇಂದೋರ್(ಅ.08): ಆಕರ್ಷಕ ಬ್ಯಾಟಿಂಗ್ ಮೂಲಕ ಭರ್ಜರಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ ತಂಡವನ್ನು ಸಂಕಷ್ಟದಿಂದ ಪಾರುಮಾಡಿದ್ದು ಮಾತ್ರವಲ್ಲದೆ, ಟೀಂ ಇಂಡಿಯಾಗೆ ಮೊದಲ ದಿನದ ಗೌರವವನ್ನು ತಂದುಕೊಟ್ಟಿದ್ದಾರೆ.
ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವೆ ಇಂದೋರ್'ನಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸಿತು. ಆದರೆ ಸಮಯೋಚಿತವಾಗಿ ಬ್ಯಾಟಿಂಗ್ ನಡೆಸಿದ ನಾಯಕ ವಿರಾಟ್ ಕೊಹ್ಲಿ(ಅಜೇಯ 103) ಹಾಗೂ ಅಜಿಂಕ್ಯಾ ರಹಾನೆ(ಅಜೇಯ 79) 167 ರನ್'ಗಳ ಮುರಿಯದ ಜೊತೆಯಾಟವಾಡುವ ಮೂಲಕ ತಂಡವನ್ನು ಸುಭದ್ರ ಸ್ಥಿತಿಗೆ ತರುವಲ್ಲಿ ಯಶಸ್ವಿಯಾ. ಮೊದಲ ದಿನದಾಟ ಮುಕ್ತಾಯಕ್ಕೆ ಭಾರತ ತಂಡ ಮೂರು ವಿಕೆಟ್ ನಷ್ಟಕ್ಕೆ 267 ರನ್ ಕಲೆಹಾಕಿದೆ.
ಆರಂಭಿಕ ಆಟಗಾರ ಮುರುಳಿ ವಿಜಯ್(10) ತಂಡದ ಮೊತ್ತ 26 ರನ್'ಗಳಿದ್ದಾಗ ಜೀತನ್ ಪಟೇಲ್ ಎಸೆತದಲ್ಲಿ ಲಾಥಮ್'ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಇನ್ನು ದೀರ್ಘಕಾಲದಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಗೌತಮ್ ಗಂಭೀರ್ ಕೂಡ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳುವಲ್ಲಿ ಎಡವಿದರು. ಸ್ಫೋಟಕ ಆಟವಾಡಲು ಹೋಗಿ ಗಂಭೀರ್ ಕೈ ಸುಟ್ಟುಕೊಂಡರು. 53 ಎಸೆತಗಳನ್ನು ಎದುರಿಸಿದ ದೆಹಲಿಯ ಎಡಗೈ ಆಟಗಾರ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿದಂತೆ 29 ರನ್ ಗಳಿಸಲಷ್ಟೇ ಶಕ್ತರಾದರು.
ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿರು ಚೇತೇಶ್ವರ ಪೂಜಾರ ಆಟ 41 ರನ್'ಗಳಿಗೆ ಮುಕ್ತಾಯವಾಯಿತು. ತಂಡದ ಮೊತ್ತ 100 ರನ್'ಗಳಾಗಿದ್ದಾಗ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯಾ ರಹಾನೆ ತಂಡವನ್ನು ಸಂಕಷ್ಟದಿಂದ ಪಾರುಮಾಡಿದ್ದು ಮಾತ್ರವಲ್ಲದೇ ಎರಡನೇ ದಿನಕ್ಕೆ ತಮ್ಮ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ನೆಲಕಚ್ಚಿ ಆಡುತ್ತಿರುವ ವಿರಾಟ್ ಹಾಗೂ ರಹಾನೆ ಆಟ ಎದುರಾಳಿ ಬೌಲರ್'ಗಳಲ್ಲಿ ಆತಂಕ ಮೂಡಿಸಿರುವುದಂತೂ ಸುಳ್ಳಲ್ಲ. ಈ ಜೋಡಿ ಟೀಂ ಇಂಡಿಯಾ ಪರ ಬೃಹತ್ ಮೊತ್ತ ಕಲೆಹಾಕುವ ಮುನ್ಸೂಚನೆ ನೀಡಿದ್ದಾರೆ.
