ಬೆಂಗಳೂರು: ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ವಿರುದ್ಧ ಸೋಲುಂಡಿದ್ದ ಆರ್‌ಸಿಬಿ, ತವರಿನಲ್ಲಿ ಗುರುವಾರ (ಮಾ.28) ನಡೆಯಲಿರುವ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯಕ್ಕೆ ಸಜ್ಜಾಗುತ್ತಿದೆ. 

ಇದಕ್ಕಾಗಿ ಆರ್‌ಸಿಬಿ ಆಟಗಾರರು ಮಂಗಳವಾರದಿಂದಲೇ ಅಭ್ಯಾಸ ಶುರು ಮಾಡಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವ ಲೆಕ್ಕಚಾರದಲ್ಲಿ ಕೊಹ್ಲಿ ಪಡೆ ಇದೆ. ಮೊದಲ ಪಂದ್ಯದಲ್ಲಿ ಸಂಪೂರ್ಣ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದ ಆರ್‌ಸಿಬಿ, ಅಭ್ಯಾಸದ ವೇಳೆ ಬ್ಯಾಟಿಂಗ್‌ನತ್ತ ಹೆಚ್ಚು ಗಮನ ಹರಿಸಿತು. 

ಕೊಹ್ಲಿ, ಡಿವಿಲಿಯರ್ಸ್‌, ಪಾರ್ಥೀವ್‌ ಪಟೇಲ್‌ ಬ್ಯಾಟಿಂಗ್‌ ಅಭ್ಯಾಸ ನಡೆಸಿದರೆ, ಉಮೇಶ್‌ ಯಾದವ್‌, ಮೊಹಮದ್‌ ಸಿರಾಜ್‌, ಡಿ ಗ್ರಾಂಡ್‌ ಹೋಮ್‌, ಮೋಯಿನ್‌ ಅಲಿ ಬೌಲಿಂಗ್‌ ಅಭ್ಯಾಸ ಮಾಡಿದರು. ಮುಂಬೈ ತಂಡ ಸಹ ಅಭ್ಯಾಸ ನಡೆಸಿತು.