ಏಕದಿನ ಕ್ರಿಕೆಟ್ ವೃತ್ತಿಜೀವನದ 200ನೇ ಪಂದ್ಯದಲ್ಲಿ ಶತಕ ಭಾರಿಸಿದವರ ಪಟ್ಟಿಯಲ್ಲಿ ಕೊಹ್ಲಿ 2ನೇಯವರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಎಬಿ ಡೀವಿಲಿಯರ್ಸ್ ಕೂಡ ತಮ್ಮ 200ನೇ ಪಂದ್ಯದಲ್ಲಿ ಶತಕ ಭಾರಿಸಿದ್ದರು. ಆದರೆ, 200ನೇ ಪಂದ್ಯದಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿಯವರ ಹೆಸರಿಗೆ ದಾಖಲಾಗಿದೆ.

ಮುಂಬೈ(ಅ. 22): ಸಚಿನ್ ತೆಂಡೂಲ್ಕರ್ ಸ್ಥಾಪಿಸಿದ ಹಲವು ದಾಖಲೆಗಳನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಮಾತು ಕೇಳಿಬರುತ್ತಿತ್ತು. ಆದರೆ, ವಿರಾಟ್ ಕೊಹ್ಲಿ ಆ ಮಾತನ್ನು ಸುಳ್ಳು ಮಾಡಲು ಹೊರಟಿದ್ದಾರೆ. ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಕೊಹ್ಲಿ ಶತಕಗಳ ಮೇಲೆ ಶತಕ ಭಾರಿಸುತ್ತಾ ಸಚಿನ್ ದಾಖಲೆಯತ್ತ ಸಮೀಪಿಸುತ್ತಿದ್ದಾರೆ. ರನ್ ಮೆಷೀನ್ ಆಗಿರುವ ಕೊಹ್ಲಿ ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮತ್ತೊಂದು ಶತಕ ಭಾರಿಸಿದರು. ಅವರ ಆ ಇನ್ನಿಂಗ್ಸ್ ಮೂಲಕ ಕೆಲವಾರು ದಾಖಲೆ ಮತ್ತು ಮೈಲಿಗಲ್ಲು ಮುಟ್ಟಿದರು. ಕೊಹ್ಲಿ 121 ರನ್ ಗಳಿಸಿ ತಂಡಕ್ಕೆ ಉತ್ತಮ ಮೊತ್ತ ಕಲೆಹಾಕಲು ನೆರವಾದರು.

ವಿರಾಟ್ ಕೊಹ್ಲಿ ದಾಖಲೆ ಮತ್ತು ಮೈಲಿಗಲ್ಲು:

* ಏಕದಿನ ಕ್ರಿಕೆಟ್'ನಲ್ಲಿ ವಿರಾಟ್ ಕೊಹ್ಲಿ 31ನೇ ಶತಕ; ಅತೀ ಹೆಚ್ಚು ಶತಕ ಭಾರಿಸಿದವರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್'ರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಕೊಹ್ಲಿ. ಮಾಸ್ಟರ್'ಬ್ಲಾಸ್ಟರ್ ಸಚಿನ್ 39 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

* ಒಂದು ವರ್ಷದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಕ್ಯಾಪ್ಟನ್'ಗಳ ಪಟ್ಟಿಯಲ್ಲಿ ಕೊಹ್ಲಿಗೆ ಅಗ್ರಸ್ಥಾನ. ಈ ವರ್ಷ ಕೊಹ್ಲಿ 24 ಇನಿಂಗ್ಸಲ್ಲಿ 1,318 ರನ್ ಗಳಿಸಿದ್ದಾರೆ. ಅಜರುದ್ದೀನ್ 1998ರಲ್ಲಿ 33 ಇನಿಂಗ್ಸ್'ಗಳಿಂದ 1,268 ರನ್ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. ವಿಶ್ವಮಟ್ಟದಲ್ಲಿ ವರ್ಷವೊಂದರಲ್ಲಿ ಕೊಹ್ಲಿಗಿಂತ ಹೆಚ್ಚು ರನ್ ಗಳಿಸಿದ ಕ್ಯಾಪ್ಟನ್'ಗಳೆಂದರೆ ರಿಕಿ ಪಾಂಟಿಂಗ್ ಮತ್ತು ಮಿಸ್ಬಾ ಉಲ್ ಹಕ್. ಇವರಿಬ್ಬರು 1,424 ಮತ್ತು 1,373 ರನ್ ಗಳಿಸಿದ್ದಾರೆ.

* ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 110 ರನ್ ಗಡಿ ದಾಟಿದಾಗ, ನ್ಯೂಜಿಲೆಂಡ್ ವಿರುದ್ಧ 1 ಸಾವಿರ ರನ್ ಗಡಿ ದಾಟಿದ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡಿದ ಭಾರತದ 6ನೇ ಹಾಗೂ ವಿಶ್ವದ 27ನೇ ಆಟಗಾರನೆನಿಸಿದ್ದಾರೆ.

* ಏಕದಿನ ಕ್ರಿಕೆಟ್ ವೃತ್ತಿಜೀವನದ 200ನೇ ಪಂದ್ಯದಲ್ಲಿ ಶತಕ ಭಾರಿಸಿದವರ ಪಟ್ಟಿಯಲ್ಲಿ ಕೊಹ್ಲಿ 2ನೇಯವರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಎಬಿ ಡೀವಿಲಿಯರ್ಸ್ ಕೂಡ ತಮ್ಮ 200ನೇ ಪಂದ್ಯದಲ್ಲಿ ಶತಕ ಭಾರಿಸಿದ್ದರು. ಆದರೆ, 200ನೇ ಪಂದ್ಯದಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿಯವರ ಹೆಸರಿಗೆ ದಾಖಲಾಗಿದೆ.

* 200 ಪಂದ್ಯಗಳ ನಂತರ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿಯೇ ಅಗ್ರಜ. ಕೊಹ್ಲಿ 8,867 ರನ್ ಗಳಿಸಿದ್ದಾರೆ. ಎಬಿ ಡೀವಿಲಿಯರ್ಸ್ ತಮ್ಮ ಮೊದಲ 200 ಪಂದ್ಯಗಳಲ್ಲಿ 8,621 ರನ್ ಗಳಿಸಿದ್ದರು. ಸೌರವ್ ಗಂಗೂಲಿ 7,747 ರನ್ ಗಳಿಸಿದ್ದರು.

* 200 ಪಂದ್ಯಗಳಲ್ಲಿ ಅತೀ ಹೆಚ್ಚು ಶತಕ ಸಿಡಿಸಿರುವ ದಾಖಲೆಯೂ ಕೊಹ್ಲಿ ಹೆಸರಿಗೇ ಬಂದಿದೆ. ಈ ವಿಚಾರದಲ್ಲಿ ಎಬಿ ಡೀವಿಲಿಯರ್ಸ್ ಅವರ ದಾಖಲೆಯನ್ನೇ ಕೊಹ್ಲಿ ಮುರಿದಿದ್ದಾರೆ.

* ನೂರಕ್ಕೂ ಹೆಚ್ಚು ಪಂದ್ಯಗಳನ್ನಾಡಿದವರ ಪೈಕಿ ಕೊಹ್ಲಿಯೇ ಅತೀ ಹೆಚ್ಚು ಸರಾಸರಿ ಹೊಂದಿದ್ದಾರೆ. ಇವರು ಬರೋಬ್ಬರಿ 55.76 ರನ್ ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ.