ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಅವರನ್ನು ಸಂಪರ್ಕಿಸಿರುವ ಭಾರತ ತಂಡದ ಆಡಳಿತ, ಬಿಸಿಸಿಐ ಮುಂದಿನ ವರ್ಷಕ್ಕೆ ಆಟಗಾರರ ಗುತ್ತಿಗೆಯನ್ನು ನವೀಕರಿಸುವ ಮೊದಲು ಕೆಲ ಬೇಡಿಕೆಗಳನ್ನು ಮುಂದಿಡಲು ನಿರ್ಧರಿಸಿದೆ ಎನ್ನಲಾಗಿದ್ದು, ಇದೇ ಕಾರಣದಿಂದಾಗಿ ನ.30ರಂದು ಭೇಟಿ ನಿಗದಿ ಪಡಿಸಲಾಗಿದೆ.

ನವದೆಹಲಿ(ನ.28): ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಎಂ.ಎಸ್. .ಧೋನಿ ಹಾಗೂ ಕೋಚ್ ರವಿಶಾಸ್ತ್ರಿ ನವೆಂಬರ್ 30ರಂದು ಇಲ್ಲಿ ಬಿಸಿಸಿಐ ಆಡಳಿತ ಸಮಿತಿಯನ್ನು ಭೇಟಿಯಾಗಲಿದ್ದು, ಆಟಗಾರರ ಗುತ್ತಿಗೆ, ವೇತನ ಹೆಚ್ಚಳ, ಸ್ವಹಿತಾಸಕ್ತಿ ನಿಯಮಗಳ ಕುರಿತು ಸ್ಪಷ್ಟನೆ ಹಾಗೂ ಭವಿಷ್ಯದ ವೇಳಾಪಟ್ಟಿಯ ಕುರಿತು ಚರ್ಚೆ ನಡೆಸಲಿದೆ.

ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಅವರನ್ನು ಸಂಪರ್ಕಿಸಿರುವ ಭಾರತ ತಂಡದ ಆಡಳಿತ, ಬಿಸಿಸಿಐ ಮುಂದಿನ ವರ್ಷಕ್ಕೆ ಆಟಗಾರರ ಗುತ್ತಿಗೆಯನ್ನು ನವೀಕರಿಸುವ ಮೊದಲು ಕೆಲ ಬೇಡಿಕೆಗಳನ್ನು ಮುಂದಿಡಲು ನಿರ್ಧರಿಸಿದೆ ಎನ್ನಲಾಗಿದ್ದು, ಇದೇ ಕಾರಣದಿಂದಾಗಿ ನ.30ರಂದು ಭೇಟಿ ನಿಗದಿ ಪಡಿಸಲಾಗಿದೆ.ಸೆ.30ಕ್ಕೇ ಆಟಗಾರರ ಗುತ್ತಿಗೆ ಅವಧಿ ಅಂತ್ಯಗೊಂಡಿದ್ದು, ಬಿಸಿಸಿಐ ಇನ್ನೂ ನವೀಕರಿಸಿಲ್ಲ. ಮೂಲಗಳ ಪ್ರಕಾರ, ಆಟಗಾರರು ತಮ್ಮ ವೇತನವನ್ನು ಶೇ.100ರಷ್ಟು ಹೆಚ್ಚಿಸಬೇಕು ಎಂದು ಬೇಡಿಕೆಯಿಡುವ ಸಾಧ್ಯತೆ ಇದೆ. ಸದ್ಯ ಬಿಸಿಸಿಐ ‘ಎ’ ದರ್ಜೆ ಆಟಗಾರರಿಗೆ ವಾರ್ಷಿಕ 2 ಕೋಟಿ,‘ಬಿ’ ದರ್ಜೆ ಆಟಗಾರರಿಗೆ 1 ಕೋಟಿ ಹಾಗೂ ‘ಸಿ’ ದರ್ಜೆ ಆಟಗಾರರಿಗೆ 50 ಲಕ್ಷ ನೀಡುತ್ತಿದೆ.

ಕುಂಬ್ಳೆ 4 ಕೋಟಿ ಬೇಕು ಎಂದಿದ್ದರು

ಮಾಜಿ ಕೋಚ್ ಅನಿಲ್ ಕುಂಬ್ಳೆ ತಮ್ಮ ಪ್ರಸ್ತಾಪದಲ್ಲಿ ‘ಎ’ ದರ್ಜೆ ಆಟಗಾರರ ವೇತನವನ್ನು 4 ಕೋಟಿಗೆ ಹಾಗೂ ‘ಬಿ’ ದರ್ಜೆ ಆಟಗಾರರ ವೇತನವನ್ನು 3 ಕೋಟಿಗೆ ಏರಿಸಬೇಕು ಎಂದು ಕೇಳಿಕೊಂಡಿದ್ದರು. ಐಪಿಎಲ್ ಪ್ರಸಾರ ಹಕ್ಕಿನಿಂದ ಬಿಸಿಸಿಐಗೆ ಭಾರೀ ಲಾಭ ದೊರೆತಿರುವ ಕಾರಣ, ಆಟಗಾರರು ತಮ್ಮ ವೇತನ ಹೆಚ್ಚಿಸುವಂತೆ ಬೇಡಿಕೆ ಇಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದರೊಂದಿಗೆ 2019ರಿಂದ 2022ರ ಅವಧಿಯಲ್ಲಿ ಭಾರತ ಆಡಲಿರುವ ಸರಣಿಗಳ ವೇಳಾಪಟ್ಟಿ ರಚನೆ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗಿದೆ. ಈ ಅವಧಿಯಲ್ಲಿ ವಿಶ್ವ ಟೆಸ್ಟ್ ಹಾಗೂ ಏಕದಿನ ಚಾಂಪಿಯನ್‌ಶಿಪ್ ನಡೆಯಲಿದ್ದು, ಅದಕ್ಕೆ ಅನುಗುಣವಾಗಿ ಇನ್ನಿತರ ಸರಣಿಗಳನ್ನು ಆಯೋಜಿಸಬೇಕು. ಆಟಗಾರರಿಗೆ ಅಗತ್ಯ ವಿಶ್ರಾಂತಿ ನೀಡಬೇಕು ಎಂದು ಕೊಹ್ಲಿ,ಧೋನಿ ಹಾಗೂ ಶಾಸ್ತ್ರಿ ಮನವಿ ಮಾಡಲಿದ್ದಾರೆ ಎನ್ನಲಾಗಿದೆ. ಇದರ ಜತೆಗೆ ಸ್ವಹಿತಾಸಕ್ತಿ ನಿಯಮಗಳ ಬಗ್ಗೆ ಆಟಗಾರರಲ್ಲಿ ಇನ್ನೂ ಗೊಂದಲವಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುವಂತೆಯೂ ಕೊಹ್ಲಿ ಹಾಗೂ ತಂಡ ಕೇಳಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.