‘2013ರಲ್ಲಿ ಪ್ರವಾಹಕ್ಕೆ ತತ್ತರಿಸಿದ್ದ ಉತ್ತರಾಖಂಡ್ ಜನತೆಯ ಪುನರ್ವಸತಿಗಾಗಿ ನೀಡಲಾಗಿದ್ದ ಹಣವನ್ನು 2015ರಲ್ಲಿ ಪ್ರವಾಸ ತಾಣಗಳ ಪ್ರಚಾರಕ್ಕೆ ರಾವತ್ ಸರ್ಕಾರ ಬಳಕೆ ಮಾಡಿದೆ’ ಎಂದು ರಾವತ್ ವಿರುದ್ಧ ಅಜಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡೆಹ್ರಾಡೂನ್(ಫೆ.26): ಉತ್ತರಾಖಂಡ್‌ನ ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಪತ್ತು ಪರಿಹಾರ ಧನವನ್ನು ರಾಜ್ಯ ಪ್ರವಾಸೋದ್ಯಮ ಪ್ರಚಾರಕ್ಕಾಗಿ ದುರುಪಯೋಗ ಮಾಡಿದೆ ಎಂದು ಬಿಜೆಪಿ ನಾಯಕ ಮತ್ತು ಆರ್‌ಟಿಐ ಕಾರ್ಯಕರ್ತ ಅಜೇಂದ್ರ ಅಜಯ್ ಆರೋಪಿಸಿದ್ದಾರೆ.

ಈ ಕುರಿತು ಶನಿವಾರ ಮಾಹಿತಿ ಹಕ್ಕು ಕಾಯ್ದೆಯಡಿ ತಾವು ಪಡೆದ ದಾಖಲೆಗಳನ್ನು ಪ್ರಸ್ತುತ ಪಡಿಸಿದ ಅವರು, ‘ರಾಜ್ಯದಲ್ಲಿರುವ ಪ್ರವಾಸೋದ್ಯಮ ತಾಣಗಳ ಪ್ರಚಾರಕ್ಕಾಗಿ ಜನಪ್ರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಭಾಗವಹಿಸಿದ 60 ಸೆಕೆಂಡ್‌ನ ಆಡಿಯೊ-ವಿಡಿಯೊ ಕ್ಲಿಪ್‌ಗಾಗಿ ಕೈಲಾಸ ಎಂಟರ್‌ಟೈನ್‌ಮೆಂಟ್ ಪ್ರೈ.ಲಿಗೆ ವಿಪತ್ತು ಪರಿಹಾರದ ಧನದ 47.19ಲಕ್ಷ ಹಣವನ್ನು ರಾವತ್ ಸರ್ಕಾರ ಪಾವತಿ ಮಾಡಿದೆ’ ಎಂದು ಆರೋಪಿಸಿದ್ದಾರೆ. ಕೈಲಾಸ್ ಎಂಟರ್‌ಟೇನ್‌ಮೆಂಟ್‌ನಲ್ಲಿ ಗಾಯಕ ಕೈಲಾಶ್ ಖೇರ್ ಪಾಲುದಾರರು.

‘2013ರಲ್ಲಿ ಪ್ರವಾಹಕ್ಕೆ ತತ್ತರಿಸಿದ್ದ ಉತ್ತರಾಖಂಡ್ ಜನತೆಯ ಪುನರ್ವಸತಿಗಾಗಿ ನೀಡಲಾಗಿದ್ದ ಹಣವನ್ನು 2015ರಲ್ಲಿ ಪ್ರವಾಸ ತಾಣಗಳ ಪ್ರಚಾರಕ್ಕೆ ರಾವತ್ ಸರ್ಕಾರ ಬಳಕೆ ಮಾಡಿದೆ’ ಎಂದು ರಾವತ್ ವಿರುದ್ಧ ಅಜಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾವತ್ ಅವರ ಮಾಧ್ಯಮ ಸಲಹೆಗಾರ ಸುರೇದ್ರ ಕುಮಾರ್, ರಾಜ್ಯದ ಪ್ರವಾಸೋದ್ಯಮ ಪ್ರಚಾರಕ್ಕಾಗಿ ಕೊಹ್ಲಿ ಅವರನ್ನು ಬಳಸಿಕೊಂಡ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಯಾವುದೇ ಅಕ್ರಮ ಎಸಗಿಲ್ಲ ಎಂಬುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ.