ಕೇಂದ್ರ ಗುತ್ತಿಗೆ ಮೊತ್ತವನ್ನೂ ಏರಿಸುವಂತೆ ಆಟಗಾರರು ಮನವಿ ಮಾಡಿದ್ದು, ಈ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಚೇತೇಶ್ವರ್ ಪೂಜಾರ ಸೇರಿ ಕೆಲ ಆಟಗಾರರು ಕೇವಲ ಒಂದೇ ಮಾದರಿಯಲ್ಲಿ ಆಡುವುದರಿಂದ ಅವರಿಗೂ ನ್ಯಾಯ ಒದಗಿಸುವುದು ಬಿಸಿಸಿಐ ಕರ್ತವ್ಯವಾಗಿದ್ದು, ಬೋರ್ಡ್ ಅದಕ್ಕೆ ಬದ್ಧವಾಗಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನವದೆಹಲಿ(ಡಿ.16): ವೇತನ ಹೆಚ್ಚಳಕ್ಕೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಎಂ.ಎಸ್.ಧೋನಿ ಹಾಗೂ ಕೋಚ್ ರವಿಶಾಸ್ತ್ರಿ ಸಲ್ಲಿಸಿದ್ದ ಮನವಿಯನ್ನು, ಸುಪ್ರೀಂ ಕೋರ್ಟ್
ನೇಮಿತ ಬಿಸಿಸಿಐ ಆಡಳಿತ ಸಮಿತಿ ಪುರಸ್ಕರಿಸಿದ್ದು, ಶೀಘ್ರದಲ್ಲಿ ಭಾರತೀಯ ಕ್ರಿಕೆಟಿಗರ ವೇತನ ಶೇ.100ರಷ್ಟು ಏರಿಕೆಯಾಗಲಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಆಡಳಿತ ಸಮಿತಿ, ಸದ್ಯ ಆಟಗಾರರ ವೇತನಕ್ಕೆಂದು ಮೀಸಲಿಟ್ಟಿರುವ ₹180 ಕೋಟಿಗೆ ಹೆಚ್ಚುವರಿಯಾಗಿ ₹200 ಕೋಟಿ ಸೇರಿಸುವ ಬಗ್ಗೆ ಚರ್ಚೆ ನಡೆಸಿದ್ದು, ಈ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಮುಂದಾಗಿದೆ ಎನ್ನಲಾಗಿದೆ. ಹಿರಿಯ ಹಾಗೂ ಕಿರಿಯ ತಂಡಗಳ ಆಟಗಾರರಿಗೆ ಸಮ ಪ್ರಮಾಣದಲ್ಲಿ ವೇತನ ಹೆಚ್ಚಿಸುವ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಬಗ್ಗೆ ಬಿಸಿಸಿಐ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ಆಡಳಿತ ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ. ಸದ್ಯ ಚಾಲ್ತಿಯಲ್ಲಿರುವ ಮಾದರಿ ಪ್ರಕಾರ ಬಿಸಿಸಿಐ ತನ್ನ ವಾರ್ಷಿಕ ಆದಾಯದ ಶೇ.26ರಷ್ಟನ್ನು ಆಟಗಾರರ ವೇತನಕ್ಕಾಗಿ ಮೀಸಲಿಟ್ಟಿದ್ದು ಅದರಲ್ಲಿ ಶೇ.13ರಷ್ಟು ಅಂತಾರಾಷ್ಟ್ರೀಯ ಆಟಗಾರರಿಗೆ, ಶೇ.10.6ರಷ್ಟು ದೇಸಿ ಆಟಗಾರರಿಗೆ ಹಾಗೂ ಉಳಿದ ಮೊತ್ತವನ್ನು ಮಹಿಳಾ ಹಾಗೂ ಕಿರಿಯ ತಂಡಗಳ ಆಟಗಾರರಿಗೆ ಬಿಸಿಸಿಐ ಹಂಚುತ್ತಿದೆ.
2016ರಲ್ಲಿ ಕೊಹ್ಲಿಗೆ ₹5.51 ಕೋಟಿ: ಭಾರತ ತಂಡದ ನಾಯಕ ಕೊಹ್ಲಿ 2017ರಲ್ಲಿ ಒಟ್ಟು 46 ಪಂದ್ಯಗಳನ್ನು ಆಡಿದ್ದು ₹5.51 ಕೋಟಿ ವೇತನ ಪಡೆದುಕೊಂಡಿದ್ದಾರೆ. ಇದರಲ್ಲಿ ಅವರ ಕೇಂದ್ರ ಗುತ್ತಿಗೆ ಮೊತ್ತ ಸಹ ಸೇರಿದೆ. ಒಂದೊಮ್ಮೆ ನೂತನ ನಿಯಮ ಜಾರಿಗೆ ಬಂದರೆ, ಮುಂದಿನ ಸಾಲಿನಿಂದ ಕೊಹ್ಲಿಯ ವಾರ್ಷಿಕ ವೇತನ ₹10 ಕೋಟಿ ದಾಟಲಿದೆ. ಕೊಹ್ಲಿ ಐಪಿಎಲ್ ಗುತ್ತಿಗೆ, ಜಾಹೀರಾತು, ಪ್ರಚಾರ ಕಾರ್ಯಗಳಿಂದ ಅತಿಹೆಚ್ಚು ಸಂಪಾದಿಸುತ್ತಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ‘ಹಿರಿಯ ಆಟಗಾರರಿಗೆ ಶೇ.100ರಷ್ಟು ವೇತನ ಹೆಚ್ಚಳವಾಗುವುದು ಖಚಿತ. ದೇಸಿ ಆಟಗಾರರ ವೇತನವೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಕ್ರಿಕೆಟಿಗರಿಂದಲೇ ಬೋರ್ಡ್'ಗೆ ಕೋಟ್ಯಂತರ ರುಪಾಯಿ ಹಣ ಬರುವುದು. ಹೀಗಾಗಿ, ಆಟಗಾರರ ವೇತನಕ್ಕೆಂದು ಹೆಚ್ಚುವರಿ ₹200 ಕೋಟಿ ಖರ್ಚು ಮಾಡಿದರೆ, ಬಿಸಿಸಿಐ ನಷ್ಟವೇನೂ ಆಗುವುದಿಲ್ಲ’ ಎಂದು ಹೇಳಿದ್ದಾರೆ. ಕೇಂದ್ರ ಗುತ್ತಿಗೆ ಮೊತ್ತವನ್ನೂ ಏರಿಸುವಂತೆ ಆಟಗಾರರು ಮನವಿ ಮಾಡಿದ್ದು, ಈ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಚೇತೇಶ್ವರ್ ಪೂಜಾರ ಸೇರಿ ಕೆಲ ಆಟಗಾರರು ಕೇವಲ ಒಂದೇ ಮಾದರಿಯಲ್ಲಿ ಆಡುವುದರಿಂದ ಅವರಿಗೂ ನ್ಯಾಯ ಒದಗಿಸುವುದು ಬಿಸಿಸಿಐ ಕರ್ತವ್ಯವಾಗಿದ್ದು, ಬೋರ್ಡ್ ಅದಕ್ಕೆ ಬದ್ಧವಾಗಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
