ಬೆಂಗಳೂರು[ಸೆ.25]: ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲಿ ಶುಭಾರಂಭ ಮಾಡುವ ಗುರಿ ಹೊಂದಿದ್ದ ಕರ್ನಾಟಕ ತಂಡಕ್ಕೆ ನಿರಾಸೆ ಉಂಟಾಗಿದೆ.ಟೂರ್ನಿಯ ಮೊದಲ ಪಂದ್ಯವೇ ಮಳೆಗೆ ಬಲಿಯಾಗಿದೆ.

ಮಂಗಳವಾರ ಇಲ್ಲಿನ ಆಲೂರು ಮೈದಾನದಲ್ಲಿ ಹೈದರಾಬಾದ್ ವಿರುದ್ಧ ನಡೆಯಬೇಕಿದ್ದ ಪಂದ್ಯ, ಟಾಸ್ ಕೂಡ ಕಾಣದೆ ರದ್ದಾಯಿತು. ಸೋಮವಾರ ಸಂಜೆಯಿಂದಲೇ ಸುರಿದಿದ್ದ ಭಾರೀ ಮಳೆಯಿಂದಾಗಿ ಮೈದಾನ ಸಂಪೂರ್ಣ ಒದ್ದೆಯಾಗಿತ್ತು. ಮಂಗಳವಾರ ಬೆಳಗ್ಗೆಯೂ ಕೆಲ ಕಾಲ ಮಳೆ ಬಿದ್ದ ಕಾರಣ, ಮೈದಾನ ಜಲಾವೃತಗೊಂಡಿತ್ತು. ಮೈದಾನ ಸಿಬ್ಬಂದಿ ಸೂಪರ್ ಸಾಪರ್ ಯಂತ್ರ ಬಳಸಿ ಮೈದಾನ ಒಣಗಿಸಲು ಹರಸಾಹಸ ನಡೆಸಿದರೂ, ಫಲ ಸಿಗಲಿಲ್ಲ. ಬೆಳಗ್ಗೆ 11.30ರ ವೇಳೆಗೆ ಪರಿಶೀಲನೆ ನಡೆಸಿದ ಅಂಪೈರ್‌ಗಳು, ಬಳಿಕ ಮಧ್ಯಾಹ್ನ 1.30ಕ್ಕೆ ಅಂತಿಮ ಪರಿಶೀಲನೆ ನಡೆಸಿ ಪಂದ್ಯವನ್ನು ರದ್ದುಗೊಳಿಸಿದರು. ಹೀಗಾಗಿ ಉಭಯ ತಂಡಗಳು ತಲಾ 1 ಅಂಕ ಹಂಚಿಕೊಂಡವು.

ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಒಟ್ಟು 3 ಮೈದಾನಗಳಲ್ಲಿದ್ದು, ಇಲ್ಲೇ ನಡೆಯಬೇಕಿದ್ದ ಆಂಧ್ರ-ಛತ್ತೀಸ್‌ಗಢ, ಮುಂಬೈ-ಸೌರಾಷ್ಟ್ರ ‘ಎ’ ಗುಂಪಿನ ಪಂದ್ಯಗಳು ಮಳೆಗೆ ಬಲಿಯಾದವು. ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ತಂಡ ತನ್ನ 2ನೇ ಪಂದ್ಯದಲ್ಲಿ ಜಾರ್ಖಂಡ್ ತಂಡವನ್ನು ಎದುರಿಸಲಿದೆ.