Asianet Suvarna News Asianet Suvarna News

ವಿಂಬಲ್ಡನ್‌ನಲ್ಲಿ ಮಿಂಚಿದ ಯಾದಗಿರಿಯ ವಿಹಾನ್ ರೆಡ್ಡಿ..!

ವಿಂಬಲ್ಡನ್ ಟೆನ್ನಿಸ್ ನಲ್ಲಿ ಅನೇಕ ಸಾಧನೆ ಮಾಡಿರುವ ವಿಹಾನ್
ದೇಶ ವಿದೇಶಗಳಲ್ಲಿ ಅನೇಕ  ಪಂದ್ಯಗಳಲ್ಲಿ ಗೆಲುವಿನ ಪದಕ ಪಡೆದಿರುವ ವಿಹಾನ್
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಎಲ್ಹೇರಿ ಗ್ರಾಮದ ವಿಹಾನ್ ರೆಡ್ಡಿ
 

Vihaan Reddy makes sensational start to junior career Shine in Wimbledon kvn
Author
First Published Jul 21, 2023, 1:09 PM IST

- ಆನಂದ್ ಎಂ ಸೌದಿ, ಕನ್ನಡಪ್ರಭ

ಯಾದಗಿರಿ(ಜು.21): 20 ವರ್ಷದ ಕಾರ್ಲೋಸ್ ಆಲ್ಕರಜ್ ವಿಂಬಲ್ಡನ್ ಚಾಂಪಿಯನ್ ಆಗಿದ್ದನ್ನು ಟೆನಿಸ್ ಜಗತ್ತೇ ಸಂಭ್ರಮಿಸಿತ್ತು. ಅದೇ ಟೂರ್ನಿಯ ಅಂಡರ್-14 ಬಾಲಕರ ವಿಭಾಗದಲ್ಲಿ ಯಾದಗಿರಿ ಜಿಲ್ಲೆಯ ಗುರುಮಠಕಲ್ ಸಮೀಪದ ಎಲ್ಹೇರಿ ಗ್ರಾಮ ಮೂಲದ, ಸದ್ಯ ಅಮೆರಿಕದ ಕ್ಯಾಲಿಫೋರ್ನಿ ಯಾದಲ್ಲಿರುವ 13 ವರ್ಷದ ವಿಹಾನ್ ರೆಡ್ಡಿ ಸೆಮಿಫೈನಲ್ ಪ್ರವೇಶಿಸಿದ್ದರು ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲದ ವಿಷಯ. ಕಳೆದ ವಾರ ನಡೆದ ಟೂರ್ನಿಯಲ್ಲಿ 2ನೇ ಶ್ರೇಯಾಂಕಿತರಾಗಿ ಕಣಕ್ಕಿಳಿದಿದ್ದ ವಿಹಾನ್ ತಮ್ಮ ಆಕರ್ಷಕ ಆಟದ ಮೂಲಕ ಗಮನ ಸೆಳೆದರು. ಸೆಮಿಫೈ ನಲ್‌ನಲ್ಲಿ ಸ್ಲೋವೇನಿಯಾದ ಸ್ವಿಟ್ ಸುಲ್ಜಿಚ್ ವಿರುದ್ಧ ಸೋಲುಂಡರು. ಆದರೆ ವಿಹಾನ್‌ರ ಆಟಕ್ಕೆ 20 ಗ್ರ್ಯಾನ್ ಸ್ಲಾಂಗಳ ಒಡೆಯ ರೋಜರ್ ಫೆಡರರ್, ಭಾರತದ ದಿಗ್ಗಜ ಆಟಗಾರ ರೋಹನ್ ಬೋಪಣ್ಣರಿಂದ ಮೆಚ್ಚುಗೆ ವ್ಯಕ್ತವಾಗಿದೆ.  

ಹಲವು ಪ್ರಶಸ್ತಿ ವಿಜೇತ ವಿಹಾನ್: ಈಗಾಗಲೇ ಹಲವು ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿ ಗಮನ ಸೆಳೆದಿದ್ದಾರೆ. ಈ ವರ್ಷ ಮದುರೈ ನಲ್ಲಿ ನಡೆದ ಐಟಿಎಫ್ ಟೂರ್ನಿಗಳ ಸಿಂಗಲ್ಸ್ ಹಾಗೂ ಡಬಲ್ಸ್, ಡೆಹ್ರಾಡೂನ್‌ನಲ್ಲಿ ಭಿಲಾಯಿ, ಗುರು ಗ್ರಾಮದಲ್ಲಿ ನಡೆದ ಐಟಿಎಫ್ ಟೂರ್ನಿಗಳ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆದ ವಿಹಾನ್, 2022ರಲ್ಲಿ ಅಮೆರಿಕದಲ್ಲಿ ವಿವಿಧ ಟೂರ್ನಿಗಳನ್ನು ಜಯಿಸಿದ್ದರು. ವಾರಕ್ಕೆ 12ರಿಂದ 15 ಗಂಟೆಗಳ ಕಾಲ ಅಭ್ಯಾಸ ನಡೆಸುವ ವಿಹಾನ್, ಮುಂದಿನ ಕೆಲವೇ ವರ್ಷಗಳಲ್ಲಿ ಹಿರಿಯರ ವಿಭಾಗದಲ್ಲಿ ಸ್ಪರ್ಧಿಸುವ ಗುರಿ ಹೊಂದಿದ್ದಾರೆ.  

ಲೈಂಗಿಕ ಕಿರುಕುಳ ಕೇಸ್‌:ಬ್ರಿಜ್‌ಭೂಷಣ್‌ ಸಿಂಗ್‌ಗೆ ಜಾಮೀನು..!

5ನೇ ವಯಸ್ಸಲ್ಲೇ ಟೆನಿಸ್‌ಗೆ ಪಾದಾರ್ಪಣೆ: 2009ರ ಡಿ.17ರಂದು ಯಾದಗಿರಿಯಲ್ಲಿ ಜನಿಸಿದ ವಿಹಾನ್ ತಮಗೆ 5 ವರ್ಷವಿದ್ದಾಗಲೇ ಟೆನಿಸ್ ಅಂಕಣಕ್ಕೆ ಕಾಲಿಟ್ಟರು. ಬೆಂಗಳೂರಿನ ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ನರ್ಸರಿ ಕಲಿತ ವಿಹಾನ್, ಸದ್ಯ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ವಿಹಾನ್‌ರ ತಂದೆ ಬಸಣ್ಣಗೌಡ ರೆಡ್ಡಿ ಹಾಗೂ ತಾಯಿ ರೂಪಾ ಪಾಟೀಲ್ ಮೂಲತಃ ಯಾದಗಿರಿಯ ಎಲ್ಹೇರಿ ಗ್ರಾಮದವರು. ಖ್ಯಾತ ಸಾಫ್ಟವೇರ್ ಕಂಪನಿಯ ಉದ್ಯೋಗಿಯಾಗಿರುವ ಬಸಣ್ಣಗೌಡ ತಮ್ಮ 2014ರಿಂದ ತಮ್ಮ ಕುಟುಂಬದೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದಾರೆ.  

ಡಬಲ್ಸ್‌ನಲ್ಲೂ ನಂ.1 ಆಗಿದ್ದರು! ವಿಹಾನ್ ರೆಡ್ಡಿ ಅಂಡರ್-14 ಬಾಲಕರ ವಿಶ್ವ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಡಬಲ್ಸ್ ವಿಭಾಗದಲ್ಲೂ ಅವರು ನಂ.1 ಸ್ಥಾನ ಸಾಧಿಸಿದ್ದರು. ಅಂಡರ್-12ನ ಸಿಂಗಲ್ಸ್ ಹಾಗೂ ಡಬಲ್ಸ್ ಎರಡರಲ್ಲೂ ವಿಹಾನ್ ಅಗ್ರಸ್ಥಾನದಲ್ಲಿದ್ದರು ಎನ್ನುವುದು ವಿಶೇಷ.  

ವಿಹಾನ್ ಚಿಕ್ಕಂದಿನಿಂದಲೇ ಟೆನಿಸ್‌ನಲ್ಲಿ ಮಿಂಚುತ್ತಿದ್ದಾನೆ. ವಿಂಬಲ್ಡನ್‌ನಲ್ಲಿ ಅವನ ಆಟ ನೋಡಿದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರೋಹನ್ ಬೋಪಣ್ಣರಂತಹ ದಿಗ್ಗಜ ಆಟಗಾರ ಹುರಿದುಂಬಿಸಿದ್ದು ಖುಷಿ ನೀಡಿದೆ ಎಂದು ವಿಹಾನ್ ತಂದೆ ಬಸಣ್ಣಗೌಡ ರೆಡ್ಡಿ ಹೇಳಿದ್ದಾರೆ.

Follow Us:
Download App:
  • android
  • ios