ಭಾರತದ ಪರ ಉಮೇಶ್ ಯಾದವ್ 4 ವಿಕೆಟ್ ಪಡೆದರೆ, ಅಶ್ವಿನ್ ಹಾಗೂ ಜಡೇಜಾ ತಲಾ ಎರಡು ವಿಕೆಟ್ ಹಂಚಿಕೊಂಡರು.
ಪುಣೆ(ಫೆ.23): ಉಮೇಶ್ ಯಾದವ್ ಅವರ ಕರಾರುವಕ್ಕಾದ ದಾಳಿಗೆ ತತ್ತರಿಸಿದ ಸ್ಟೀವ್ ಸ್ಮಿತ್ ಪಡೆ ಮೊದಲ ದಿನವೇ ಮುಗ್ಗರಿಸಿದೆ. ಈ ಮೂಲಕ ಕೊಹ್ಲಿ ಪಡೆ ಆಸೀಸ್ ಮೇಲೆ ಮೊದಲ ದಿನವೇ ಪ್ರಭುತ್ವ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಮೊದಲ ದಿನದಾಟ ಮುಕ್ತಾಯಕ್ಕೆ 9 ವಿಕೆಟ್ ನಷ್ಟಕ್ಕೆ 256 ರನ್ ಕಲೆಹಾಕಿದೆ. ಆರಂಭಿಕ ಆಟಗಾರ ಮ್ಯಾಟ್ ರೆನ್'ಷೋ ಮತ್ತು ಕೆಳಕ್ರಮಾಂಕದಲ್ಲಿ ಮಿಚೆಲ್ ಸ್ಟಾರ್ಕ್ ಅಜೇಯ ಅರ್ಧಶತಕ ಸಿಡಿಸಿ ಆಸೀಸ್ ತಂಡಕ್ಕೆ ನೆರವಾದರು.
ಆರಂಭಿಕ ಬ್ಯಾಟ್ಸ್'ಮನ್ ಡೇವಿಡ್ ವಾರ್ನರ್ ಉತ್ತವಾಗಿ ರನ್ ಕಲೆಹಾಕುತ್ತಾ ಅರ್ಧಶತಕದತ್ತ ಮುನ್ನುಗ್ಗುತ್ತಿದ್ದರು. ಆದರೆ ವೇಗಿ ಉಮೇಶ್ ಯಾದವ್ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಭಾರತಕ್ಕೆ ಮೊದಲ ಮನ್ನೆಡೆ ತಂದುಕೊಟ್ಟರು. ಇದಾದ ಕೆಲಹೊತ್ತಿನಲ್ಲೇ ಜಯಂತ್ ಯಾದವ್ ಸ್ಪಿನ್ ಮೋಡಿಗೆ ಶಾನ್ ಮಾರ್ಷ್ ಪೆವಿಲಿಯನ್ ಸೇರಬೇಕಾಯಿತು. ನಾಯಕ ಸ್ಮಿತ್ ಆಟ ಕೇವಲ 27ಕ್ಕೆ ಮುಕ್ತಾಯವಾಯಿತು.
ಚಹಾ ವಿರಾಮದ ವೇಳೆಗೆ ಆಸೀಸ್ 153 ರನ್'ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಇನ್ನು ಪೀಟರ್ ಹ್ಯಾಂಡ್ಸ್'ಕೋಂಬ್ ಹಾಗೂ ಮಿಚೆಲ್ ಮಾರ್ಶ್'ಗೆ ಜಡೇಜಾ ಪೆವಿಲಿಯನ್ ಹಾದಿ ತೋರಿಸಿದರು. ಚಹಾವಿರಾಮದ ನಂತರ ಮತ್ತಷ್ಟು ಆಕ್ರಮಣಕಾರಿಯಾದ ಉಮೇಶ್ ಯಾದವ್ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್, ಸ್ಟೀವ್ ಓ'ಕೆಫೆ ಮತ್ತು ನಾಥನ್ ಲಯಾನ್ ಅವರನ್ನು ಬಲಿಪಡೆಯುವಲ್ಲಿ ಯಶಸ್ವಿಯಾದರು.
ಆದರೆ 10ನೇ ವಿಕೆಟ್'ಗೆ 51 ರನ್'ಗಳ ಜತೆಯಾಟವಾಡಿದ ಮಿಚೆಲ್ ಸ್ಟಾರ್ಕ್(57) ಹಾಗೂ ಜೋಶ್ ಹ್ಯಾಜಲ್'ವುಡ್ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಎರಡನೇ ದಿನದ ಮೊದಲ ಅವಧಿಯಲ್ಲೇ ಆದಷ್ಟು ಬೇಗ ಕೊನೆಯ ವಿಕೆಟ್ ಉರುಳಿಸಿ ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದಲ್ಲಿದೆ ಟೀಂ ಇಂಡಿಯಾ.
ಭಾರತದ ಪರ ಉಮೇಶ್ ಯಾದವ್ 4 ವಿಕೆಟ್ ಪಡೆದರೆ, ಅಶ್ವಿನ್ ಹಾಗೂ ಜಡೇಜಾ ತಲಾ ಎರಡು ವಿಕೆಟ್ ಹಂಚಿಕೊಂಡರು. ಇನ್ನು ಯುವ ಸ್ಪಿನ್ನರ್ ಜಯಂತ್ ಯಾದವ್ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ
ಮೊದಲ ಇನಿಂಗ್ಸ್: 256/9
ಮ್ಯಾಟ್ ರೆನ್'ಶೋ 68
ಮಿಚೆಲ್ ಸ್ಟಾರ್ಕ್ 57*
ಉಮೇಶ್ ಯಾದವ್: 32/4
