ನನ್ನ ಅಂತಿಮ ಗುರಿ ಪ್ಯಾರಿಸ್ ಒಲಿಂಪಿಕ್ಸ್, ಆದ್ರೆ ಸದ್ಯ ಗಮನ ಕಾಮನ್‌ವೆಲ್ತ್ ಪದಕ ಗೆಲ್ಲೋದು: ಸಿಂಧು
ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿರುವ ಪಿ ವಿ ಸಿಂಧು
ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟ
ಎರಡು ಒಲಿಂಪಿಕ್ಸ್ ಪದಕ ಜಯಿಸಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಸಿಂಧು
ಬರ್ಮಿಂಗ್‌ಹ್ಯಾಮ್(ಜು.30): ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ, ಭಾರತದ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು, ತಮ್ಮ ಅಂತಿಮ ಗುರಿ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದಾಗಿದೆ. ಆದರೆ ಸದ್ಯ ತಮ್ಮ ಗಮನ ಏನಿದ್ದರೂ ಸದ್ಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದಾಗಿದೆ ಎಂದು ಹೇಳಿದ್ದಾರೆ. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಸಿಂಧು, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು.
ನನ್ನ ಪರಮ ಗುರಿ ಏನಿದ್ದರೂ 2024ರ ಪ್ಯಾರಿಸ್ ಒಲಿಂಪಿಕ್ಸ್. ಆದರೆ ಸದ್ಯ ನನ್ನ ಗಮನವೇನಿದ್ದರೂ. ಕಾಮನ್‌ವೆಲ್ತ್ ಗೇಮ್ಸ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲೊ ಪದಕ ಗೆಲ್ಲುವುದಾಗಿದೆ ಎಂದು ಪಿಟಿಐಗೆ ಸಿಂಧು ಪ್ರತಿಕ್ರಿಯೆ ನೀಡಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವುದು ದೊಡ್ಡ ಸಾಧನೆ. ಇದು ನಾಲ್ಕು ವರ್ಷಗಳಿಗೊಮ್ಮೆ ಬರುತ್ತದೆ. ಅತಿದೊಡ್ಡ ಕ್ರೀಡಾಕೂಟದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುವುದು ಗೌರವದ ಸಂಗತಿಯಾಗಿದೆ. ಈ ಬಾರಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ವಿಶ್ವಾಸವಿದೆ ಎಂದು ಸಿಂಧು ಹೇಳಿದ್ದಾರೆ.
ಸಿಂಗಪುರ ಓಪನ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಪಿ ವಿ ಸಿಂಧು, ಇದಾದ ಬಳಿಕ ತೈವಾನಿನ ತೈ ತ್ಸು ಯಿಂಗ್ ಎದುರು ಪ್ರಾಬಲ್ಯ ಮೆರೆಯಲು ಕೊಂಚ ತಡವರಿಸುತ್ತಾ ಬಂದಿದ್ದಾರೆ. 2019ರಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವದ 2ನೇ ಶ್ರೇಯಾಂಕಿತೆ ತೈ ತ್ಸು ಯಿಂಗ್ ಅವರನ್ನು ಕೊನೆಯ ಬಾರಿಗೆ ಗೆಲುವು ದಾಖಲಿಸಿದ್ದರು. ಇದಾದ ಬಳಿಕ ತೈವಾನಿನ ಆಟಗಾರ್ತಿ ಎದುರು ಪಿವಿ ಸಿಂಧು ಸತತ 7 ಸೋಲು ಅನುಭವಿಸಿದ್ದಾರೆ. ಸಿಂಧು ಹಾಗೂ ತೈ ತ್ಸು ಯಿಂಗ್ ಮುಖಾಮುಖಿಯಲ್ಲಿ 7-17ರ ಅಂತರ ಕಾಯ್ದುಕೊಂಡಿದ್ದಾರೆ.
Commonwealth Games 2022: ವೇಟ್‌ಲಿಫ್ಟಿಂಗ್‌ನಲ್ಲಿ ಭಾರತ ಹೆಚ್ಚು ಪದಕ ಗೆಲ್ಲಲಿದೆ: ಕೋಚ್ ವಿಜಯ್ ಶರ್ಮಾ
ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿಂಧು, ಇದರ ಕುರಿತಂತೆ ನಾನು ಹೆಚ್ಚು ಗಮನ ಹರಿಸಿಲ್ಲ, ಅವರನ್ನೂ ಸೋಲಿಸಿದ್ದೇನೆ. ಪ್ರತಿ ಪಂದ್ಯವೂ ಸಾಕಷ್ಟು ಮಹತ್ವದ್ದೆನಿಸುತ್ತದೆ. ಆಟದ ದಿನ ನಾವು ಹೇಗೆ ಆಡುತ್ತೇವೆ ಎನ್ನುವುದು ಮುಖ್ಯವೆನಿಸುತ್ತದೆ. ಪ್ರತಿಯೊಬ್ಬ ಆಟಗಾರ್ತಿಯೂ ತನ್ನದೇ ಆದ ಆಟದ ಶೈಲಿ ಇರುತ್ತದೆ ಎಂದು ಸಿಂಧು ಹೇಳಿದ್ದಾರೆ.