ದೇಶದಲ್ಲಿದ್ದುಕೊಂಡು ಇತರ ದೇಶದ ಕ್ರಿಕೆಟಿಗರನ್ನ ಪ್ರೀತಿಸುವುದಾದರೆ ದೇಶ ಬಿಟ್ಟು ತೊಲಗಿ ಎಂದು ನಾಯಕ ವಿರಾಟ್ ಕೊಹ್ಲಿಗೆ ಇದೀಗ ಟ್ವಿಟರಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಈ ವಿವಾದ ಹುಟ್ಟಿಕೊಂಡಿದ್ದು ಹೇಗೆ? ಇಲ್ಲಿದೆ ವಿವರ.
ಲಖನೌ(ನ.07): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೀಗ ವಿವಾದ ಒಂದನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಹುಟ್ಟುಹಬ್ಬದ ದಿನ ಕೊಹ್ಲಿ ಆ್ಯಪ್ ಬಿಡುಗಡೆ ಮಾಡಿದ್ದರು. ಇದೀಗ ಈ ಆ್ಯಪ್ ಮೂಲಕ ಬಂದ ಪ್ರಶ್ನೆಗೆ ಉತ್ತರಿಸುವ ವೇಳೆ ಕೊಹ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ.
ಕೊಹ್ಲಿ ಹಾಗೂ ಭಾರತೀಯ ಬ್ಯಾಟ್ಸ್‌ಮನ್‌ಗಳನ್ನ ಕೇಂದ್ರಿಕರಿಸಿ ಅಭಿಮಾನಿಯೊರ್ವ ಪ್ರಶ್ನೆ ಕೇಳಿದ್ದ. ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಅವಶ್ಯಕತೆಗಿಂತ ಹೆಚ್ಚಿನ ಪ್ರಚಾರ ಸಿಗುತ್ತಿದೆ. ಆದರೆ ಬ್ಯಾಟಿಂಗ್‌ನಲ್ಲಿ ಅಂತಹಾ ಸ್ಪೆಷಾಲಿಟಿ ಏನೂ ಇಲ್ಲ. ಹೀಗಾಗಿ ಇಂಗ್ಲೀಷ್ ಅಥವಾ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳ ಪ್ರದರ್ಶನ ನನಗೆ ಹೆಚ್ಚು ಖುಷಿ ನೀಡುತ್ತೆ ಎಂದಿದ್ದ.
ಇದಕ್ಕೆ ಪ್ರತಿಕ್ರಿಸಿಯಿದ ಕೊಹ್ಲಿ, ಹಾಗಾದರೆ ನೀವು ಭಾರತ ಬಿಟ್ಟು ಇತರ ದೇಶ ಹುಡುಕಿಕೊಳ್ಳುವುದು ಸೂಕ್ತ. ಭಾರತದಲ್ಲಿದ್ದುಕೊಂಡು, ಇತರ ದೇಶವನ್ನ ಇಷ್ಟಪಡುವುದಾದರೆ ಭಾರತದಲ್ಲಿರುವುದೇಕೆ? ನೀವು ನನ್ನನ್ನ ಇಷ್ಟಪಡುವುದಿಲ್ಲ ಎಂದು ನನಗೇನು ಸಮಸ್ಯೆ ಇಲ್ಲ. ಆದರೆ ನೀವು ಭಾರತದಲ್ಲಿರಲು ಸೂಕ್ತ ಎಂದು ನನಗನಿಸುವುದಿಲ್ಲ ಎಂದಿದ್ದಾರೆ.
ಕೊಹ್ಲಿ ಪ್ರತಿಕ್ರಿಯೆಗೆ ಇದೀಗ ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಭಾರತವನ್ನ ಅಷ್ಟು ಪ್ರೀತಿಸೋ ಕೊಹ್ಲಿ, ಇಟಲಿಯಲ್ಲಿ ಮದುವೆಯಾಗಿದ್ದೇಕೆ? ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಆದರೆ ಹಲವು ಅಭಿಮಾನಿಗಳು ಕೊಹ್ಲಿ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ಇಲ್ಲಿದೆ ಟ್ವಿಟರಿಗರ ಪ್ರತಿಕ್ರಿಯೆ.
