ಗುರುವಾರ ಶಾಲಾ ಕಾಲೇಜುಗಳಿಗೆ ರಜೆ ನೀಡಿಲ್ಲ. ಅವು ಎಂದಿನಂತೆ ಕಾರ್ಯನಿರ್ವಹಿಸಲಿದೆ. ವರ್ತಕರು, ಅಂಗಡಿ ಮಾಲಿಕರು ಅನಗತ್ಯ ಹೇಳಿಕೆಗಳಿಗೆ ಕಿವಿಗೊಡಬಾರದು. ದೈನಂದಿನ ಕೆಲಸಗಳು ಎಂದಿನಂತೆ ನಡೆಯಲಿದೆ. ಈ ಬಗ್ಗೆ ಯಾವುದೇ ಭಯ ಬೇಡ. ಆದರೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿದೆ.
ಸಾಗರ(ಡಿ.13): ಹೊನ್ನಾವರದ ಪರೇಶ್ ಮೇಸ್ತನ ನಿಗೂಢ ಸಾವು ಖಂಡಿಸಿ ಕೆಲವು ಸಂಘಟನೆಗಳು ಗುರುವಾರ ಸಾಗರ ಬಂದ್'ಗೆ ಕರೆ ನೀಡಿದ್ದು ಮುಂಜಾಗೃತಾ ಕ್ರಮವಾಗಿ ಸಾಗರದಲ್ಲಿ ಬುಧವಾರ ಸಂಜೆ 6 ರಿಂದ ಗುರುವಾರ ಮಧ್ಯರಾತ್ರಿ 12ಗಂಟೆವರೆಗೆ 144ನೇ ಸೆಕ್ಷನ್ ಜಾರಿ ಮಾಡಲಾಗಿದ್ದು, ಗುರುವಾರ ಪಟ್ಟಣದಲ್ಲಿ ನಡೆಯಲಿರುವ ವಾರದ ಸಂತೆಯನ್ನು ಸಹ ಬಂದ್ ಮಾಡಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಅಭಿನವ ಖರೆ ತಿಳಿಸಿದರು.
ಇಂದು ಸಂಜೆ ಡಿವೈಎಸ್ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾವರದ ಪರೇಶ್ ಮೇಸ್ತನ ನಿಗೂಢ ಸಾವು ಖಂಡಿಸಿ ಕೆಲವು ಸಂಘಟನೆಗಳು ಗುರುವಾರ ಸಾಗರ ಬಂದ್‌ಗೆ ಕರೆ ನೀಡುವುದಾಗಿ ಹೇಳಿಕೆ ನೀಡಿವೆ. ಆದರೆ ಪೊಲೀಸ್ ಇಲಾಖೆ ಬಂದ್‌ಗೆ ಅವಕಾಶ ನೀಡಿಲ್ಲ. ಅಲ್ಲದೆ ಪ್ರತಿಭಟನಾ ಮೆರವಣಿಗೆಗೆ ಕೂಡಾ ಅವಕಾಶವಿಲ್ಲ. ಕೇವಲ ಮನವಿ ಕೊಡುವುದಿದ್ದರೆ ಎಸಿ ಕಚೇರಿ ಆವರಣಕ್ಕೆ ಬಂದು ಮನವಿ ನೀಡಬಹುದು. ಅದಕ್ಕೆ ಇಲಾಖೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಸಂಘಟನೆಗಳು ಬಹಿರಂಗವಾಗಿ ಎಲ್ಲಿಯೂ ಬಂದ್'ಗೆ ಕರೆ ನೀಡುತ್ತಿಲ್ಲ. ಇಲಾಖೆಗೆ ಕೂಡ ಬಂದ್ ಕುರಿತಂತೆ ಮಾಹಿತಿ ನೀಡಿಲ್ಲ. ಆದರೆ ಸಾಮಾಜಿಕ ಜಾಲತಾಣಗಳ ಮೂಲಕ ಬಂದ್ ಬಗ್ಗೆ ಹೇಳಿಕೆ ನೀಡಲಾಗುತ್ತಿದೆ. ಸಂಘಟನೆಗಳ ಪ್ರಮುಖರಲ್ಲಿ ಮೆರವಣಿಗೆ ಮಾಡಬೇಡಿ ಎಂದು ಮನವಿ ಮಾಡಲಾಗಿದೆ. ಆದರೆ ಅದಕ್ಕೆ ಅವರು ಒಪ್ಪುತ್ತಿಲ್ಲ. ಈ ಕಾರಣಕ್ಕಾಗಿ ಇಲಾಖೆ ಮುಂಜಾಗೃತಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಿದ್ದು ಧಿಕ್ಕರಿಸಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
ಗುರುವಾರ ಶಾಲಾ ಕಾಲೇಜುಗಳಿಗೆ ರಜೆ ನೀಡಿಲ್ಲ. ಅವು ಎಂದಿನಂತೆ ಕಾರ್ಯನಿರ್ವಹಿಸಲಿದೆ. ವರ್ತಕರು, ಅಂಗಡಿ ಮಾಲಿಕರು ಅನಗತ್ಯ ಹೇಳಿಕೆಗಳಿಗೆ ಕಿವಿಗೊಡಬಾರದು. ದೈನಂದಿನ ಕೆಲಸಗಳು ಎಂದಿನಂತೆ ನಡೆಯಲಿದೆ. ಈ ಬಗ್ಗೆ ಯಾವುದೇ ಭಯ ಬೇಡ. ಆದರೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿದೆ. ಇಡೀ ಪಟ್ಟಣದ ಬೇರೆ ಬೇರೆ ಭಾಗಗಳಲ್ಲಿ 20 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅಲ್ಲದೆ 30ಕ್ಕೂ ಹೆಚ್ಚು ಮೊಬೈಲ್ ಕ್ಯಾಮರಾಗಳು ಕಾರ್ಯನಿರ್ವಹಿಸಲಿದೆ. ಬಂದೋಬಸ್ತ್'ಗೆ 20 ಕೆಎಸ್‌ಆರ್'ಪಿ ತುಕಡಿಗಳು, 600ಕ್ಕೂ ಹೆಚ್ಚು ಪೊಲೀಸರು, 32 ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 9 ಸಿಆರ್'ಪಿ ವಾಹನಗಳು ಮೊಕ್ಕಾಂ ಮಾಡಿವೆ. ಶಾಂತಿ ಭಂಗಕ್ಕೆ ಯತ್ನಿಸಿದವರ ಮೇಲೆ ಅದು ಯಾರೇ ಇರಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ರೌಡಿಶೀಟರ್‌ಗಳ ಮೇಲೆ ನಿಗಾ ಇಡಲಾಗಿದ್ದು ಅವರನ್ನು ವಶಕ್ಕೆ ಪಡೆಯಲಾಗುವುದು. ಹಾಗೆಯೇ ಬಂದ್ ಅಥವಾ ಮೆರವಣಿಗೆಗೆ ಕರೆ ನೀಡಿದ ಪ್ರಮುಖರ ಮೇಲೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು. ಅಲ್ಲದೆ ಮುಂದಿನ ಆಗು ಹೋಗುಗಳಿಗೆ ಅವರುಗಳನ್ನೇ ಹೊಣೆ ಮಾಡಲಾಗುವುದು. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳ ಮೇಲೆ ಹೆಚ್ಚಿನ ನಿಗಾ ಇಡಲಾಗುವುದು ಎಂದು ಹೇಳಿದರು. ಅಡಿಷನಲ್ ಎಸ್ಪಿ ಮುತ್ತುರಾಜ್, ಡಿವೈಎಸ್ಪಿ ಮಂಜುನಾಥ ಬಿ.ಕವರಿ ಇತರರು ಇದ್ದರು.
