ಕೊಲಂಬೊ(ಅ.21): ಪಾಕಿಸ್ತಾನ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಶ್ರೀಲಂಕಾ ತಂಡ ಪ್ರಕಟಿಸಲಾಗಿದ್ದು, ಅನುಭವಿ ಆಲ್ರೌಂಡರ್ ತಿಸಾರ ಪೆರೇರಾ ತಂಡವನ್ನು ಮುನ್ನಡೆಸಲಿದ್ದಾರೆ.

ಹಾಲಿ ನಾಯಕ ಉಪುಲ್ ತರಂಗ ಲಾಹೋರ್‌'ಗೆ ತೆರಳಲು ನಿರಾಕರಿಸಿದ ಕಾರಣ ತಿಸಾರ ಪೆರೇರಗೆ ನಾಯಕತ್ವ ವಹಿಸಲಾಗಿದೆ. ತರಂಗ ಜತೆ ಮಾಲಿಂಗ, ಲಕ್ಮಲ್, ಡಿಕ್‌ವೆಲ್ಲಾ, ಕಪುಗೇಡರ ಸೇರಿ ಇನ್ನೂ ಅನೇಕರು ಪಾಕ್‌'ಗೆ ತೆರಳದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಮಾರ್ಚ್ 2009ರಲ್ಲಿ ಲಾಹೋರ್'ನಲ್ಲಿ ಶ್ರೀಲಂಕಾ ಆಟಗಾರರಿದ್ದ ಬಸ್ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ್ದರು. ಆ ಬಳಿಕ ಶ್ರೀಲಂಕಾ ಇದೇ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಪ್ರವಾಸ ಕೈಗೊಂಡಿದೆ. ಟೂರ್ನಿಯ ಮೊದಲೆರಡು ಪಂದ್ಯಗಳು ಅಬುದಾಬಿಯಲ್ಲಿ ನಡೆಯಲಿದ್ದು, ಮೂರನೇ ಹಾಗೂ ಕೊನೆಯ ಪಂದ್ಯ ಲಾಹೋರ್'ನಲ್ಲಿ ನಡೆಯಲಿದೆ.

ಈಗಾಗಲೇ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ತಂಡವು  ಪಂದ್ಯಗಳ ಏಕದಿನ ಸರಣಿಯಲ್ಲಿ 4-0 ಅಂತರದಲ್ಲಿ ಹೀನಾಯ ಸೋಲು ಕಂಡಿದ್ದು ಅಂತಿಮ ಪಂದ್ಯವು ಶಾರ್ಜಾದಲ್ಲಿ ನಡೆಯಲಿದೆ.

ಪ್ರಸಕ್ತ ವರ್ಷವೊಂದರಲ್ಲೇ ಶ್ರೀಲಂಕಾ ತಂಡದ 7ನೇ ನಾಯಕನಾಗಿ ತಿಸರಾ ಪೆರೇರಾ ಆಯ್ಕೆಯಾಗಿರುವುದು ಕ್ರಿಕೆಟ್ ಇತಿಹಾಸದ ಮತ್ತೊಂದು ದಾಖಲೆ.