Asianet Suvarna News Asianet Suvarna News

ಪ್ರೊ ಕಬಡ್ಡಿ ಶುರುವಾಗಿದ್ದು ಹೇಗೆ ಗೊತ್ತಾ..?

ಪ್ರೊ ಕಬಡ್ಡಿ ಎಂಬ ಐಡಿಯಾ ಹುಟ್ಟಿದ್ದು ಹೇಗೆ, ಆ ಐಡಿಯಾಕ್ಕೆ ಜೊತೆಯಾದವರು ಯಾರ್ಯಾರು?, ಲೀಗ್‌ ಇಂದು ಎಷ್ಟು ದೊಡ್ಡದಾಗಿ ಬೆಳೆದಿದೆ ಎನ್ನುವ ಮಾಹಿತಿಗಳನ್ನೆಲ್ಲಾ ಪ್ರಸಾದ್‌ ರಾವ್‌ ಅವರು, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ಸೋದರ ಸಂಸ್ಥೆ ‘ಕನ್ನಡಪ್ರಭ’ದೊಂದಿಗೆ ಬಹಳ ಖುಷಿಯಿಂದ ಹಂಚಿಕೊಂಡಿದ್ದಾರೆ.

This is how Pro Kabaddi League Starts all fans need to know kvn
Author
First Published Jan 15, 2024, 11:33 AM IST

- ಸ್ಪಂದನ್ ಕಣಿಯಾರ್, ಕನ್ನಡಪ್ರಭ

ಬೆಂಗಳೂರು(ಜ.15): ಅಪ್ಪಟ ದೇಸಿ ಕ್ರೀಡೆ ಕಬಡ್ಡಿಯನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸಿದ ಹಿರಿಮೆ ಪ್ರೊ ಕಬಡ್ಡಿಗೆ ಸಲ್ಲುತ್ತದೆ. ಕಬಡ್ಡಿಯನ್ನು ಒಲಿಂಪಿಕ್ಸ್‌ಗೆ ಸೇರಿಸುವ ಬಗ್ಗೆ ಪ್ರಯತ್ನಗಳು ಆರಂಭವಾಗಿವೆ ಅಂದರೆ ಅದಕ್ಕೂ ಪ್ರೊ ಕಬಡ್ಡಿಯೇ ಪ್ರಮುಖ ಕಾರಣ. ಕಬಡ್ಡಿಯಲ್ಲೂ ಫ್ರಾಂಚೈಸಿ ಲೀಗ್‌ ಪರಿಚಯಿಸಿ, ಈ ಲೀಗ್‌ 1000ನೇ ಪಂದ್ಯದ ಹೊಸ್ತಿಲು ತಲುಪುವಲ್ಲಿ ನಿರ್ಣಾಯಕ ಪಾತ್ರ ವಹಿಸಿದವರಲ್ಲಿ, ಸದ್ಯ ಲೀಗ್‌ನ ತಾಂತ್ರಿಕ ನಿರ್ದೇಶಕರಾಗಿರುವ ‘ಕಬಡ್ಡಿ ರಾವ್‌’ ಎಂದೇ ಪ್ರಖ್ಯಾತಿ ಗಳಿಸಿರುವ ಇ.ಪ್ರಸಾದ್‌ ರಾವ್‌ ಕೂಡ ಒಬ್ಬರು.

ಪ್ರೊ ಕಬಡ್ಡಿ ಎಂಬ ಐಡಿಯಾ ಹುಟ್ಟಿದ್ದು ಹೇಗೆ, ಆ ಐಡಿಯಾಕ್ಕೆ ಜೊತೆಯಾದವರು ಯಾರ್ಯಾರು?, ಲೀಗ್‌ ಇಂದು ಎಷ್ಟು ದೊಡ್ಡದಾಗಿ ಬೆಳೆದಿದೆ ಎನ್ನುವ ಮಾಹಿತಿಗಳನ್ನೆಲ್ಲಾ ಪ್ರಸಾದ್‌ ರಾವ್‌ ಅವರು, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ಸೋದರ ಸಂಸ್ಥೆ ‘ಕನ್ನಡಪ್ರಭ’ದೊಂದಿಗೆ ಬಹಳ ಖುಷಿಯಿಂದ ಹಂಚಿಕೊಂಡಿದ್ದಾರೆ.

2006ರ ಏಷ್ಯನ್‌ ಗೇಮ್ಸ್‌ ಕತಾರ್‌ನ ದೋಹಾದಲ್ಲಿ ನಿಗದಿಯಾಗಿತ್ತು. ಆ ದೇಶದಲ್ಲಿ ಮೊದಲ ಬಾರಿಗೆ ಕಬಡ್ಡಿ ಆಯೋಜನೆಗೊಳ್ಳುತ್ತಿದ್ದ ಕಾರಣ, ಆಯೋಜಕರ ಮನವಿಯ ಮೇರೆಗೆ ಭಾರತ ಸರ್ಕಾರವು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಕೋಚ್‌ ಆಗಿದ್ದ ಪ್ರಸಾದ್‌ರನ್ನು ಸಲಹೆಗಾರರನ್ನಾಗಿ ನೇಮಿಸಿ ದೋಹಾಕ್ಕೆ ಕಳುಹಿಸಿತ್ತು.

ಪ್ರೊ ಕಬಡ್ಡಿ ಲೀಗ್ ಟೂರ್ನಿಗೆ 1000ದ ಸಂಭ್ರಮ

ಏಷ್ಯಾಡ್‌ ಆರಂಭಕ್ಕೆ 3 ತಿಂಗಳು ಮೊದಲೇ ದೋಹಾಕ್ಕೆ ಹೋಗಿದ್ದ ಪ್ರಸಾದ್‌ರಿಗೆ, ಆಯೋಜಕರು ಎಂದು ಜಿಮ್ನಾಸ್ಟಿಕ್ಸ್ ಹಾಲ್‌ ನೀಡಿ, ಅಲ್ಲಿಯೇ ಕಬಡ್ಡಿ ಪಂದ್ಯಗಳನ್ನು ಆಯೋಜಿಸಲು ವ್ಯವಸ್ಥೆ ಮಾಡಿಕೊಳ್ಳುವಂತೆ ಹೇಳಿದ್ದರಂತೆ.

ದೋಹಾದಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳದ ಸಾವಿರಾರು ಕಾರ್ಮಿಕರಿದ್ದಾರೆ. ಈ ದೇಶಗಳಲ್ಲೆಲ್ಲಾ ಕಬಡ್ಡಿ ಬಗ್ಗೆ ಅಪಾರ ಆಸಕ್ತಿ ಇರುವ ಕಾರಣ, ಇದರ ಲಾಭವೆತ್ತಲು ಪ್ರಸಾದ್‌ ಅವರು ನಿರ್ಧರಿಸಿದರು. ಅವರ ಯೋಜನೆ ಫಲ ನೀಡಿತು.

ಚಾರು ಶರ್ಮಾ, ಆನಂದ್‌ ಮಹೀಂದ್ರಾ ಬೆಂಬಲ!

ಕಬಡ್ಡಿ ಬಗ್ಗೆ ದೋಹಾದ ಜನರಲ್ಲಿ ಇದ್ದ ಕ್ರೇಜ್‌ ನೋಡಿ ಅಚ್ಚರಿಗೊಳಗಾದ ಪ್ರಸಾದ್ ರಾವ್‌, ಏಷ್ಯಾಡ್‌ನ ವೀಕ್ಷಕ ವಿವರಣೆಗೆ ಬಂದಿದ್ದ ಚಾರು ಶರ್ಮಾ ಅವರ ಬಳಿ ಕಬಡ್ಡಿಗೆ ಒಂದು ವೃತ್ತಿಪರ ಲೀಗ್‌ ಆರಂಭಿಸುವ ಬಗ್ಗೆ ಚರ್ಚಿಸಿದರಂತೆ. ಪ್ರಸಾದ್‌ರ ಐಡಿಯಾ ಬಗ್ಗೆ ಸಾಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಚಾರು, ತಮ್ಮ ಸಂಬಂಧಿಯೂ ಆಗಿರುವ ಖ್ಯಾತ ಉದ್ಯಮಿ ಆನಂದ್‌ ಮಹೀಂದ್ರಾ ಅವರೊಂದಿಗೆ ಈ ವಿಷಯ ಪ್ರಸ್ತಾಪಿಸಿ ಲೀಗ್‌ ಆರಂಭಿಸಲು ನೆರವು ಕೇಳಿದ್ದರಂತೆ. 2006ರಲ್ಲೇ ಪ್ರೊ ಕಬಡ್ಡಿಯ ಐಡಿಯಾ ಹುಟ್ಟಿಕೊಂಡರೂ, ಲೀಗ್‌ ಆರಂಭಗೊಂಡಿದ್ದು 2014ರಲ್ಲಿ.

ಸಾತ್ವಿಕ್‌-ಚಿರಾಗ್ ಕೈತಪ್ಪಿದ ಮಲೇಷ್ಯಾ ಓಪನ್‌ ಕಿರೀಟ

ಆಟಗಾರರಿಗೀಗ ಕೋಟಿ ರುಪಾಯಿಗಳ ಸಂಭಾವನೆ!

ಮಶಾಲ್‌ ಸ್ಪೋರ್ಟ್ಸ್‌ ಎಂಬ ಸಂಸ್ಥೆ ಆರಂಭಿಸಿದ ಚಾರು ಶರ್ಮಾ, ಬಳಿಕ ಪ್ರಸಾರಕರಾಗಿ ಸ್ಟಾರ್‌ ಸ್ಪೋರ್ಟ್ಸ್‌ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡರು. ಬಾಲಿವುಡ್‌ ತಾರೆಯರು, ದೊಡ್ಡ ದೊಡ್ಡ ಉದ್ಯಮಿಗಳು ತಂಡ ಖರೀದಿಸಿದವು. ಮೊದಲ ಆವೃತ್ತಿಯೇ ಸೂಪರ್‌ ಹಿಟ್‌ ಆಯಿತು. ಅಲ್ಲಿಂದ ಪ್ರೊ ಕಬಡ್ಡಿಯ ಜನಪ್ರಿಯತೆ ಹೆಚ್ಚುತ್ತಲೇ ಇದೆ. ಚೊಚ್ಚಲ ಆವೃತ್ತಿಯಲ್ಲಿ ಗರಿಷ್ಠ ಮೊತ್ತಕ್ಕೆ ಬಿಡ್‌ ಆದ ಆಟಗಾರ ರಾಕೇಶ್‌ ಕುಮಾರ್‌ಗೆ ಸಿಕ್ಕಿದ್ದು 12 ಲಕ್ಷ ರು. ಈಗ ಅನೇಕರ ಸಂಭಾವನೆ ಮೊತ್ತ ಒಂದು ಕೋಟಿ ರು. ದಾಟಿದೆ. ನಿಜಕ್ಕೂ ಪ್ರೊ ಕಬಡ್ಡಿಯ ಪಯಣ ಸ್ಫೂರ್ತಿದಾಯಕ.

ಪೋಸ್ಟರ್‌ ಅಂಟಿಸಿ ಪ್ರಚಾರ!

ದೋಹಾದಲ್ಲಿ ಕೇರಳ ಮೂಲದವರು ನಡೆಸುವ ಅನೇಕ ಸಣ್ಣ ಸಣ್ಣ ಹೋಟೆಲ್‌ಗಳಿವೆ. ನಾನು ದಿನಕ್ಕೊಂದು ಹೋಟೆಲ್‌ಗೆ ಊಟ, ತಿಂಡಿಗೆ ಹೋಗಿ ಅಲ್ಲಿ, ಏಷ್ಯಾಡ್‌ ಕಬಡ್ಡಿಯ ಪ್ರಚಾರಕ್ಕೆಂದು ಪೋಸ್ಟರ್‌ಗಳನ್ನು ಅಂಟಿಸಿ ಬರುತ್ತಿದೆ. ಏಷ್ಯಾಡ್‌ ಆರಂಭಗೊಳ್ಳುವ ಮೊದಲು ಭಾರತ, ಪಾಕಿಸ್ತಾನ ಸೇರಿ ಇನ್ನೂ ಕೆಲ ದೇಶಗಳ ತಂಡಗಳನ್ನು ಒಳಗೊಂಡು ಒಂದು ಪ್ರಯೋಗಿಕ ಟೂರ್ನಿಯನ್ನು ಆಯೋಜಿಸಿದೆವು. ಆ ಟೂರ್ನಿಗೆ ದೋಹಾದ ಜಿಮ್ನಾಸ್ಟಿಕ್‌ ಹಾಲ್‌ ಹೌಸ್‌ಫುಲ್‌. ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್‌ ಕೂಡ ಮಾಡಿದ್ದರು. ಅಲ್ಲೇ ಶುರುವಾಗಿದ್ದು ಪ್ರೊ ಕಬಡ್ಡಿಯ ಐಡಿಯಾ.

- ಇ.ಪ್ರಸಾದ್‌ ರಾವ್‌, ಪ್ರೊ ಕಬಡ್ಡಿ ತಾಂತ್ರಿಕ ನಿರ್ದೇಶಕ

Follow Us:
Download App:
  • android
  • ios