ಮೆಲ್ಬರ್ನ್ ಸೇರಿದಂತೆ ಆಸ್ಟ್ರೇಲಿಯಾದ ಇನ್ನಿತರ ನಗರಗಳಿಗೂ ಭಾರತಕ್ಕೂ ಐದೂವರೆ ಗಂಟೆಗಳ ವ್ಯತ್ಯಾಸವಿದೆ. ಆದರೆ ಪರ್ತ್, ಭಾರತಕ್ಕಿಂತ ಕೇವಲ ಎರಡೂವರೆ ಗಂಟೆ ಮುಂದಿದೆ ಅಷ್ಟೇ. ಭಾರತೀಯ ಮಾರುಕಟ್ಟೆಗೆ ಅನುಕೂಲವಾಗುವಂತಹ ಸಮಯವಿದು. ಹೀಗಾಗಿ ಪರ್ತ್ ಪಂದ್ಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಬುಕ್ಕಿ, ರಹಸ್ಯ ಕಾರ್ಯಾಚರಣೆ ವೇಳೆ ಹೇಳಿದ್ದಾರೆ

ಸ್ಪಾಟ್ ಫಿಕ್ಸಿಂಗ್ ಭೂತ ಮತ್ತೊಮ್ಮೆ ಕ್ರಿಕೆಟ್ ಬೆನ್ನೇರಿದೆ. ಬ್ರಿಟನ್'ನ ‘ದ ಸನ್’ ಟ್ಯಾಬ್ಲಾಯ್ಡ್ ಪತ್ರಿಕೆ ಸದ್ಯ ನಡೆಯತ್ತಿರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಆ್ಯಷಸ್ ಸರಣಿಯಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸುವ ಯತ್ನ ನಡೆದಿದೆ ಎಂದು ವರದಿ ಪ್ರಕಟಿಸಿದ್ದು, ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿದೆ.ಗುರುವಾರದಿಂದ ಇಲ್ಲಿ ಆರಂಭಗೊಂಡ 3ನೇ ಟೆಸ್ಟ್ ಪಂದ್ಯವನ್ನು ಸ್ಪಾಟ್ ಫಿಕ್ಸಿಂಗ್‌ಗೆ ಗುರಿಯಾಗಿಸಿಕೊಳ್ಳಲಾಗಿದೆ ಎಂದು ಪತ್ರಿಕೆ ತಿಳಿಸಿದೆ.

ರಹಸ್ಯ ಕಾರ್ಯಾಚರಣೆ:

‘ದ ಸನ್’ ಪತ್ರಿಕೆಯ ವರದಿಗಾರ ನೊಬ್ಬ , ಬೆಟ್ಟಿಂಗ್‌ನಲ್ಲಿ ಆಸಕ್ತಿ ಇರುವವನ ರೀತಿಯಲ್ಲಿ ಭಾರತ ಮೂಲದ ಇಬ್ಬರು ಬುಕ್ಕಿಗಳನ್ನು ಸಂಪರ್ಕಿಸಿದ್ದಾರೆ. ದುಬೈ ಹಾಗೂ ದೆಹಲಿಯ ಹೋಟೆಲ್‌ಗಳಲ್ಲಿ ನಡೆಸಲಾಗಿದೆ ಎನ್ನಲಾಗಿರುವ ರಹಸ್ಯ ಕಾರ್ಯಾಚರಣೆಯಲ್ಲಿ ಸೋಬರ್ಸ್‌ ಜೋಬನ್ ಹಾಗೂ ಪ್ರಿಯಾಂಕ್ ಸಕ್ಸೇನಾ ಎನ್ನುವ ಇಬ್ಬರು ಬುಕ್ಕಿಗಳು, ಆ್ಯಷಸ್ ಸರಣಿಯ ಪರ್ತ್ ಟೆಸ್ಟ್'ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಲಾಗುತ್ತದೆ. ಆ ವೇಳೆ ಭಾರತದಲ್ಲಿ ಅಕ್ರಮ ಬೆಟ್ಟಿಂಗ್ ನಡೆಸಬಹುದು. ರೂ. 1.2 ಕೋಟಿ ಹಣ ನೀಡಿದರೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.ಮಿಸ್ಟರ್ ಬಿಗ್ ಎಂಬ ಅಡ್ಡ ಹೆಸರಿನ ಸೋಬರ್ಸ್‌ ‘ಪಂದ್ಯಕ್ಕೂ ಮುನ್ನ ಯಾವ ಓವರ್‌ನಲ್ಲಿ ಆಟಗಾರರು ನಮ್ಮ ಆದೇಶದಂತೆ ನಡೆದುಕೊಳ್ಳುತ್ತಾರೆ.

ಆ ಓವರ್‌ನಲ್ಲಿ ಎಷ್ಟು ರನ್‌ಗಳು ಬರಲಿವೆ, ಈ ರೀತಿ ಮಾಹಿತಿಯನ್ನು ನೀಡಲಿದ್ದೇನೆ’ ಎಂದಿದ್ದಾನೆ. ‘ಇದೊಂದು ಪಕ್ಕಾ ಮಾಹಿತಿ. ಚಿಂತಿಸದೆ ಬೆಟ್ಟಿಂಗ್ ನಡೆಸಬಹುದು’ ಎಂದು ಸಹ ಹೇಳಿರುವುದು ದಾಖಲಾಗಿದೆ. ಮಾಹಿತಿ ದೊರೆಯುವುದು ಹೇಗೆ?: ‘ಬುಕ್ಕಿಗಳ ಆದೇಶದಂತೆ ಆಟಗಾರರು ಸೂಕ್ಷ್ಮವಾಗಿ ಸೂಚನೆಗಳನ್ನು ನೀಡಲಿದ್ದಾರೆ. ಕ್ರೀಡಾಂಗಣದಲ್ಲಿರುವ ನಮ್ಮ ಕಡೆಯವರು ಅದನ್ನು ಬುಕ್ಕಿ ಗಳಿಗೆ ತಿಳಿಸುತ್ತಾರೆ. ಅದರ ಆಧಾರದ ಮೇಲೆ ಕೋಟ್ಯಂತರ ರುಪಾಯಿಗಳ ಬೆಟ್ಟಿಂಗ್ ನಡೆಸಬಹುದು’ ಎಂದು ಸೋಬರ್ಸ್‌, ರಹಸ್ಯ ಕಾರ್ಯಾಚರಣೆ ವೇಳೆ ತಿಳಿಸಿದ್ದಾನೆ. ‘ಕ್ರಿಕೆಟಿಗರು ನಮ್ಮ ಕೈಗೊಂಬೆಗಳು. ಆಸ್ಟ್ರೇಲಿಯಾದಲ್ಲಿ ಸೈಲೆಂಟ್ ಮ್ಯಾನ್ ಎಂಬ ವ್ಯಕ್ತಿ ನಮ್ಮ ಪರ ಕೆಲಸ ಮಾಡುತ್ತಾನೆ. ಆತನಿಗೆ ಮಾಜಿ ಹಾಗೂ ಹಾಲಿ ಅಂತಾರಾಷ್ಟ್ರೀಯ ಆಟಗಾರರ ಸಂಪರ್ಕವಿದೆ’ ಎಂದು ಸೋಬರ್ಸ್‌ ಹೇಳಿದ್ದಾನೆ.

ಪರ್ತ್ ಟೆಸ್ಟನ್ನೇ ಆಯ್ಕೆ ಮಾಡಿದ್ದೇಕೆ?

ಮೆಲ್ಬರ್ನ್ ಸೇರಿದಂತೆ ಆಸ್ಟ್ರೇಲಿಯಾದ ಇನ್ನಿತರ ನಗರಗಳಿಗೂ ಭಾರತಕ್ಕೂ ಐದೂವರೆ ಗಂಟೆಗಳ ವ್ಯತ್ಯಾಸವಿದೆ. ಆದರೆ ಪರ್ತ್, ಭಾರತಕ್ಕಿಂತ ಕೇವಲ ಎರಡೂವರೆ ಗಂಟೆ ಮುಂದಿದೆ ಅಷ್ಟೇ. ಭಾರತೀಯ ಮಾರುಕಟ್ಟೆಗೆ ಅನುಕೂಲವಾಗುವಂತಹ ಸಮಯವಿದು. ಹೀಗಾಗಿ ಪರ್ತ್ ಪಂದ್ಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಬುಕ್ಕಿ, ರಹಸ್ಯ ಕಾರ್ಯಾಚರಣೆ ವೇಳೆ ಹೇಳಿದ್ದಾರೆ ‘ನಿನಗೆ ಆಸಕ್ತಿ ಇದ್ದರೆ, ಸೈಲೆಂಟ್ ಮ್ಯಾನ್‌ಗೆ ಆಟಗಾರರನ್ನು ಸಂಪರ್ಕಿಸಿ ಫಿಕ್ಸಿಂಗ್ ನಡೆಸಲು ಹೇಳುತ್ತೇವೆ. ಪ್ರತಿ ಅವಧಿಗೆ ರೂ 60 ಲಕ್ಷ ನೀಡಬೇಕಾಗುತ್ತದೆ ’ ಎಂದು ಸೋಬರ್ಸ್‌ ಜೋಬನ್, ‘ದ ಸನ್’ ವರದಿಗಾರನಿಗೆ ಹೇಳಿದ್ದಾಗಿ ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ.

ಯಾರು ಈ ಸೋಬರ್ಸ್‌, ಪ್ರಿಯಾಂಕ್?

‘ದ ಸನ್’ 4 ತಿಂಗಳುಗಳ ಕಾಲ ಹುಡುಕಾಡಿ ಸೋಬರ್ಸ್‌ ಜೋಬನ್ ಹಾಗೂ ಪ್ರಿಯಾಂಕ್ ಸಕ್ಸೇನಾ ಅವರನ್ನು ಭೇಟಿಯಾಗಿದ್ದಾಗಿ ತಿಳಿಸಿದೆ. ಸ್ವತಃ ಸೋಬರ್ಸ್‌ ಹೇಳುವ ಪ್ರಕಾರ, ಆತ ದೆಹಲಿಯ ಮಾಜಿ ಆಟಗಾರ. ಈ ಹಿಂದೆ ವಿರಾಟ್ ಕೊಹ್ಲಿ ಜತೆ ಸಹ ದೆಹಲಿಯ ಪಂದ್ಯವೊಂದರಲ್ಲಿ ಆಡಿದ್ದಾನಂತೆ. ಕಳೆದ 10 ವರ್ಷದಿಂದ ಫಿಕ್ಸಿಂಗ್ ದಂಧೆಯಲ್ಲಿ ತೊಡಗಿರುವುದಾಗಿ ಹೇಳಿಕೊಂಡಿದ್ದಾನೆ.ಇನ್ನು ಪ್ರಿಯಾಂಕ್ ಒಬ್ಬ ಉದ್ಯಮಿಯಾಗಿದ್ದು, ದ.ಆಫ್ರಿಕಾದಲ್ಲಿ ವ್ಯವಹಾರ ನಡೆಸುವುದಾಗಿ ರಹಸ್ಯ ಕಾರ್ಯಾಚರಣೆ ವೇಳೆ ಹೇಳಿಕೊಂಡಿದ್ದಾನೆ.

ಐಪಿಎಲ್, ಬಿಗ್‌ಬ್ಯಾಶ್‌ನಲ್ಲೂ ಫಿಕ್ಸಿಂಗ್?

ತಾನು ಐಪಿಎಲ್ ಹಾಗೂ ಆಸ್ಟ್ರೇಲಿಯಾದ ಬಿಗ್‌ಬ್ಯಾಶ್‌ನಲ್ಲೂ ಸ್ಪಾಟ್ ಫಿಕ್ಸಿಂಗ್ ನಡೆಸಿರುವುದಾಗಿ ಹೇಳಿದ್ದಾನೆ. ಆತನ ಪ್ರಕಾರ, 2 ಐಪಿಎಲ್ ತಂಡಗಳ ಸಹಾಯದಿಂದ 17-18 ಪಂದ್ಯಗಳಲ್ಲಿ ಫಿಕ್ಸಿಂಗ್ ನಡೆದಿದೆ. ಫಿಕ್ಸಿಂಗ್ ನಡೆಸುವ ಆಟಗಾರರಿಗೆ ಹವಾಲ ಮೂಲಕ ಹಣ ಸಂದಾಯವಾಗುತ್ತದೆ ಎಂದು ಸೋಬರ್ಸ್‌ ಹೇಳಿದ್ದಾನೆ.

ಸ್ಪಾಟ್ ಫಿಕ್ಸಿಂಗ್ ನಡೆಯುವುದು ಹೇಗೆ?

ಭಾರತದಲ್ಲಿ ಬೆಟ್ಟಿಂಗ್ ಅಕ್ರಮ.ಪ್ರತಿ ವರ್ಷ ಕೋಟ್ಯಂತರ ರು.ಗಳ ಅಕ್ರಮ ವ್ಯವಹಾರ ನಡೆಯುತ್ತದೆ. ಬುಕ್ಕಿಗಳು ಮಾಜಿ ಕ್ರಿಕೆಟಿಗರು, ಆಡಳಿತಗಾರರ ಸಹಾಯ ಪಡೆದು ಕೊಳ್ಳುತ್ತಾರೆ. ಇದು ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಲು ಸುಲಭವಾಗಲಿದೆ. ಆಟಗಾರರಿಗೆ ಲಿಖಿತ ಆದೇಶಗಳನ್ನು ಬುಕ್ಕಿಗಳು ನೀಡುತ್ತಾರೆ. ಇದರಲ್ಲಿ ಒಂದು ಓವರ್‌ಗೆ ನಿಗದಿ ಪಡಿಸಿದಷ್ಟೇ ರನ್ ಬಿಟ್ಟುಕೊಡಬೇಕು, ನಿಧಾನ ಗತಿಯ ಓವರ್-ರೇಟ್, ಫಲಿತಾಂಶವನ್ನು ಬದಲಿಸುವುದು, ವಿಕೆಟ್ ಕಳೆದುಕೊಳ್ಳುವುದರಿಂದ ಹಿಡಿದು ಟಾಸ್‌ಗೂ ಬೆಟ್ಟಿಂಗ್ ನಡೆಯುತ್ತದೆ. ನಾಯಕ, ಇಲ್ಲವೇ ಆಟಗಾರ ಕ್ಷೇತ್ರರಕ್ಷಣೆ ಬದಲಿಸುವುದು ಸಹ ಬುಕ್ಕಿಗಳಿಗೆ ನೀಡುವ ಸೂಚನೆ ಎನ್ನಲಾಗಿದೆ. ಇದನ್ನು ಕ್ರೀಡಾಂಗಣದಲ್ಲಿರುವ ಬುಕ್ಕಿಗಳ ಕಡೆಯವರು ಗಮನಿಸಿ, ತಕ್ಷಣ ಸಂದೇಶ ರವಾನಿಸುತ್ತಾರೆ. ಬುಕ್ಕಿಗಳು ಈ ಮಾಹಿತಿಯನ್ನಿಟ್ಟು ಕೊಂಡು ಕೋಟ್ಯಂತರ ರುಪಾಯಿಗಳ ವ್ಯವಹಾರ ನಡೆಸಲಾಗುತ್ತದೆ ಎಂದು ಸೋಬರ್ಸ್‌ ಹೇಳಿದ್ದಾನೆ.

ಆಟಗಾರರು ನೀಡುವ ಸಿಗ್ನಲ್‌ಗಳೇನು?

ಬುಕ್ಕಿ ಸೋಬರ್ಸ್‌ ಪ್ರಕಾರ, ಆಟಗಾರರು ಉದ್ದ ತೋಳಿನ ಜೆರ್ಸಿಗಳನ್ನು ಧರಿಸುವುದು ಸಹ ಒಂದು ಸಿಗ್ನಲ್ (ಸೂಚನೆ). ಕ್ಷೇತ್ರರಕ್ಷಣೆ ಬದಲಿಸುವುದು, ಗ್ಲೌಸ್‌ಗಳನ್ನು ಬದಲಿಸುವುದು, ಹೆಲ್ಮೆಟ್ ತೆಗೆಯುವುದು ಸಹ ಸೂಚನೆಗಳೇ. ಎಷ್ಟೋ ಪಂದ್ಯ ದಲ್ಲಿ ಆಟಗಾರ ಯಾವುದೇ ಸೂಚನೆ ನೀಡುವುದಿಲ್ಲ. ಆದರೆ ಆ ಪಂದ್ಯದಲ್ಲಿ ಆತ ಉದ್ದ ತೋಳಿನ ಜೆರ್ಸಿಧರಿಸಿ ದ್ದಾನೆ ಎಂದರೆ ಆತ 6ನೇ , 10ನೇ ,15ನೇ ಹಾಗೂ 20ನೇ ಓವರ್ ಬೌಲ್ ಮಾಡುತ್ತಾನೆ ಎಂದರ್ಥ. ಓವರ್‌ನ ಆರಂಭದಲ್ಲಿ ವೈಡ್ ಎಸೆಯುವುದು ಸಹ ಒಂದು ಸಿಗ್ನಲ್. ಬೌಲಿಂಗ್ ರನ್-ಅಪ್ ಅರ್ಧಕ್ಕೆ ನಿಲ್ಲಿಸುವುದು ಸಹ ಒಂದು ಸೂಚನೆ. ‘ಎಷ್ಟೋ ಬಾರಿ ಬೌಲರ್‌ಗಳು ತಮಗೆ ಸೂಚನೆಗಳನ್ನು ನೀಡಲು ಕಷ್ಟವಾಗುತ್ತದೆ. ಮೊದಲ ಎಸೆತವನ್ನು ಬೌನ್ಸರ್ ಹಾಕಿದರೆ, ಆ ಓವರ್‌ನಲ್ಲಿ ಮಾತನಾಡಿಕೊಂಡಿದ್ದಷ್ಟು ರನ್ ನೀಡುತ್ತೇನೆ.ವೈಡ್, ನೋಬಾಲ್ ಹಾಕುತ್ತೇನೆ ಎಂದು ಮೊದಲೇ ಒಪ್ಪಿಕೊಂಡಿರುತ್ತಾರೆ’ ಎಂದು ಸೋಬರ್ಸ್‌ ಹೇಳಿದ್ದಾನೆ.

ಐಸಿಸಿ ಕ್ಲೀನ್ ಚಿಟ್

ಆ್ಯಷಸ್ ಸರಣಿಯಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸುವ ಯತ್ನ ನಡೆದಿದೆ ಎನ್ನುವ ಆರೋಪವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ತಳ್ಳಿಹಾಕಿದೆ. ವಿಷಯ ತಿಳಿಯುತ್ತಿದ್ದಂತೆ ಪ್ರಾಥಮಿಕ ತನಿಖೆ ಆರಂಭಿಸಿದ ಐಸಿಸಿಗೆ ಈ ಸಂಬಂಧ ಯಾವುದೇ ಸಾಕ್ಷ್ಯಾಧಾರ ದೊರೆತಿಲ್ಲ. ‘ಟ್ಯಾಬ್ಲಾಯ್ಡ್ ವರದಿಗೆ ಸಂಬಂಧಿಸಿದಂತೆ ನಾವು ಅಗತ್ಯ ತನಿಖೆ ನಡೆಸಿದ್ದೇವೆ.

ಆದರೆ ಫಿಕ್ಸಿಂಗ್ ನಡೆದಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರ ಪತ್ತೆಯಾಗಿಲ್ಲ. ಆಸ್ಟ್ರೇಲಿಯಾ ಇಲ್ಲವೇ ಇಂಗ್ಲೆಂಡ್‌ನ ಯಾವ ಆಟಗಾರರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿಲ್ಲ’ ಎಂದು ಐಸಿಸಿ ಭದ್ರತೆ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ಅಲೆಕ್ಸ್ ಮಾರ್ಷಲ್ ಸ್ಪಷ್ಟಪಡಿಸಿದ್ದಾರೆ.