Asianet Suvarna News Asianet Suvarna News

ಜೊಕೊ ಮಣಿಸಿದ ವಾವ್ರಿಂಕಾ ಚಾಂಪಿಯನ್

‘‘ನಾನು ಇಲ್ಲಿಗೆ ಯಾವುದೇ ಗುರಿಯನ್ನು ಹಾಕಿಕೊಂಡು ಬಂದಿರಲಿಲ್ಲ. ಆದರೆ, ಕೋರ್ಟ್ಗೆ ಕಾಲಿಟ್ಟಪ್ರತೀ ಕ್ಷಣವೂ ಗೆಲುವಿಗಾಗಿ ಪ್ರಯತ್ನಿಸಿದೆ. ನನ್ನ ಪಾಲಿಗೆ ರಾತ್ರಿ ವಿಸ್ಮಯಕಾರಿಯಾಗಿದೆ’’

ಸ್ಟಾನಿಸ್ಲಾಸ್ವಾವ್ರಿಂಕಾ

Tennis Wawrinka claims maiden US Open title

ವಿಶ್ವದ ನಂ.1 ಆಟಗಾರ, ಸರ್ಬಿಯಾದ ನೊವಾಕ್‌ ಜೊಕೊವಿಚ್‌ ವಿರುದ್ಧ ಮೊದಲ ಸೆಟ್‌ನಲ್ಲಿನ ಹಿನ್ನಡೆಯ ಮಧ್ಯೆಯೂ ಆನಂತರ ದಿಟ್ಟಪ್ರದರ್ಶನ ನೀಡಿದ ಸ್ವಿಟ್ಜರ್ಲೆಂಡ್‌ನ ಸ್ಟಾನಿಸ್ಲಾಸ್‌ ವಾವ್ರಿಂಕಾ ಋುತುವಿನ ಕಡೆಯ ಗ್ರಾಂಡ್‌ಸ್ಲಾಮ್‌ ಗೆದ್ದು ಚಾಂಪಿಯನ್‌ ಎನಿಸಿದರು.

ಭಾನುವಾರ ತಡರಾತ್ರಿ ಇಲ್ಲಿನ ಫ್ಲಶಿಂಗ್‌ ಮೆಡೋಸ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಸ್ವಿಸ್‌ ಆಟಗಾರ ವಾವ್ರಿಂಕಾ, ನೊವಾಕ್‌ ಜೊಕೊವಿಚ್‌ ವಿರುದ್ಧ 6-7 (1/7), 6-4, 7-5, 6-3 ಸೆಟ್‌ಗಳ ಗೆಲುವು ಸಾಧಿಸಿ ಪ್ರಶಸ್ತಿ ಪಡೆದರು. ಈ ಹಿಂದಿನ ಒಟ್ಟಾರೆ 23 ಪಂದ್ಯಗಳಲ್ಲಿ ಜೊಕೊವಿಚ್‌ ವಿರುದ್ಧ ಕೇವಲ 4 ಪಂದ್ಯಗಳಲ್ಲಷ್ಟೇ ಗೆಲುವು ಸಾಧಿಸಿದ್ದ ವಾವ್ರಿಂಕಾ ಈ ಬಾರಿ ಜೊಕೊ ಸವಾಲನ್ನು ಮೆಟ್ಟಿನಿಲ್ಲುವಲ್ಲಿ ಸಫಲವಾದರು.

ಜೊಕೊವಿಚ್‌ ಮಣಿಸುವುದರೊಂದಿಗೆ 31 ವರ್ಷದ ವಾವ್ರಿಂಕಾ ಯುಎಸ್‌ ಓಪನ್‌ ಗೆದ್ದ ಅತ್ಯಂತ ಎರಡನೇ ಹಿರಿಯ ಆಟಗಾರನೆನಿಸಿದರಲ್ಲದೆ, 46 ವರ್ಷಗಳ ಯುಎಸ್‌ ಓಪನ್‌ನಲ್ಲಿ ಹೊಸದೊಂದು ದಾಖಲೆ ಬರೆದರು. ಈ ಮುನ್ನ 1970ರ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿದ್ದ ಆಸ್ಪ್ರೇಲಿಯಾದ ಕೆನ್‌ ರೋಸ್‌ವಾಲ್‌ಗೆ 35 ವರ್ಷಗಳಾಗಿತ್ತು. ಇನ್ನು 2002ರಲ್ಲಿ ಪೀಟ್‌ ಸಾಂಪ್ರಾಸ್‌ ಯುಎಸ್‌ ಓಪನ್‌ ಗೆದ್ದದ್ದು 30ರ ಹರೆಯದಲ್ಲಿ.

ಅಂದಹಾಗೆ ಯುಎಸ್‌ ಓಪನ್‌ ಚಾಂಪಿಯನ್‌ ವಾವ್ರಿಂಕಾಗೆ ಇದು ವೃತ್ತಿಬದುಕಿನ ಮೂರನೇ ಗ್ರಾಂಡ್‌ಸ್ಲಾಮ್‌. 2014ರಲ್ಲಿ ಆಸ್ಪ್ರೇಲಿಯನ್‌ ಓಪನ್‌ ಗೆದ್ದಿದ್ದ ವಾವ್ರಿಂಕಾ, ಮರುವರ್ಷ ರೊಲಾಂಡ್‌ ಗ್ಯಾರೋಸ್‌ನಲ್ಲಿಯೂ ಚಾಂಪಿಯನ್‌ ಎನಿಸಿದ್ದರು.

ಫಲ ನೀಡದ ಭರ್ಜರಿ ಆರಂಭ

ನ್ಯೂಯಾರ್ಕ್ನಲ್ಲಿ ನಾಲ್ಕನೇ ಬಾರಿಗೆ ರನ್ನರ್‌ಅಪ್‌ ಎನಿಸಿದ 29 ವರ್ಷದ ನೊವಾಕ್‌ ವಾಸ್ತವವಾಗಿ ಮೊದಲ ಸೆಟ್‌ ಅನ್ನು ತುಸು ಪ್ರಯಾಸದಿಂದಲೇ ಟೈಬ್ರೇಕರ್‌ನಲ್ಲಿ ಜಯಿಸುವುದರೊಂದಿಗೆ ಉತ್ತಮ ಆರಂಭ ಪಡೆದರಾದರೂ, ಆನಂತರದಲ್ಲಿ ವಾವ್ರಿಂಕಾ ತೋರಿದ ಪ್ರತಿರೋಧವನ್ನು ದಿಟ್ಟತೆಯಿಂದ ನಿಭಾಯಿಸುವಲ್ಲಿ ವಿಫಲವಾದರು. 17 ಬ್ರೇಕ್‌ ಪಾಯಿಂಟ್‌ಗಳಲ್ಲಿ ಕೇವಲ ಮೂರನ್ನಷ್ಟೇ ತನ್ನದಾಗಿ ಪರಿವರ್ತಿಸಿದ ಜೊಕೊವಿಚ್‌ ಸ್ವಿಸ್‌ ಆಟಗಾರನ ಲೆಕ್ಕಾಚಾರದ ಆಟಕ್ಕೆ ಪ್ರತಿ ಹೇಳಲು ಸಾಧ್ಯವಾಗದೆ ಸೋಲಪ್ಪಿದರು. 21ನೇ ಗ್ರಾಂಡ್‌ಸ್ಲಾಮ್‌ ಫೈನಲ್‌ ಆಡಿದ ಜೊಕೊವಿಚ್‌, 13ನೇ ಗ್ರಾಂಡ್‌ಸ್ಲಾಮ್‌ ಗೆಲ್ಲುವ ಕನಸು ಹೀಗೆ ಕಮರಿತು.

ಕಾಡಿದ ಗಾಯದ ಸಮಸ್ಯೆ

ಅಂದಹಾಗೆ ಈ ಟೂರ್ನಿಯ ಸೆಮಿಫೈನಲ್‌ ಹಂತದವರೆಗೆ ಹೆಚ್ಚು ಪ್ರಯಾಸವಿಲ್ಲದೆ ಮುನ್ನಡೆದಿದ್ದ ಜೊಕೊವಿಚ್‌, ಭುಜದ ನೋವಿನಿಂದಾಗಿ ಸಾಕಷ್ಟುಅವಸ್ಥೆ ಪಟ್ಟಿದ್ದರು. ಇನ್ನು ವಾವ್ರಿಂಕಾ ಎದುರಿನ ಪಂದ್ಯದಲ್ಲಂತೂ ಪಾದದ ಹೆಬ್ಬೆರಳ ನೋವು ಅವರನ್ನು ಅತಿಯಾಗಿ ಬಾಧಿಸಿತು. ನೋವಿನಿಂದಾಗಿ ಬಿಡುವು ಪಡೆದ ವೇಳೆ ‘‘ಸ್ಟಾನ್‌, ಸಾರಿ! ನನ್ನಿಂದ ನಿಲ್ಲಲಾಗುತ್ತಿಲ್ಲ’’ ಎಂದು ಹೇಳಿದ ಜೊಕೊವಿಚ್‌, ಎರಡು ಬಾರಿ ಚಿಕಿತ್ಸೆ ಪಡೆದು ಹೋರಾಟಕ್ಕಿಳಿದರಾದರೂ, ವಾವ್ರಿಂಕಾಗೆ ಸರಿಸಾಟಿಯಾದ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಕೊನೆಗೆ ಸೋಲಿನಿಂದಾಗಿ ಸಹನೆ ಕಳೆದುಕೊಂಡು ತನ್ನ ರಾರ‍ಯಕೆಟ್‌ ಅನ್ನು ಮುರಿದು ನಿಯಮಾವಳಿ ಉಲ್ಲಂಘಿಸಿದ ಅವರನ್ನು ಅಂಪೈರ್‌ ಅಲಿ ನಿಲಿ ಎಚ್ಚರಿಸಿದರು.

Follow Us:
Download App:
  • android
  • ios