ಫೆಡರರ್ vs ಜೋಕೋ ವಿಂಬಲ್ಡನ್ ಫೈನಲ್
ವಿಂಬಲ್ಡನ್ ಟೂರ್ನಿಯಲ್ಲಿ ಸ್ಪೇನ್‌ನ ರಾಫೆಲ್ ನಡಾಲ್ ಮಣಿಸಿದ ಸ್ವಿಟ್ಜರ್‌ಲ್ಯಾಂಡ್‌ನ ರೋಜರ್ ಫೆಡರರ್ 9ನೇ ಬಾರಿಗೆ ವಿಂಬಲ್ಡನ್ ಫೈನಲ್ ಪ್ರವೇಶಿಸಿದ್ದಾರೆ. ಇದೀಗ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ನೋವಾಕ್ ಜೋಕೋವಿಚ್ ವಿರುದ್ಧ ಪ್ರಶಸ್ತಿಗಾಗಿ ಫೆಡರರ್ ಕಾದಾಡಲಿದ್ದಾರೆ.
ಲಂಡನ್[ಜು.13]: ಹಾಲಿ ಚಾಂಪಿಯನ್ ನೋವಾಕ್ ಜೋಕೋವಿಚ್ ಹಾಗೂ 8 ಬಾರಿ ಚಾಂಪಿಯನ್ ರೋಜರ್ ಫೆಡರರ್, ವಿಂಬಲ್ಡನ್ ಗ್ರ್ಯಾಂಡ್‌ಸ್ಲಾಂ ಟೆನಿಸ್ ಚಾಂಪಿಯನ್‌ಶಿಪ್‌ನ ಫೈನಲ್ ಪ್ರವೇಶಿಸಿದ್ದಾರೆ. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಇಬ್ಬರು ದಿಗ್ಗಜ ಆಟಗಾರರು ಪ್ರಶಸ್ತಿಗಾಗಿ ಸೆಣಸಲಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ವಿಶ್ವ ನಂ.1 ಸರ್ಬಿಯಾದ ಜೋಕೋವಿಚ್, ಸ್ಪೇನ್‌ನ ಬಟಿಸ್ಟಾಅಗುಟ್ ವಿರುದ್ಧ 6-4, 4-6, 6-3, 6-2 ಸೆಟ್‌ಗಳಲ್ಲಿ ಭರ್ಜರಿ ಗೆಲುವು ಸಾಧಿಸಿದರು. ವಿಶ್ವ ನಂ.1 ಟೆನಿಸಿಗ ಜೋಕೋವಿಚ್, 6ನೇ ಬಾರಿಗೆ ವಿಂಬಲ್ಡನ್ ಫೈನಲ್‌ನಲ್ಲಿ ಆಡಲಿದ್ದು, 5ನೇ ಬಾರಿ ಟ್ರೋಫಿ ಗೆಲ್ಲುವ ಗುರಿ ಹೊಂದಿದ್ದಾರೆ. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್‌ನ ರಾಫೆಲ್ ನಡಾಲ್ ವಿರುದ್ಧ ಸ್ವಿಜರ್‌ಲೆಂಡ್‌ನ ಟೆನಿಸ್ ಮಾಂತ್ರಿಕ ಫೆಡರರ್ 7-6(7/3), 1-6, 6-3, 6-4 ಸೆಟ್‌ಗಳಲ್ಲಿ ಜಯಗಳಿಸಿ, 31ನೇ ಬಾರಿಗೆ ಗ್ರ್ಯಾಂಡ್‌ಸ್ಲಾಂ ಫೈನಲ್‌ಗೇರಿದರು.
ಜೋಕೋಗೆ ಸುಲಭ ಜಯ: 2018ರ ಸೆಮಿಫೈನಲ್‌ಗೆ ಹೋಲಿಸಿದರೆ ಈ ವರ್ಷ ಜೋಕೋವಿಚ್‌ಗೆ ಗೆಲುವು ಸುಲಭವಾಗಿ ಒಲಿಯಿತು. ಕಳೆದ ವರ್ಷ ರಾಫೆಲ್ ನಡಾಲ್ ವಿರುದ್ಧ ಸೆಮೀಸ್‌ನಲ್ಲಿ ಜೋಕೋವಿಚ್ ಬರೋಬ್ಬರಿ 5 ಗಂಟೆ, 15 ನಿಮಿಷಗಳ ಕಾಲ ಹೋರಾಟ ನಡೆಸಿದ್ದರು. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್‌ಸನ್ ವಿರುದ್ಧ ಗೆಲುವು ಸಾಧಿಸಿದ್ದ ಜೋಕೋವಿಚ್ ತಮ್ಮ 4ನೇ ವಿಂಬಲ್ಡನ್ ಗೆದ್ದಿದ್ದರು.
5 ಫೈನಲ್, 4ರಲ್ಲಿ ಜಯ: ಜೋಕೋವಿಚ್ ಈ ವರೆಗೂ 5 ಬಾರಿ ವಿಂಬಲ್ಡನ್ ಫೈನಲ್‌ನಲ್ಲಿ ಆಡಿದ್ದು 4 ಬಾರಿ ಪ್ರಶಸ್ತಿ ಗೆದ್ದಿದ್ದಾರೆ. 2011ರಲ್ಲಿ ಮೊದಲ ಬಾರಿಗೆ ವಿಂಬಲ್ಡನ್ ಫೈನಲ್‌ನಲ್ಲಿ ಆಡಿದ ಅವರು, ರಾಫೆಲ್ ನಡಾಲ್ ವಿರುದ್ಧ 3-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿ, ಪ್ರಶಸ್ತಿ ಗೆದ್ದಿದ್ದರು. 2013ರ ವಿಂಬಲ್ಡನ್‌ನ ಫೈನಲ್‌ನಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆ ವಿರುದ್ಧ ನೇರ ಸೆಟ್‌ಗಳಲ್ಲಿ ಸೋಲುಂಡ ಜೋಕೋವಿಚ್ ನಿರಾಸೆ ಅನುಭವಿಸಿದ್ದರು. 2014ರಲ್ಲಿ ಮತ್ತೆ ಫೈನಲ್‌ಗೇರಿದ್ದ ಜೋಕೋವಿಚ್, ಟೆನಿಸ್ ಮಾಂತ್ರಿಕ ರೋಜರ್ ಫೆಡರರ್ ವಿರುದ್ಧ 3-2 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿ 2ನೇ ಬಾರಿಗೆ ವಿಂಬಲ್ಡನ್ ಚಾಂಪಿಯನ್ ಆಗಿದ್ದರು. 2015ರ ಫೈನಲ್‌ನಲ್ಲಿ ಮತ್ತೊಮ್ಮೆ ಫೆಡರರ್ ವಿರುದ್ಧ ಗೆಲುವು ಸಾಧಿಸಿದ್ದ ಜೋಕೋವಿಚ್, 2018ರಲ್ಲಿ ಎಂದರೆ 3 ವರ್ಷಗಳ ಬಳಿಕ ವಿಂಬಲ್ಡನ್ ಫೈನಲ್‌ಗೇರಿ ಪ್ರಶಸ್ತಿ ಗೆದ್ದಿದ್ದರು.
ಹಾಲಿ ಚಾಂಪಿಯನ್ ಆಗಿರುವ ಜೋಕೋವಿಚ್, ಪ್ರಶಸ್ತಿ ಉಳಿಸಿಕೊಳ್ಳುವ ಗುರಿ ಹೊಂದಿದ್ದಾರೆ. 2018ರಲ್ಲಿ ಯುಎಸ್ ಓಪನ್ ಗೆದ್ದಿದ್ದ ಅವರು, ಈ ವರ್ಷದ ಆಸ್ಪ್ರೇಲಿಯನ್ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಆದರೆ ಫ್ರೆಂಚ್ ಓಪನ್‌ನಲ್ಲಿ ಫೈನಲ್‌ಗೇರಲು ವಿಫಲರಾಗಿದ್ದರು.
12ನೇ ಬಾರಿ ಫೈನಲ್‌ಗೆ ಫೆಡರರ್: ದಾಖಲೆಯ 12ನೇ ಬಾರಿಗೆ ವಿಂಬಲ್ಡನ್ ಫೈನಲ್‌ಗೇರಿರುವ ಫೆಡರರ್, 9ನೇ ಬಾರಿಗೆ ಟ್ರೋಫಿ ಗೆಲ್ಲುವ ಗುರಿ ಹೊಂದಿದ್ದಾರೆ. 20 ಗ್ರ್ಯಾಂಡ್‌ಸ್ಲಾಂಗಳನ್ನು ಗೆದ್ದಿರುವ ಫೆಡರರ್, ಮತ್ತೊಂದು ಜಯದ ಮೇಲೆ ಕಣ್ಣಿರಿಸಿದ್ದಾರೆ. 2017ರಲ್ಲಿ ವಿಂಬಲ್ಡನ್ ಚಾಂಪಿಯನ್ ಆಗಿದ್ದ ಅವರು, ಕಳೆದ ವರ್ಷ ಕ್ವಾರ್ಟರ್ ಫೈನಲ್‌ನಲ್ಲಿ ಕೆವಿನ್ ಆ್ಯಂಡರ್‌ಸನ್ ವಿರುದ್ಧ ಅಚ್ಚರಿಯ ಸೋಲು ಕಂಡಿದ್ದರು. 2018ರ ಆಸ್ಪ್ರೇಲಿಯನ್ ಓಪನ್‌ನಲ್ಲಿ ಕೊನೆ ಬಾರಿಗೆ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಗೆದ್ದಿದ್ದ ಫೆಡರರ್, ಮತ್ತೊಂದು ಪ್ರಶಸ್ತಿ ಜಯದೊಂದಿಗೆ ತಮ್ಮ ನಿವೃತ್ತಿ ನಿರ್ಧಾರವನ್ನು ಮುಂದೂಡಲು ಕಾತರರಾಗಿದ್ದಾರೆ.