ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದ ಅಂತಿಮ ಘಟ್ಟದಲ್ಲಿದೆ. ಒಗ್ಗಟ್ಟಿನಿಂದ ಇಂಗ್ಲೆಂಡ್ ನಾಡಿಗೆ ತೆರಳಿದ ಭಾರತ ತಂಡದೊಳಗೆ ಇದೀಗ ಅಸಮಧಾನಗಳು ಹೊರಬಿದ್ದಿದೆ. ಇಲ್ಲಿದೆ ಟೀಂ ಇಂಡಿಯಾ ಒಳಗಿನ ಅಸಮಧಾನ. 

ಲಂಡನ್(ಸೆ.06): ಇಂಗ್ಲೆಂಡ್ ವಿರುದ್ಧದ ಸರಣಿ ಸೋತಿರುವ ಟೀಂ ಇಂಡಿಯಾ ಇದೀಗ ನಾಳೆಯಿಂದ(ಸೆ.07) 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಆಡಲಿದೆ. ಭಾರತ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳೋ ಲೆಕ್ಕಾಚಾರದಲ್ಲಿದ್ದರೆ, ಇಂಗ್ಲೆಂಡ್ ಅಲಿಸ್ಟೈರ್ ಕುಕ್‌ಗೆ ಗೆಲುವಿನ ವಿದಾಯ ಹೇಳಲು ನಿರ್ಧರಿಸಿದೆ.

ಅಂತಿಮ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆ ಮಾಡಲು ನಾಯಕ ಕೊಹ್ಲಿ ನಿರ್ಧರಿಸಿದ್ದಾರೆ. ಆದರೆ ಪದೇ ಪದೇ ತಂಡವನ್ನ ಬದಲಾಯಿಸುತ್ತಿರುವ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. 

ಪ್ರತಿ ಪಂದ್ಯದಲ್ಲಿ ಆಟಗಾರರನ್ನ ಬದಲಾಯಿಸುವುದರಿಂದ ಆಟಗಾರರ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುತ್ತಿದೆ. ಜೊತೆಗೆ ಆಟಗಾರರಿಗೆ ಅಭದ್ರತೆ ಕಾಡುತ್ತಿದೆ. ಇದಕ್ಕಿಂತ ಹೆಚ್ಚಾಗಿ ನಾಯಕ ತನ್ನ ಆಟಗಾರರ ಮೇಲೆ ವಿಶ್ವಾಸವಿಟ್ಟಿಲ್ಲ ಅನ್ನೋ ಸಂದೇಶ ಕೂಡ ರವಾನೆಯಾಗುತ್ತಿದೆ. ಇದು ಪಂದ್ಯದ ಫಲಿತಾಂಶದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಇಂಗ್ಲೆಂಡ್ ಪ್ರವಾಸ ಕೈಗೊಂಡ ಕ್ರಿಕೆಟಿಗ ಹೇಳಿದ್ದಾರೆ.

ಆಟಗಾರ ಫಾರ್ಮ್‌ಗೆ ಮರಳಲು ಕನಿಷ್ಠ ಎರಡರಿಂದ ಮೂರು ಪಂದ್ಯಗಳು ಅಗತ್ಯ. ಆದರೆ ಸದ್ಯ ಒಂದು ಇನ್ನಿಂಗ್ಸ್ ಹಾಗೂ ಅಥವ ಪಂದ್ಯದ ವೈಫಲ್ಯದಿಂದ ಆಟಗಾರರನ್ನ ಬದಲಾಯಿಸಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಚಿಸಿದ ಕ್ರಿಕೆಟಿಗ ಅಸಮಧಾನ ಹೊರಹಾಕಿದ್ದಾರೆ.

ವಿರಾಟ್ ಕೊಹ್ಲಿ ಅತ್ಯುತ್ತಮ ಆಟಗಾರ. ಅಷ್ಟೇ ಉತ್ತಮ ನಾಯಕ. ಆದರೆ ಪ್ರತಿ ಪಂದ್ಯಕ್ಕೂ ಆಟಗಾರರ ಬದಲಾವಣೆ ತಂಡಕ್ಕೆ ಹೊಡೆತ ನೀಡುತ್ತಿದೆ ಎಂದಿದ್ದಾರೆ.