ಇಂಗ್ಲೆಂಡ್ ವಿರುದ್ಧದ ಆರಂಭಿಕ 2 ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿದ ಭಾರತ, ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದೆ. 3ನೇ ಟೆಸ್ಟ್ ಪಂದ್ಯ ಗೆಲ್ಲೋ ಮೂಲಕ ಇಂಗ್ಲೆಂಡ್ ನೆಲದಲ್ಲಿ ಗೆಲುವಿನ ಸಿಹಿ ಕಂಡಿದೆ. ಇದೀಗ ಈ ಗೆಲುವನ್ನ ನಾಯಕ ವಿರಾಟ್ ಕೊಹ್ಲಿ ಕೇರಳ ಸಂತ್ರಸ್ತರಿಗೆ ಅರ್ಪಿಸಿದ್ದಾರೆ.
ನಾಟಿಂಗ್‌ಹ್ಯಾಮ್(ಆ.22): ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 203 ರನ್‌ಗಳ ಗೆಲುವು ಸಾಧಿಸಿದೆ. ಸರಣಿಯಲ್ಲಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿರುವ ಭಾರತ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-2 ಅಂತರ ಸಾಧಿಸಿದೆ.
ಟ್ರೆಂಟ್‌ಬ್ರಿಡ್ಜ್ ಟೆಸ್ಟ್ ಪಂದ್ಯದ ಗೆಲುವಿನ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ತಂಡದ ಗೆಲುವನ್ನ ಕೇರಳ ಪ್ರವಾಹ ಸಂತ್ರಸ್ತರಿಗೆ ಅರ್ಪಿಸಿದರು. ಕೇರಳ ಭೀಕರ ಪ್ರವಾಹಕ್ಕೆ ತುತ್ತಾಗಿದೆ. ಹಲವು ಪ್ರಾಣ ಕಳೆದುಕೊಂಡರೆ ಬಹುತೇಕರು ಮನೆ ಮಠ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ಈ ಗೆಲುವನ್ನ ಅರ್ಪಿಸುತ್ತಿದ್ದೇವೆ ಎಂದು ಕೊಹ್ಲಿ ಹೇಳಿದರು.
ಭಾರತ 3ನೇ ಟೆಸ್ಟ್ ಪಂದ್ಯ ಆರಂಭಗೊಳ್ಳುತ್ತಿದ್ದಂತೆ ಕೇರಳದಲ್ಲಿ ಮಳೆ ಮರಣ ಮೃದಂಗ ಭಾರಿಸಿತ್ತು. ಟೆಸ್ಟ್ ಆರಂಭಕ್ಕೂ ಮುನ್ನ ನಾಯಕ ಕೊಹ್ಲಿ ಸೇರಿದಂತೆ ಬಹುತೇಕ ಕ್ರಿಕೆಟಿಗರು ಕೇರಳಗೆ ನೆರವು ನೀಡುವಂತೆ ಮನವಿ ಮಾಡಿದ್ದರು.
3ನೇ ಟೆಸ್ಟ್ ಪಂದ್ಯದಲ್ಲಿ ಭಾರತ 329 ರನ್ ಸಿಡಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ಕೇವಲ 169 ರನ್‌ಗೆ ಆಲೌಟ್ ಆಗಿತ್ತು. ಈ ಮೂಲಕ ಭಾರತ 168 ರನ್ ಮುನ್ನಡೆ ಸಾಧಿಸಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 352 ರನ್ ಸಿಡಿಸಿ ಡಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಇಂಗ್ಲೆಂಡ್ ಗೆಲುವಿಗೆ 521 ರನ್ ಟಾರ್ಗೆಟ್ ನೀಡಿತ್ತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ 317 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಭಾರತ 203 ರನ್ ಗೆಲುವು ಸಾಧಿಸಿತು.
