ಮನೆಯಂಗಳದಲ್ಲಿ ಅದ್ಭುತವಾಗಿ ಆಡಿ ಮನೆಯೊಳಗೆ ಬರುವಾಗ ಹೊಸ್ತಿಲಲ್ಲಿ ಎಡವಿದ ಮಗುವಿನಂತಾಗಿದೆ ಪ್ರಸಕ್ತ ವರ್ಷದ ಕರ್ನಾಟಕ ರಣಜಿ ತಂಡದ ಕಥೆ.

ವಿಶಾಖಪಟ್ಟಣ(ಡಿ.24): ಮನೆಯಂಗಳದಲ್ಲಿ ಅದ್ಭುತವಾಗಿ ಆಡಿ ಮನೆಯೊಳಗೆ ಬರುವಾಗ ಹೊಸ್ತಿಲಲ್ಲಿ ಎಡವಿದ ಮಗುವಿನಂತಾಗಿದೆ ಪ್ರಸಕ್ತ ವರ್ಷದ ಕರ್ನಾಟಕ ರಣಜಿ ತಂಡದ ಕಥೆ.

ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿ ಪಂದ್ಯಾವಳಿಯ ನಾಕೌಟ್ ಹಂತಕ್ಕೆ ಕಾಲಿಟ್ಟಿದ್ದ ಕರ್ನಾಟಕ ತಂಡ, ಇಂದು ಅಂತ್ಯಗೊಂಡ ರಣಜಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 7 ವಿಕೆಟ್‌ಗಳ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದೆ.

ಶುಕ್ರವಾರ ಆರಂಭಗೊಂಡಿದ್ದ ಪಂದ್ಯದ ಮೊದಲ ದಿನ ನಡೆದಿದ್ದ ಬೌಲರ್‌'ಗಳ ಮೇಲಾಟ ಇಂದು ಕೂಡ ಮುಂದುವರಿಯಿತು. ಶುಕ್ರವಾರ ತನ್ನ ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕ ಕೇವಲ 88 ರನ್ ಮೊತ್ತಕ್ಕೆ ಆಲೌಟ್ ಆಗಿತ್ತು. ಆನಂತರ, ತನ್ನ ಮೊದಲ ಇನಿಂಗ್ಸ್ ಆರಂಭಿಸಿದ್ದ ತಮಿಳುನಾಡು, ದಿನಾಂತ್ಯದ ಹೊತ್ತಿಗೆ 111 ರನ್'ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು.

ಇಂದು ತನ್ನ ಇನಿಂಗ್ಸ್ ಮುಂದುವರಿಸಿದ ಅದು, 152 ರನ್‌'ಗಳಿಗೆ ಆಲೌಟ್ ಆಯಿತು. ಆನಂತರ, ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ, 150 ರನ್‌'ಗಳಿಗೆ ಪತನ ಕಂಡಿದ್ದರಿಂದಾಗಿ ತಮಿಳುನಾಡು ಪಡೆಗೆ ಪಂದ್ಯ ಗೆಲ್ಲಲು ಕೇವಲ 87 ರನ್‌'ಗಳ ಸಾಧಾರಣ ಗುರಿ ಸಿಕ್ಕಿತ್ತಷ್ಟೇ. ಈ ಅಲ್ಪ ಗುರಿಯನ್ನು ಮುಟ್ಟುವ ದಿಸೆಯಲ್ಲಿ 3 ವಿಕೆಟ್‌ಗಳನ್ನು ಅದು ಕಳೆದುಕೊಂಡರೂ ಪಂದ್ಯ ಗೆಲ್ಲುವ ಅವಕಾಶವನ್ನು ಕೈ ಚೆಲ್ಲದೇ ಗೆಲವಿನ ನಗೆ ಬೀರಿತು.

ಫಾರ್ಮ್ ಆಟಗಾರರೇ ಕೈ ಕೊಟ್ಟಾಗ!:

ಕ್ವಾರ್ಟರ್ ಫೈನಲ್ ಪಂದ್ಯವಾಗಿದ್ದರಿಂದಾಗಿ ತಮಿಳುನಾಡು ಕ್ರಿಕೆಟ್ ಸಂಸ್ಥೆಯು ಪಂದ್ಯಕ್ಕೂ ಮೊದಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಸ್ಟಾರ್ ಸ್ಪಿನ್ನರ್ ಆರ್. ಅಶ್ವಿನ್ ಹಾಗೂ ಮುರಳಿ ವಿಜಯ್ ಅವರನ್ನು ತಮಿಳುನಾಡು ತಂಡದಲ್ಲಿ ಸೇರ್ಪಡೆಗೊಳಿಸಲು ಪ್ರಯತ್ನಿಸಿತ್ತು.

ಇತ್ತ, ಕರ್ನಾಟಕ ತಂಡ, ಇತ್ತೀಚೆಗಷ್ಟೇ ಮುಗಿದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೆಚ್ಚುಗೆಯ ಪ್ರದರ್ಶನ ನೀಡಿರುವ ಕೆ.ಎಲ್. ರಾಹುಲ್, ಕರುಣ್ ನಾಯರ್ ಅವರನ್ನು ತಂಡದಲ್ಲಿ ಸೇರ್ಪಡೆಗೊಳಿಸಿಕೊಳ್ಳಲು ಯತ್ನಿಸಿತ್ತು. ಈ ಪ್ರಯತ್ನಗಳಲ್ಲಿ ಸಫಲರಾಗಿದ್ದು ಕರ್ನಾಟಕ ತಂಡವೇ. ಗಾಯದ ಸಮಸ್ಯೆಯಿಂದಾಗಿ ಅಶ್ವಿನ್, ಮುರಳಿ ವಿಜಯ್ ಅವರು ತಮಿಳುನಾಡು ತಂಡಕ್ಕೆ ಲಭ್ಯರಾಗಲಿಲ್ಲ. ಆದರೆ, ಇತ್ತ, ಕರ್ನಾಟಕಕ್ಕೆ ರಾಹುಲ್, ಕರುಣ್, ಮನೀಶ್ ಪಾಂಡೆ ಮೂವರೂ ಲಭ್ಯವಾದರು. ಇದು, ಸಹಜವಾಗಿ ಕರ್ನಾಟಕ ಪಾಳಯದಲ್ಲಿ ಹಾಗೂ ಅಭಿಮಾನಿ ವೃಂದದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಹೀಗೆ, ‘ನಿಲಯದ ಕಲಾವಿದರು’ ಎಂಬಂಥ ಆಟಗಾರರೆಲ್ಲಾ ಒಗ್ಗೂಡಿಕೊಂಡು ಕಣಕ್ಕಿಳಿದಿತ್ತು ಕರ್ನಾಟಕ ತಂಡ.

ಆದರೆ, ಅಂದುಕೊಂಡಿದ್ದೇ ಬೇರೆ, ಪಂದ್ಯದಲ್ಲಿ ಆಗಿದ್ದೇ ಬೇರೆ. ವೇಗಿಗಳಿಗೆ ಅದ್ಭುತವಾದ ನೆರವು ನೀಡಿದ ಪಿಚ್‌'ನಲ್ಲಿ ಕೆ.ಎಲ್. ರಾಹುಲ್ ಅವರನ್ನು ಹೊರತುಪಡಿಸಿ, ಕರುಣ್ ನಾಯರ್, ಮನೀಶ್ ಪಾಂಡೆ ಮಾತ್ರವಲ್ಲ, ಆರಂಭಿಕ ರವಿಕುಮಾರ್ ಸಮರ್ಥ್, ಕೌನೈನ್ ಅಬ್ಬಾಸ್, ಸುವರ್ಟ್ ಬಿನ್ನಿ, ಸಿ.ಎಂ. ಗೌತಮ್, ಅಭಿಮನ್ಯು ಮಿಥುನ್ ಮೊದಲಾದವರು ವೈಫಲ್ಯ ಅನುಭವಿಸಿದರು. ರಾಹುಲ್ ಅವರು ಮೊದಲ ಇನಿಂಗ್ಸ್‌ನಲ್ಲಿ ವಿಫಲರಾದರೂ, ದ್ವಿತೀಯ ಇನಿಂಗ್ಸ್‌ನಲ್ಲಿ 77 ರನ್ ಗಳಿಸಿದರು. ಆದರೆ, ಅದು ತಮಿಳುನಾಡು ತಂಡವನ್ನು ಮಟ್ಟಹಾಕಲು ಸಾಧ್ಯವಾಗಲಿಲ್ಲ.

ಹಾಗಂತ, ತಮಿಳುನಾಡು ತಂಡ ಅದ್ಭುತವಾಗಿ ಆಡಿತು ಎಂದೇನೂ ಇಲ್ಲ. ಮೊದಲೇ ಹೇಳಿದಂತೆ, ಇದು ಬೌಲಿಂಗ್ ಪಿಚ್ ಆಗಿದ್ದರಿಂದ ಕರ್ನಾಟಕ ವೇಗಿಗಗಳೂ ಇಲ್ಲಿ ಮಿಂಚಿದರು. ತಮಿಳುನಾಡು ತಂಡವು ತನ್ನ ಮೊದಲ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ದಾಖಲಿಸದಂತೆ ತಡೆದರು. ಆದರೆ, ಇದು ಪಂದ್ಯ ಗೆಲ್ಲಲು ನೆರವಾಗಲಿಲ್ಲ.

ಏನಾಗಿದ್ದರೆ ಗೆಲ್ಲಬಹುದಿತ್ತು?:

ತನ್ನ ಪ್ರಥಮ ಇನಿಂಗ್ಸ್ ಕೇವಲ 88 ರನ್‌'ಗಳಿಗೇ ಮುಕ್ತಾಯವಾಗಿದ್ದರಿಂದ, ತಮಿಳುನಾಡು ತಂಡದ ಮೊದಲ ಇನಿಂಗ್ಸ್ ಅನ್ನು 100 ರನ್ ಮೊತ್ತದೊಳಗೆ ನಿಯಂತ್ರಿಸಿದ್ದರೆ ರಾಜ್ಯ ತಂಡಕ್ಕೆ ಹೆಚ್ಚು ಅನುಕೂಲವಾಗುತ್ತಿತ್ತು. ಆನಂತರ, ತನ್ನ ದ್ವಿತೀಯ ಇನಿಂಗ್ಸ್‌ನಲ್ಲಿ ತಾಳ್ಮೆಯ ಆಟವಾಡಿ ಪಂದ್ಯದ 2ನೇ ಹಾಗೂ 3ನೇ ದಿನಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಉತ್ತಮ ಮೊತ್ತ ದಾಖಲಿಸಿ, ತಮಿಳುನಾಡು ತಂಡಕ್ಕೆ 200 ರನ್‌'ಗಳಷ್ಟಾದರೂ ಗುರಿಯನ್ನು ನೀಡಿದ್ದರೆ ಕರ್ನಾಟಕ್ಕೆ ಗೆಲ್ಲುವ ಅವಕಾಶಗಳು ದಟ್ಟವಾಗಿರುತ್ತಿತ್ತು. ಬಹುಶಃ ಕರ್ನಾಟಕ ತಂಡದ ನಾಯಕ ವಿನಯ್ ಕುಮಾರ್ ಲೆಕ್ಕಾಚಾರವೂ ಹೆಚ್ಚೂಕಡಿಮೆ ಇದೇ ಆಗಿತ್ತೇನೋ. ಆದರೆ, ಹಾಗಾಗಲಿಲ್ಲ. ಕರ್ನಾಟಕಕ್ಕೆ ಗೆಲವು ದಕ್ಕಲಿಲ್ಲ ಎನ್ನುವುದೇ ಕಹಿಯಾದ ಸತ್ಯ.