ಗಯಾನ(ಆ.06): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿ ಅಮೆರಿಕಾದಿಂದ ಕೆರಿಬಿಯನ್ ನಾಡಿಗೆ ಶಿಫ್ಟ್ ಆಗಿದೆ. ಆರಂಭಿಕ 2 ಪಂದ್ಯ ಗೆದ್ದು ಸರಣಿ ಗೆದ್ದಿರುವ ಟೀಂ ಇಂಡಿಯಾ ಇದೀಗ 3ನೇ ಹಾಗೂ ಅಂತಿಮ ಪಂದ್ಯ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡೋ ವಿಶ್ವಾಸದಲ್ಲಿದೆ. ಗಯಾನದಲ್ಲಿ ನಡೆಯುತ್ತಿರುವ ಅಂತಿಮ ಚುಟುಕು ಹೋರಾಟದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ 3 ಬದಲಾವಣೆ ಮಾಡಲಾಗಿದೆ. 

 

ರೋಹಿತ್ ಶರ್ಮಾ ಬದಲು ಕೆಎಲ್ ರಾಹುಲ್ ಸ್ಥಾನ ಪಡೆದರೆ, ರವೀಂದ್ರ ಜಡೇಜಾ ಬದಲು ರಾಹುಲ್ ಚಹಾರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇನ್ನು ಖಲೀಲ್ ಅಹಮ್ಮದ್ ಬದಲು ದೀಪಕ್ ಚಹಾರ್ ತಂಡ ಸೇರಿಕೊಂಡಿದ್ದಾರೆ. ಈ ಮೂಲಕ ಪಾಂಡ್ಯ ಸಹೋದರರ ಬಳಿಕ ಟೀಂ ಇಂಡಿಯಾಗೆ ಇದೀಗ ಚಹಾರ್ ಬ್ರದರ್ಸ್ ಎಂಟ್ರಿ ಕೊಟ್ಟಿದ್ದಾರೆ. 

ಟಾಸ್‌ಗೂ ಮೊದಲು ಮಳೆ ಅಡ್ಡಿಯಾಗಿತ್ತು. ತುಂತುರ ಮಳೆ ಪಂದ್ಯದ ಫಲಿತಾಂಶ ಬದಲಿಸುವ ಸಾಧ್ಯತೆ ಹೆಚ್ಚಿದೆ. ಫ್ಲೋರಿಡಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್ ಗೆಲುವು ಸಾಧಿಸಿತ್ತು. ಇನ್ನು 2ನೇ ಪಂದ್ಯದಲ್ಲಿ ಡಕ್ವರ್ತ್ ನಿಯಮದನ್ವಯ 22 ರನ್ ಗೆಲುವು ಸಾಧಿಸಿತ್ತು. ಈ ಮೂಲಕ ಸರಣಿ ಗೆದ್ದುಕೊಂಡಿತು. ಇಂದಿನ ಪಂದ್ಯ ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವುದರಿಂದ ತವರಿನ ತಂಡಕ್ಕೆ ಹೆಚ್ಚಿನ ಲಾಭವಿದೆ. ಆದರೆ ಗೆಲುವಿನ ಲಯದಲ್ಲಿರುವ ಕೊಹ್ಲಿ ಬಾಯ್ಸ, ಭರ್ಜರಿ ಗೆಲುವನ್ನು ಎದುರುನೋಡುತ್ತಿದೆ.