ಇಂದೋರ್‌[ಮಾ.13]: ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯ ಫೈನಲ್‌ಗೆ ಕರ್ನಾಟಕ ಲಗ್ಗೆಯಿಟ್ಟಿದೆ. ಮಂಗಳವಾರ ನಡೆದ ಸೂಪರ್‌ ಲೀಗ್‌ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ, ವಿದರ್ಭ ವಿರುದ್ಧ 6 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿ ಚೊಚ್ಚಲ ಬಾರಿಗೆ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆಯಿತು. 

ಗುಂಪು ಹಂತದಲ್ಲಿ ಸತತ 7 ಪಂದ್ಯಗಳನ್ನು ಗೆದ್ದಿದ್ದ ರಾಜ್ಯ ತಂಡ, ಸೂಪರ್‌ ಲೀಗ್‌ನಲ್ಲಿ ಆಡಿದ ನಾಲ್ಕೂ ಪಂದ್ಯಗಳನ್ನು ಜಯಿಸಿ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು. ಮತ್ತೊಂದೆಡೆ ‘ಎ’ ಗುಂಪಿನ ಅಂತಿಮ ಪಂದ್ಯದಲ್ಲಿ ರೈಲ್ವೇಸ್‌ ವಿರುದ್ಧ 21 ರನ್‌ ಗೆಲುವು ಸಾಧಿಸಿದ ಮಹಾರಾಷ್ಟ್ರ, 4 ಪಂದ್ಯಗಳಿಂದ 16 ಅಂಕ ಗಳಿಸಿ ಫೈನಲ್‌ಗೆ ಪ್ರವೇಶ ಪಡೆಯಿತು.

ನಿರ್ಣಾಯಕ ಪಂದ್ಯದಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಕರ್ನಾಟಕ, ವಿದರ್ಭವನ್ನು 20 ಓವರ್‌ಗಳಲ್ಲಿ 7 ವಿಕೆಟ್‌ಗೆ 138 ರನ್‌ಗಳಿಗೆ ನಿಯಂತ್ರಿಸಿತು. ಸುಲಭ ಗುರಿ ಪಡೆದ ರಾಜ್ಯ ತಂಡ, ಬಿ.ಆರ್‌.ಶರತ್‌ (05) ವಿಕೆಟ್‌ ಅನ್ನು ಬೇಗನೆ ಕಳೆದುಕೊಂಡಿತು. ಮಯಾಂಕ್‌ ಅಗರ್‌ವಾಲ್‌ (13) ಸಹ ದೊಡ್ಡ ಇನ್ನಿಂಗ್ಸ್‌ ಆಡಲಿಲ್ಲ. 39 ರನ್‌ಗೆ 2 ವಿಕೆಟ್‌ ಕಳೆದುಕೊಂಡ ತಂಡಕ್ಕೆ, ರೋಹನ್‌ ಕದಂ ಹಾಗೂ ಕರುಣ್‌ ನಾಯರ್‌ ಆಸರೆಯಾದರು. 37 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ ರೋಹನ್‌ 39 ರನ್‌ ಗಳಿಸಿ ಔಟಾದರು. 4ನೇ ವಿಕೆಟ್‌ಗೆ ಕ್ರೀಸ್‌ ಹಂಚಿಕೊಂಡ ಕರುಣ್‌ ಹಾಗೂ ನಾಯಕ ಮನೀಶ್‌ ಪಾಂಡೆ ತಂಡದ ಮೊತ್ತವನ್ನು 100ರ ಗಡಿ ದಾಟಿಸಿ, ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದರು. ಎಚ್ಚರಿಕೆಯ ಆಟವಾಡಿದ ಕರುಣ್‌ 23 ಎಸೆತಗಳಲ್ಲಿ 24 ರನ್‌ ಗಳಿಸಿ ನಿರ್ಗಮಿಸಿದರು.

ಕೊನೆ 3 ಓವರಲ್ಲಿ ಕರ್ನಾಟಕದ ಗೆಲುವಿಗೆ 30 ರನ್‌ ಬೇಕಿತ್ತು. ಮನೀಶ್‌ ಪಾಂಡೆ ಬಿರುಸಿನ ಬ್ಯಾಟಿಂಗ್‌ ನಡೆಸಿ ಇನ್ನೂ 4 ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. 35 ಎಸೆತಗಳನ್ನು ಎದುರಿಸಿದ ಪಾಂಡೆ 3 ಬೌಂಡರಿ, 2 ಸಿಕ್ಸರ್‌ನೊಂದಿಗೆ 49 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಉಮೇಶ್‌ ಆರಂಭಿಕ!: ಮೊದಲು ಬ್ಯಾಟಿಂಗ್‌ ಇಳಿಸಲ್ಪಷ್ಟವಿದರ್ಭ ಪರ ಆರಂಭಿಕನಾಗಿ ಉಮೇಶ್‌ ಯಾದವ್‌ ಕ್ರೀಸ್‌ಗಿಳಿದು ಅಚ್ಚರಿ ಮೂಡಿಸಿದರು. ಆದರೆ ಕೇವಲ 4 ರನ್‌ಗೆ ಅವರ ಆಟ ಅಂತ್ಯಗೊಂಡಿತು. 46 ರನ್‌ ಗಳಿಸುವಷ್ಟರಲ್ಲಿ ನಾಯಕ ಗಣೇಶ್‌ ಸತೀಶ್‌ (01) ಸೇರಿ ಐವರು ಬ್ಯಾಟ್ಸ್‌ಮನ್‌ಗಳ ವಿಕೆಟನ್ನು ವಿದರ್ಭ ಕಳೆದುಕೊಂಡಿತು. 6ನೇ ವಿಕೆಟ್‌ಗೆ ಜತೆಯಾದ ಅಪೂರ್ವ್ ವಾಂಖೇಡೆ (56) ಹಾಗೂ ಅಕ್ಷಯ್‌ ಕರ್ನೇವಾರ್‌ (33) ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ಕರ್ನಾಟಕದ ಪರ ವಿನಯ್‌ ಕುಮಾರ್‌ 2 ವಿಕೆಟ್‌ ಕಬಳಿಸಿದರೆ, ವಿ.ಕೌಶಿಕ್‌ ಹಾಗೂ ಜೆ.ಸುಚಿತ್‌ ತಲಾ 1 ವಿಕೆಟ್‌ ಪಡೆದರು. ಮೂವರು ಬ್ಯಾಟ್ಸ್‌ಮನ್‌ಗಳನ್ನು ಕರ್ನಾಟಕ ಕ್ಷೇತ್ರರಕ್ಷಕರು ರನೌಟ್‌ ಬಲೆಗೆ ಬೀಳಿಸಿದರು.

ಸ್ಕೋರ್‌: ವಿದರ್ಭ 20 ಓವರ್‌ಗಳಲ್ಲಿ 138/7 (ಅಪೂರ್ವ್ 56*, ಅಕ್ಷಯ್‌ 33, ಅಥರ್ವ 28, ವಿನಯ್‌ 2-27)

ಕರ್ನಾಟಕ 19.2 ಓವರ್‌ಗಳಲ್ಲಿ 140/4 (ಮನೀಶ್‌ 49*, ರೋಹನ್‌ 39, ಕರುಣ್‌ 24, ಯಶ್‌ 1-18)