ಇಂದು 14ನೇ ಆವೃತ್ತಿಯ ಸ್ಯಾಫ್‌ ಕಪ್‌ ಫೈನಲ್‌ ಪಂದ್ಯಭಾರತಕ್ಕೆ 9ನೇ ಪ್ರಶಸ್ತಿ ಗೆಲ್ಲುವ ಗುರಿಕುವೈತ್‌ಗೆ ಚೊಚ್ಚಲ ಪ್ರಯತ್ನದಲ್ಲೇ ಚಾಂಪಿಯನ್ ಆಗುವ ಕನಸು

ಬೆಂಗಳೂರು(ಜು.04): 14ನೇ ಆವೃತ್ತಿಯ ಸ್ಯಾಫ್‌ ಕಪ್‌ ಫುಟ್ಬಾಲ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಣಾಹಣಿಕೆ ವೇದಿಕೆ ಸಜ್ಜುಗೊಂಡಿದ್ದು, ಪ್ರಶಸ್ತಿಗಾಗಿ ಭಾರತ ಹಾಗೂ ಕುವೈತ್‌ ತಂಡಗಳು ಸೆಣಸಾಡಲಿವೆ. ನಗರದ ಕಂಠೀರವ ಕ್ರೀಡಾಂಗಣದಲ್ಲೇ ನಡೆಯಲಿರುವ ಫೈನಲ್‌ನಲ್ಲಿ ಗೆಲ್ಲುವ ಮೂಲಕ ಭಾರತ 9ನೇ ಪ್ರಶಸ್ತಿ ಪಡೆಯುವ ನಿರೀಕ್ಷೆಯಲ್ಲಿದ್ದರೆ, ಚೊಚ್ಚಲ ಪ್ರಯತ್ನದಲ್ಲೇ ಚಾಂಪಿಯನ್‌ ಎನಿಸಿಕೊಳ್ಳಲು ಭಾರತ ಕಾತರಿಸುತ್ತಿದೆ.

ಉಭಯ ತಂಡಗಳು ಈಗಾಗಲೇ ಗುಂಪು ಹಂತದಲ್ಲಿ ಮುಖಾಮುಖಿಯಾಗಿದ್ದು, ಪಂದ್ಯ 1-1 ಗೋಲಿನಿಂದ ಡ್ರಾಗೊಂಡಿತ್ತು. ಈ ಪಂದ್ಯ ಎರಡೂ ತಂಡಗಳ ಆಟಗಾರರು, ಭಾರತದ ಕೋಚ್‌ ಇಗೋರ್‌ ಸ್ಟಿಮಾಕ್‌, ಸಹಾಯಕ ಸಿಬ್ಬಂದಿ, ರೆಫ್ರಿಗಳ ನಡುವೇ ಭಾರೀ ವಾಗ್ವಾದಕ್ಕೆ ಕಾರಣವಾಗಿತ್ತು. ಹೀಗಾಗಿ ಉಭಯ ತಂಡಗಳ ನಡುವಿನ ಫೈನಲ್‌ ಫೈಟ್‌ ಕುತೂಹಲ ಸೃಷ್ಟಿಸಿದೆ. ಇನ್ನು, ಭಾರತ ಸೆಮೀಸ್‌ನಲ್ಲಿ ಲೆಬನಾನ್‌ ವಿರುದ್ಧ ಶೂಟೌಟ್‌ನಲ್ಲಿ ರೋಚಕವಾಗಿ ಗೆದ್ದಿದ್ದರೆ, ಕುವೈತ್‌ ತಂಡ ಬಾಂಗ್ಲಾದೇಶವನ್ನು ಹೆಚ್ಚುವರಿ ಸಮಯದಲ್ಲಿ ಗೋಲು ಬಾರಿಸಿ, 1-0ಯಿಂದ ಸೋಲಿಸಿ ಪ್ರಶಸ್ತಿ ಸುತ್ತಿಗೇರಿದೆ.

ಚೆಟ್ರಿಯೇ ಆಸರೆ: ಭಾರತ ಟೂರ್ನಿಯಲ್ಲಿ ನಾಯಕ ಸುನಿಲ್‌ ಚೆಟ್ರಿ ಮೇಲೆಯೇ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಪಾಕಿಸ್ತಾನ ವಿರುದ್ಧ ಹ್ಯಾಟ್ರಿಕ್‌ ಸೇರಿದಂತೆ 4 ಪಂದ್ಯಗಳಲ್ಲಿ 5 ಗೋಲು ಬಾರಿಸಿದ್ದು, ಟೂರ್ನಿಯ ಅಗ್ರ ಸ್ಕೋರರ್‌ ಎನಿಸಿಕೊಂಡಿದ್ದಾರೆ. ಉಳಿದಂತೆ ಭಾರತದ ಪರ ಮಹೇಶ್‌ ಸಿಂಗ್‌, ಉದಾಂತ ಸಿಂಗ್‌ ಮಾತ್ರ ತಲಾ 1 ಗೋಲು ಹೊಡೆದಿದ್ದಾರೆ. ಭಾರತಕ್ಕೆ ಹೋಲಿಸಿದರೆ ಕುವೈತ್‌ ಸಂಘಟಿತ ಪ್ರದರ್ಶನದ ಮೇಲೆ ಹೆಚ್ಚು ಅವಲಂಬಿತಗೊಂಡಿದೆ. ಈವರೆಗೆ 7 ಮಂದಿ ತಲಾ ಕನಿಷ್ಠ 1 ಗೋಲು ದಾಖಲಿಸಿದ್ದಾರೆ.

Wimbledon 2023 ಗೆಲುವಿನಾರಂಭ ಪಡೆದ ಜೋಕೋವಿಚ್ ಇಗಾ ಸ್ವಿಯಾಟೆಕ್

ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರಪ್ರಸಾರ: ಫ್ಯಾನ್‌ಕೋಡ್‌, ಡಿಡಿ ಸ್ಪೋರ್ಟ್ಸ್‌

4 ಬಾರಿ ಫೈನಲ್‌ ಸೋತಿದೆ ಭಾರತ

ಭಾರತ ಈವರೆಗೆ 12 ಬಾರಿ ಫೈನಲ್‌ ಆಡಿದ್ದು, 8 ಬಾರಿ ಪ್ರಶಸ್ತಿ ಗೆದ್ದಿದೆ. 4 ಬಾರಿ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ. ಉಳಿದಂತೆ ಮಾಲ್ಡೀವ್ಸ್‌ 2, ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ತಲಾ 1 ಬಾರಿ ಚಾಂಪಿಯನ್‌ ಎನಿಸಿಕೊಂಡಿದೆ. ಕುವೈತ್‌ ಮೊದಲ ಬಾರಿ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದ್ದು, ಚೊಚ್ಚಲ ಪ್ರಶಸ್ತಿಗೆ ಕಾತರಿಸುತ್ತಿದೆ.

ಆತಿಥ್ಯ ವಹಿಸಿದ ಎಲ್ಲಾ ಬಾರಿ ಪ್ರಶಸ್ತಿ!

ಭಾರತ ಈ ಮೊದಲು 3 ಬಾರಿ ಸ್ಯಾಫ್‌ ಕಪ್‌ಗೆ ಆತಿಥ್ಯ ವಹಿಸಿದ್ದು, 3 ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. 1999, 2011 ಹಾಗೂ 2019ರಲ್ಲಿ ತವರಿನಲ್ಲೇ ಟೂರ್ನಿ ನಡೆದಾಗ ಭಾರತ ಚಾಂಪಿಯನ್‌ ಆಗಿತ್ತು. ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದೆ.

41 ಲಕ್ಷ ರು. ಬಹುಮಾನ

ಸ್ಯಾಫ್‌ ಕಪ್‌ ಗೆಲ್ಲುವ ತಂಡಕ್ಕೆ 50,000 ಅಮೆರಿಕನ್‌ ಡಾಲರ್‌(ಅಂದಾಜು 40.95 ಲಕ್ಷ ರು.) ಬಹುಮಾನ ಮೊತ್ತ ಸಿಗಲಿದೆ. ರನ್ನರ್‌-ಅಪ್‌ ತಂಡಕ್ಕೆ 25000 ಅಮೆರಿಕನ್‌ ಡಾಲರ್‌ (ಅಂದಾಜು 20.47 ಲಕ್ಷ ರು.) ದೊರೆಯಲಿದೆ.

ಇನ್ನೂ ಒಂದು ವರ್ಷ ಬಿಎಫ್‌ಸಿಯಲ್ಲೇ ಸುನಿಲ್ ಚೆಟ್ರಿ

ಬೆಂಗಳೂರು: ಭಾರತದ ದಿಗ್ಗಜ ಫುಟ್ಬಾಲಿಗ ಸುನಿಲ್‌ ಚೆಟ್ರಿ ಬೆಂಗಳೂರು ಎಫ್‌ಸಿ ತಂಡದಲ್ಲೇ ಮತ್ತೊಂದು ವರ್ಷ ಮುಂದುವರಿಯಲಿದ್ದಾರೆ. 2013ರಿಂದಲೂ ಬಿಎಫ್‌ಸಿ ತಂಡದಲ್ಲಿರುವ ಚೆಟ್ರಿ ಅವರ ಗುತ್ತಿಗೆಯನ್ನು ಫ್ರಾಂಚೈಸಿಯು ನವೀಕರಿಸಿದೆ. 39 ವರ್ಷದ ಚೆಟ್ರಿ ಈವರೆಗೆ ಬಿಎಫ್‌ಸಿ ಪರ 250 ಪಂದ್ಯಗಳನ್ನಾಡಿದ್ದು, 116 ಗೋಲು ಬಾರಿಸಿದ್ದಾರೆ. ಬಿಎಫ್‌ಸಿ ಪರ ಚೆಟ್ರಿ 2014, 2016ರಲ್ಲಿ ಐ-ಲೀಗ್‌, 2015, 2017ರಲ್ಲಿ ಫೆಡರೇಶನ್‌ ಕಪ್‌, 2018ರಲ್ಲಿ ಸೂಪರ್‌ ಕಪ್‌, 2019ರಲ್ಲಿ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಹಾಗೂ ಕಳೆದ ವರ್ಷ ಪ್ರತಿಷ್ಠಿತ ದುರಾಂಡ್‌ ಕಪ್‌ ಗೆದ್ದಿದ್ದಾರೆ.