ಸ್ಟೋಕ್ಸ್ ಮೇ 15ಕ್ಕೆ ಇಂಗ್ಲೆಂಡ್ ಹಿಂದಿರುಗಬೇಕಾಗಿದ್ದು, ಚಾಂಪಿಯನ್ಸ್ ಟ್ರೋಫಿಗಾಗಿ ನಡೆಯಲಿರುವ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕಿದೆ.

ಮೊಹಾಲಿ(ಏ.29): ಸೋಮವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪುಣೆ ಸೂಪರ್‌ಜೈಂಟ್ ರೋಚಕ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇಂಗ್ಲೆಂಡ್ ಆಲ್ರೌಂಡರ್ ಬೆನ್‌'ಸ್ಟೋಕ್ಸ್ ಭುಜದ ಗಾಯಕ್ಕೆ ತುತ್ತಾಗಿದ್ದು, ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯರಾಗುವ ಆತಂಕ ಎದುರಾಗಿದೆ.

ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಸ್ಟೋಕ್ಸ್ ಭುಜದ ನೋವಿಗೆ ಒಳಗಾಗಿದ್ದರು. ಆದಾಗ್ಯೂ 4 ಓವರ್‌'ಗಳನ್ನು ಪೂರೈಸಿದ ಅವರು 21 ರನ್ ನೀಡಿ ಮುಂಬೈನ ಇಬ್ಬರು ಪ್ರಮುಖ ಬ್ಯಾಟ್ಸ್‌ಮನ್‌'ಗಳನ್ನು ಕೊನೆಯ ಓವರ್‌'ನಲ್ಲಿ ಪೆವಿಲಿಯನ್‌'ಗಟ್ಟಿದ್ದರು. ಆನಂತರ ಸ್ಟೋಕ್ಸ್ ಅವರನ್ನು ಕೆಕೆಆರ್ ಹಾಗೂ ಆರ್‌ಸಿಬಿ ವಿರುದ್ಧದ ಪಂದ್ಯಗಳಿಂದ ಹೊರಗಿರಿಸಲಾಗಿತ್ತು. ಹೀಗೆ ಭುಜದ ಸಮಸ್ಯೆಗೆ ಒಳಗಾಗಿರುವ ಕಾರಣ ಮುಂದಿನ ಪಂದ್ಯಗಳಲ್ಲಿ ಕೇವಲ ಬ್ಯಾಂಟಿಂಗ್ ಮಾಡುವಂತೆ ಇಂಗ್ಲೆಂಡ್ ಕ್ರಿಕೆಟ್ ತಂಡದ ವೈದ್ಯರು ಸೂಚಿಸಿದ್ದು, ಬೌಲಿಂಗ್ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

ಸ್ಟೋಕ್ಸ್ ಮೇ 15ಕ್ಕೆ ಇಂಗ್ಲೆಂಡ್ ಹಿಂದಿರುಗಬೇಕಾಗಿದ್ದು, ಚಾಂಪಿಯನ್ಸ್ ಟ್ರೋಫಿಗಾಗಿ ನಡೆಯಲಿರುವ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕಿದೆ. ಇಲ್ಲಿ ಉತ್ತೀರ್ಣರಾದರಷ್ಟೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಟೋಕ್ಸ್ ಕಣಕ್ಕಿಳಿಯಲಿದ್ದಾರೆ.