ರಾಹುಲ್ ಔಟ್ ಆಗುತ್ತಿದ್ದಂತೆ ನಾಟಕೀಯ ಕುಸಿತ ಕಂಡ ಟೀಂ ಇಂಡಿಯಾ ಕೇವಲ 11 ರನ್ ಅಂತರದಲ್ಲಿ 7 ವಿಕೆಟ್ ಕಳೆದುಕೊಂಡು ಸರ್ವಪತನ ಕಂಡಿತು. ವಿಜಯ್, ರಾಹುಲ್ ಮತ್ತು ರಹಾನೆ ಹೊರತು ಪಡಿಸಿ ಮತ್ಯಾವ ಆಟಗಾರರು ಎರಡಂಕಿ ಮೊತ್ತ ಮುಟ್ಟಲು ಸಾಧ್ಯವಾಗಲಿಲ್ಲ.
ಪುಣೆ(ಫೆ.24): ಮಧ್ಯಮ ಹಾಗೂ ಕೆಳ ಕ್ರಮಾಂಕದ ಬ್ಯಾಟ್ಸ್'ಮನ್'ಗಳ ದಿಢೀರ್ ಕುಸಿತದಿಂದಾಗಿ ಟೀಂ ಇಂಡಿಯಾ ಕೇವಲ 105 ರನ್'ಗಳಿಗೆ ಸರ್ವಪತನ ಕಂಡಿದೆ.
ಇನ್ನು 155 ರನ್ ಮುನ್ನೆಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ಮೊದಲ 10 ಓವರ್'ಗಳಾಗುವಷ್ಟರಲ್ಲಿ ಆರಂಬಿಕ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಎರಡನೇ ದಿನದಾಟದ ಮೊದಲ ಓವರ್'ನಲ್ಲೇ ಮಿಚೆಲ್ ಸ್ಟಾರ್ಕ್ ಅವರನ್ನು ಅಶ್ವಿನ್ ಔಟ್ ಮಾಡುವ ಮೂಲಕ ಆಸ್ಟ್ರೇಲಿಯಾವನ್ನು 260 ರನ್'ಗಳಿಗೆ ಮೊದಲ ಇನಿಂಗ್ಸ್'ಗೆ ತೆರೆ ಎಳೆದರು. ನಂತರ ಭಾರತದ ಪರ ಇನಿಂಗ್ಸ್ ಆರಂಭಿಸಿದ ರಾಹುಲ್-ವಿಜಯ್ ಜೋಡಿ ಅಷ್ಟೇನೂ ಉತ್ತಮ ಆರಂಭ ಒದಗಿಸಲಿಲ್ಲ. ತಂಡದ ಮೊತ್ತ 26 ರನ್'ಗಳಾದಾಗ ವಿಜಯ್(10) ಪೆವಿಲಿಯನ್ ಸೇರಿದರು. ಇದಾದ ಕೆಲಹೊತ್ತಿನಲ್ಲೇ ಟೆಸ್ಟ್ ಸ್ಟೆಷಲಿಷ್ಟ್ ಚೇತೇಶ್ವರ ಪೂಜಾರ ಆಟ ಕೇವಲ 6 ರನ್'ಗಳಿಗೆ ಸೀಮಿತವಾಯಿತು. ಇನ್ನು ನಾಯಕ ವಿರಾಟ್ ಕೊಹ್ಲಿ ಶೂನ್ಯಕ್ಕೆ ಮಿಚೆಲ್ ಸ್ಟಾರ್ಕ್'ಗೆ ವಿಕೆಟ್ ಒಪ್ಪಿಸಿದಾಗ ಕ್ರೀಡಾಂಗಣ ಒಂದು ಕ್ಷಣ ಸ್ತಬ್ಧವಾಯಿತು. ಒಂದು ಕಡೆ ನಿರಂತರವಾಗಿ ವಿಕೆಟ್ ಉರುಳುತ್ತಿದ್ದರೂ ಆಸೀಸ್ ದಾಳಿಗೆ ದಿಟ್ಟ ಉತ್ತರ ನೀಡಿದ ಕನ್ನಡಿಗ ಕೆ.ಎಲ್ ರಾಹುಲ್ ಅರ್ಧಶತಕ ಪೂರೈಸಿದರು. ರಾಹುಲ್ 64 ರನ್'ಗಳಿಸಿದ್ದಾಗ ಓಕೆಫೆ ಎಸೆತದಲ್ಲಿ ಕೆಟ್ಟ ಹೊಡೆತಕ್ಕೆ ಕೈಹಾಕಿ ವಾರ್ನರ್'ಗೆ ಕ್ಯಾಚ್ ನೀಡಿ ಹೊರನಡೆದರು. ರಾಹುಲ್ ಸೊಗಸಾದ ಇನಿಂಗ್ಸ್'ನಲ್ಲಿ 10 ಬೌಂಡರಿ ಹಾಗೂ ಒಂದು ಭರ್ಜರಿ ಸಿಕ್ಸರ್ ಕೂಡಾ ಸೇರಿತ್ತು.
ದಿಢೀರ್ ಕುಸಿದ ಕೆಳಕ್ರಮಾಂಕ
ರಾಹುಲ್ ವಿಕೆಟ್ ಒಪ್ಪಿಸುವ ಮುನ್ನ ತಂಡದ ಮೊತ್ತ 94/3 ಆಗಿತ್ತು. ರಾಹುಲ್ ಔಟ್ ಆಗುತ್ತಿದ್ದಂತೆ ನಾಟಕೀಯ ಕುಸಿತ ಕಂಡ ಟೀಂ ಇಂಡಿಯಾ ಕೇವಲ 11 ರನ್ ಅಂತರದಲ್ಲಿ 7 ವಿಕೆಟ್ ಕಳೆದುಕೊಳ್ಳುವ ಮೂಲಕ ಸರ್ವಪತನ ಕಂಡಿತು. ವಿಜಯ್, ರಾಹುಲ್ ಮತ್ತು ರಹಾನೆ ಹೊರತು ಪಡಿಸಿ ಮತ್ಯಾವ ಆಟಗಾರರು ಕೂಡ ಎರಡಂಕಿ ಮೊತ್ತ ಮುಟ್ಟಲು ಸಾಧ್ಯವಾಗಲಿಲ್ಲ.
ಆಸೀಸ್ ಪರ ಚುರುಕಿನ ದಾಳಿ ನಡೆಸಿದ ಸ್ಪಿನ್ನರ್ ಓಕೆಫೆ ಟೀಂ ಇಂಡಿಯಾದ ಪ್ರಮುಖ ಆರು ವಿಕೆಟ್ ಪಡೆಯುವಲ್ಲಿ ಸಫಲರಾದರು. ಓಕೆಫೆ ಕೇವಲ ಮೂರು ಓವರ್'ನಲ್ಲಿ ಆರು ವಿಕೆಟ್ ಪಡೆದು ಟೀಂ ಇಂಡಿಯಾ ಮೊದಲ ಇನಿಂಗ್ಸ್'ಗೆ ಅಂತ್ಯ ಹಾಡಿದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ : 260/10
ಭಾರತ ಮೊದಲ ಇನಿಂಗ್ಸ್ : 105/10
ಕೆ.ಎಲ್ ರಾಹುಲ್ 67
ಅಜಿಂಕ್ಯಾ ರಹಾನೆ 13
ಸ್ಟಿಪನ್ ಓಕೆಫೆ: 35/6
