ಕೊಲಂಬೋ(ಆ.05): ಆರ್. ಅಶ್ವಿನ್ ಹಾಗೂ ಮೊಹಮದ್ ಶಮಿ ಪ್ರಭಾವಿ ಬೌಲಿಂಗ್ ನೆರವಿನಿಂದ ಟೀಂ ಇಂಡಿಯಾ ಶ್ರೀಲಂಕಾವನ್ನು ಮೊದಲ ಇನಿಂಗ್ಸ್'ನಲ್ಲಿ 183 ರನ್'ಗಳಿಗೆ ಆಲೌಟ್ ಮಾಡುವ ಮೂಲಕ ಫಾಲೋ ಆನ್ ಬಲೆಗೆ ಸಿಲುಕಿಸಿದೆ. ಆದರೆ ದ್ವಿತಿಯಾ ಇನಿಂಗ್ಸ್'ನಲ್ಲಿ ಲಂಕಾ ಪಡೆ ತಿರುಗೇಟು ನೀಡುವ ಮುನ್ಸೂಚನೆ ನೀಡಿದೆ.

ಎರಡನೇ ಟೆಸ್ಟ್'ನ ಮೂರನೇ ದಿನ 50 ರನ್'ಗಳಿಂದ ಮೊದಲ ಇನಿಂಗ್ಸ್ ಆರಂಭಿಸಿದ ಲಂಕಾ ತಂಡಕ್ಕೆ 10 ರನ್ ಸೇರಿಸುವಷ್ಟರಲ್ಲಿ ಜಡೇಜಾ ಆಘಾತ ನೀಡಿದರು. ಇದರ ಬೆನ್ನಲ್ಲೇ ಉಮೇಶ್ ಯಾದವ್, ಕುಸಾಲ್ ಮೆಂಡಿಸ್'ಗೆ ಪೆವಿಲಿಯನ್ ಹಾದಿ ತೋರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಆ್ಯಂಜಲೋ ಮ್ಯಾಥ್ಯೂಸ್ ಹಾಗೂ ವಿಕೆಟ್'ಕೀಪರ್ ಬ್ಯಾಟ್ಸ್'ಮನ್ ಡಿಕ್'ವೆಲ್ಲಾ ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಲು ಪ್ರಯತ್ನಿಸಿದರು. ಈ ವೇಳೆ ಮತ್ತೆ ದಾಳಿಗಿಳಿದ ಅಶ್ವಿನ್, ಲಂಕಾ ಮಾಜಿ ನಾಯಕ ಮ್ಯಾಥ್ಯೂಸ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಒಂದುಕಡೆ ವಿಕೆಟ್ ಬೀಳುತ್ತಿದ್ದರೂ ದಿಟ್ಟವಾಗಿ ಬ್ಯಾಟಿಂಗ್ ನಡೆಸಿದ ಡಿಕ್'ವೆಲ್ಲಾ ಅರ್ಧಶತಕ ಬಾರಿಸಿ ಶಮಿಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಅಶ್ವಿನ್ ಮಾರಕ ದಾಳಿಗೆ ತತ್ತರಿಸಿದ ಶ್ರೀಲಂಕಾ 183ರನ್'ಗಳಿಗೆ ಸರ್ವಪತನ ಕಾಣುವ ಮೂಲಕ ಫಾಲೋ ಆನ್'ಗೆ ಒಳಗಾಯಿತು.

439ರನ್'ಗಳ ಬೃಹತ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ಆರಂಭದಲ್ಲೇ ಮತ್ತೆ ಆಘಾತ ಎದುರಿಸಿತು. ಕೇವಲ 2 ರನ್ ಬಾರಿಸಿ ಉಫುಲ್ ತರಂಗಾ ವೇಗಿ ಉಮೇಶ್ ಯಾದವ್'ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಒಂದಾದ ಆರಂಭಿಕ ಬ್ಯಾಟ್ಸ್'ಮನ್ ದಿಮುತ್ ಕರುಣರತ್ನೆ ಹಾಗೂ ಕುಶಾಲ್ ಮೆಂಡೀಸ್ ಟೀಂ ಇಂಡಿಯಾ ಬೌಲರ್'ಗಳನ್ನು ದಿಟ್ಟವಾಗಿ ಎದುರಿಸಿದರು. ಎರಡನೇ ವಿಕೆಟ್'ಗೆ ಈ ಜೋಡಿ 191ರನ್ ಕಲೆಹಾಕುವ ಮೂಲಕ ಕೊಹ್ಲಿ ಪಡೆಗೆ ತಕ್ಕ ತಿರುಗೇಟು ನೀಡುವಲ್ಲಿ ಯಶಸ್ವಿಯಾಯಿತು. ಮೂರನೇ ದಿನದಾಟ ಮುಕ್ತಾಯಕ್ಕೇ ಕೆಲವೇ ಓವರ್'ಗಳು ಬಾಕಿಯಿದ್ದಾಗ ಶತಕ ಬಾರಿಸಿ ಆಡುತ್ತಿದ್ದ ಕುಸಾಲ್ ಮೆಂಡೀಸ್, ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ದಿಮುತ್ ಕರುಣರತ್ನೆ 92ರನ್ ಬಾರಿಸಿ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೂರನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ ತಂಡವು 2 ವಿಕೆಟ್ ನಷ್ಟಕ್ಕೆ 209ರನ್ ಕಲೆಹಾಕಿದ್ದು, ಇನ್ನೂ 230ರನ್'ಗಳ ಹಿನ್ನಡೆ ಅನುಭವಿಸಿದೆ.

ಸಂಕ್ಷಿಪ್ತ ಸ್ಕೋರ್:

ಭಾರತ ಮೊದಲ ಇನಿಂಗ್ಸ್ :622/9

ಚೇತೇಶ್ವರ ಪೂಜಾರ: 133

ಅಜಿಂಕ್ಯ ರಹಾನೆ : 132

ರಂಗನಾ ಹೆರಾತ್ :154/4

ಶ್ರೀಲಂಕಾ ಮೊದಲ ಇನಿಂಗ್ಸ್ : 183/10

ನಿರ್ಶೋನ್ ಡಿಕ್'ವೆಲ್ಲಾ : 51

ಆ್ಯಂಜಲೋ ಮ್ಯಾಥ್ಯೂಸ್ : 26

ಅಶ್ವಿನ್ :69/2

ಶ್ರೀಲಂಕಾ ದ್ವಿತೀಯ ಇನಿಂಗ್ಸ್ : 209/2

ಕುಸಾಲ್ ಮೆಂಡೀಸ್ : 110

ದಿಮುತ್ ಕರುಣರತ್ನೆ :92*

ಹಾರ್ದಿಕ್ ಪಾಂಡ್ಯ : 12/1