ಕೊಲಂಬೊ(ಅ.21): ಅ.29ರಂದು ಲಾಹೋರ್‌'ನಲ್ಲಿ ನಡೆಯಲಿರುವ ಮೂರನೇ ಟಿ20 ಪಂದ್ಯವನ್ನು ಆಡಲು ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸುವ ಆಟಗಾರರನ್ನು, ಟಿ20 ಸರಣಿಯಿಂದಲೇ ಕೈಬಿಡುವಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ತನ್ನ ಆಯ್ಕೆ ಸಮಿತಿಗೆ ಸೂಚಿಸಿದೆ.

ಮೂರು ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳು ಅಬುಧಾಬಿಯಲ್ಲಿ ನಡೆಯಲಿದೆ. ಲಂಕಾ ಕ್ರಿಕೆಟ್ ಮಂಡಳಿ ಹೆಚ್ಚು ಆಟಗಾರರನ್ನು ಪಾಕಿಸ್ತಾನಕ್ಕೆ ತೆರಳುವಂತೆ ಮನವೊಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

‘ಮೊದಲೆರಡು ಪಂದ್ಯಗಳಿಗೆ ಒಂದು, ಕೊನೆ ಪಂದ್ಯಕ್ಕೆ ಮತ್ತೊಂದು ತಂಡವನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಆಟಗಾರರಿಗೆ ಭದ್ರತೆ ನೀಡುವುದಾಗಿ ಪಾಕಿಸ್ತಾನ ಭರವಸೆ ನೀಡಿದೆ’ ಎಂದು ಲಂಕಾದ ಆಯ್ಕೆಗಾರ ಗ್ರೇಮ್ ಲ್ಯಾಬ್ರೊಯ್ ಹೇಳಿದ್ದಾರೆ.

ಈ ಮೊದಲು 40 ಶ್ರೀಲಂಕಾ ಕ್ರಿಕೆಟಿಗರು ಪಾಕಿಸ್ತಾನದಲ್ಲಿ ಆಡುವುದಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಪತ್ರ ಬರೆದಿದ್ದರು.