2023ರ ಫೆಬ್ರವರಿಯಲ್ಲಿ ಗಮನ ಸೆಳೆದ ಕ್ರೀಡಾ ಸುದ್ದಿಗಳಿವು. 

ಬೆಂಗಳೂರು: 2023ರ ಫೆಬ್ರವರಿ ತಿಂಗಳು ಹಲವು ಕ್ರೀಡಾಚಟುವಟಿಕೆಗಳಿಗೆ ಸಾಕ್ಷಿಯಾಯಿತು. ನಾವೀಗ 2023ಕ್ಕೆ ಗುಡ್‌ ಬೈ ಹೇಳಿ 2024ರ ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದೇವೆ. ಈ ಸಂದರ್ಭದಲ್ಲಿ ನಾವು 2023ರ ಫೆಬ್ರವರಿಯಲ್ಲಿ ಘಟಿಸಿದ ಪ್ರಮುಖ ಕ್ರೀಡಾ ಕ್ಷೇತ್ರದ ಘಟನೆಗಳನ್ನು ಮೆಲುಕು ಹಾಕೋಣ ಬನ್ನಿ

ಅಫ್ರಿದಿ ಮಗಳ ಕೈಹಿಡಿದ ಶಾಹೀನ್‌ ಅಫ್ರಿದಿ

ಪಾಕಿಸ್ತಾನದ ಮಾರಕ ಎಡಗೈ ವೇಗಿ ಶಾಹೀನ್ ಅಫ್ರಿದಿ ಫೆಬ್ರವರಿ ತಿಂಗಳ ಮೊದಲ ವಾರದಲ್ಲೇ ಪಾಕ್ ಮಾಜಿ ನಾಯಕ ಶಾಹಿದ್ ಅಫ್ರಿದಿ ಪುತ್ರಿ ಅನ್ಷಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಕರಾಚಿಯಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಬಾಬರ್ ಅಜಂ ಸೇರಿದಂತೆ ಹಲವು ಪಾಕಿಸ್ತಾನ ಕ್ರಿಕೆಟಿಗರು ಪಾಲ್ಗೊಂಡಿದ್ದರು.

Big Bash League: 5ನೇ ಬಾರಿಗೆ ಕಪ್ ಮುಡಿಗೇರಿಸಿಕೊಂಡ ಪರ್ತ್‌ ಸ್ಕಾರ್ಚರ್ಸ್‌..!

ಬಿಗ್‌ಬ್ಯಾಶ್ ಲೀಗ್ ಟೂರ್ನಿಯ ಫೈನಲ್‌ನಲ್ಲಿ ಬ್ರಿಸ್ಬೇನ್ ಹೀಟ್ ಎದುರು ಪರ್ತ್‌ ಸ್ಕಾರ್ಚರ್ಸ್‌ ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದು ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ ಪರ್ತ್‌ ಸ್ಕಾರ್ಚರ್ಸ್‌ ಪಾಲಾದ ಐದನೇ ಟ್ರೋಫಿ ಎನಿಸಿಕೊಂಡಿತು.

ಸುಮಾರು 53,886 ಮಂದಿ ನೆರೆದಿದ್ದ ಪರ್ತ್‌ ಕ್ರಿಕೆಟ್‌ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಬ್ರಿಸ್ಬೇನ್ ಹೀಟ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಪರ್ತ್‌ ಸ್ಕಾರ್ಚರ್ಸ್‌ ತಂಡವು 5 ವಿಕೆಟ್ ಕಳೆದುಕೊಂಡು ಇನ್ನೂ 4 ಎಸೆತ ಬಾಕಿ ಇರುವಂತೆಯೇ ರೋಚಕ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು.

ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ ಗುಡ್ ಬೈ ಹೇಳಿದ ಆಸೀಸ್ ನಾಯಕ ಫಿಂಚ್

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕರಾಗಿದ್ದ ಆ್ಯರೋನ್ ಫಿಂಚ್, ಫೆಬ್ರವರಿಯಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು. ಇದಕ್ಕೂ ಮೊದಲೇ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ಫಿಂಚ್, ಫೆಬ್ರವರಿ ಮೊದಲ ವಾರ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. 

ಆ್ಯರೋನ್ ಫಿಂಚ್, ಆಸ್ಟ್ರೇಲಿಯಾ ಪರ 5 ಟೆಸ್ಟ್, 146 ಏಕದಿನ ಹಾಗೂ 103 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 618, 6,162 ಹಾಗೂ 2,189 ರನ್ ಬಾರಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಸಿಕ್ಕಷ್ಟು ಯಶಸ್ಸು, ಕಾಂಗರೂ ಪಡೆಗೆ ಟಿ20 ಸಿಕ್ಕಿರಲಿಲ್ಲ. ಆದರೆ ಆ್ಯರೋನ್ ಫಿಂಚ್, ಆಸೀಸ್ ಸೀಮಿತ ಓವರ್‌ಗಳ ತಂಡದ ನಾಯಕರಾದ ಬಳಿಕ ಯುಎಇನಲ್ಲಿ 2021ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಮೊದಲ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು.

ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಗೆ ಚಾಲನೆ:

ಭಾರತ-ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯಾಗಿರುವ ಬಾರ್ಡರ್-ಗವಾಸ್ಕರ್ ಸರಣಿಗೆ ಭಾರತದಲ್ಲಿ ಚಾಲನೆ ಸಿಕ್ಕಿತು. ಮೊದಲ ಟೆಸ್ಟ್‌ನಲ್ಲಿ ಕೆ ಎಸ್ ಭರತ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 132 ರನ್ ಅಂತರದ ಗೆಲುವು ಸಾಧಿಸಿತು. 

WPL Auction: ಸ್ಮೃತಿ ಮಂಧನಾ ಆರ್‌ಸಿಬಿ ತೆಕ್ಕೆಗೆ, ಹರ್ಮನ್‌ಪ್ರೀತ್ ಕೌರ್ ಮುಂಬೈ ಪಾಲು

ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ತಾರಾ ಆರಂಭಿಕ ಬ್ಯಾಟರ್ ಸ್ಮೃತಿ ಮಂಧನಾ ಅವರನ್ನು 3.40 ಕೋಟಿ ರುಪಾಯಿಗೆ ತನ್ನ ತೆಕ್ಕೆಗೆ ಸೆಳೆದುಕೊಂಡಿತು. ಇನ್ನು ಹರ್ಮನ್‌ಪ್ರೀತ್ ಕೌರ್ ಅವರನ್ನು 1.80 ಕೋಟಿಗೆ ಮುಂಬೈ ಇಂಡಿಯನ್ಸ್‌ ತನ್ನತ್ತ ಸೆಳೆದುಕೊಂಡಿತು. ಕನ್ನಡತಿ ಶ್ರೇಯಾಂಕ ಪಾಟೀಲ್ ಆರ್‌ಸಿಬಿ ತೆಕ್ಕೆಗೆ ಸೇರಿಕೊಂಡರು.

ಡೆಲ್ಲಿ ಟೆಸ್ಟ್‌: ಪೂಜಾರ ಪಾಲಿಗೆ ನೂರನೇ ಟೆಸ್ಟ್

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯವು ಡೆಲ್ಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ನಡೆಯಿತು. ಈ ಟೆಸ್ಟ್ ಪಂದ್ಯವು ಚೇತೇಶ್ವರ್ ಪೂಜಾರ ಅವರ ನೂರನೇ ಟೆಸ್ಟ್ ಪಂದ್ಯ ಎನಿಸಿಕೊಂಡಿತು. ಜಡೇಜಾ ಮಾರಕ ದಾಳಿಗೆ ತತ್ತರಿಸಿದ ಆಸೀಸ್ ಎರಡನೇ ಟೆಸ್ಟ್‌ನಲ್ಲೂ ಸೋಲು ಕಂಡಿತು. ಡೆಲ್ಲಿ ಟೆಸ್ಟ್‌ ಪಂದ್ಯವನ್ನು ಟೀಂ ಇಂಡಿಯಾ 6 ವಿಕೆಟ್‌ಗಳಿಂದ ಜಯಿಸಿದ ಭಾರತ ಸರಣಿಯನ್ನು 2-0 ಅಂತರದಲ್ಲಿ ಮುನ್ನಡೆ ಸಾಧಿಸಿತು.

ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ತಲೆದಂಡ:

ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ, ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸುದ್ದಿಯಾಗಿದ್ದರು. ಖಾಸಗಿ ಚಾನೆಲ್‌ವೊಂದರ ರಹಸ್ಯ ಕಾರ್ಯಚರಣೆ ವೇಳೆ ಚೇತನ್ ಶರ್ಮಾ, ಭಾರತ ತಂಡದ ಕೆಲವು ಆಂತರಿಕ ವಿಚಾರಗಳನ್ನು ಬಹಿರಂಗಗೊಳಿಸಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿತ್ತು.

ಭಾರತ ತಂಡದ ಕೆಲ ಆಟಗಾರರು ಫಿಟ್ನೆಸ್‌ ಸಾಬೀತಿಗೆ ಇಂಜೆಕ್ಷನ್‌ ತೆಗೆದುಕೊಳ್ಳುತ್ತಾರೆ ಎಂದು ಬಾಯ್ಬಿಟ್ಟಿದ್ದರು. ಇದು ಕ್ರಿಕೆಟ್ ವಲಯದಲ್ಲಿ ಸಂಚಲನವನ್ನೇ ಮೂಡಿಸಿತ್ತು. ಬಿಸಿಸಿಐ ಮುಜುಗರ ತಪ್ಪಿಸಿಕೊಳ್ಳುವ ಉದ್ದೇಶದಿಂದ ಚೇತನ್ ಶರ್ಮಾ ಅವರಿಂದ ರಾಜೀನಾಮೆ ಪಡೆದಿತ್ತು.

2 ಅಂತಾರಾಷ್ಟ್ರೀಯ ಕೂಟಕ್ಕೆ ಗೈರು: ಕುಸ್ತಿ​ಪ​ಟು​ಗಳ ವರ್ತ​ನೆ​ಗೆ ಸಚಿ​ವಾ​ಲಯ ಅಸ​ಮಾ​ಧಾ​ನ..!

ಭಾರ​ತೀಯ ಕುಸ್ತಿ ಫೆಡ​ರೇ​ಶನ್‌ ಜೊತೆ​ಗಿನ ಸಂಘ​ರ್ಷ​ದಿಂದಾಗಿ ವಿನೇಶ್‌ ಪೋಗಟ್, ಭಜ​ರಂಗ್‌ ಪೂನಿಯಾ, ರವಿ ದಹಿಯಾ, ಅನ್ಶು ಮಲಿಕ್‌ ಸೇರಿ​ದಂತೆ ಪ್ರಮು​ಖರು ಜಾಗ್ರೆಬ್‌ ಮತ್ತು ಅಲೆ​ಕ್ಸಾಂಡ್ರಿಯಾ ಕೂಟ​ಗ​ಳಲ್ಲಿ ಪಾಲ್ಗೊಂಡಿರಲಿಲ್ಲ. 2 ಅಂತಾರಾಷ್ಟ್ರೀಯ ಕೂಟಕ್ಕೆ ಗೈರಾಗಿರುವುದಕ್ಕೆ ಭಾರತದ ಕ್ರೀಡಾ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಕೋಚ್‌ ಪಾರ್ಕ್ರನ್ನು ಕೈಬಿಟ್ಟ ಪಿ.ವಿ.​ಸಿಂಧು

ನವ​ದೆ​ಹ​ಲಿ: ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ತಮ್ಮ ಬಹು​ಕಾ​ಲದ ಕೋಚ್‌, ದ.ಕೊ​ರಿ​ಯಾ​ದ ಪಾರ್ಕ್ ಟಾಯ್‌ ಸಾಂಗ್‌ ಅವ​ರಿಂದ ದೂರ​ವಾ​ಗಿ​ದ್ದಾರೆ. ಇತ್ತೀ​ಚಿನ ಟೂರ್ನಿ​ಗ​ಳಲ್ಲಿ ಸಿಂಧು ಕಳಪೆ ಪ್ರದ​ಶ​ರ್‍ನ ತೋರಿದ್ದು, ಇದರ ನೈತಿಕ ಹೊಣೆ ಹೊತ್ತು ತಮ್ಮ ಹುದ್ದೆಗೆ ರಾಜೀ​ನಾಮೆ ನೀಡುತ್ತಿ​ದ್ದೇನೆ ಎಂದು ಪಾರ್ಕ್ ತಿಳಿ​ಸಿ​ದ್ದರು. ಪಾರ್ಕ್ ಕೋಚಿಂಗ್‌ ಅವ​ಧಿ​ಯಲ್ಲೇ ಸಿಂಧು ಟೋಕಿಯೋ ಒಲಿಂಪಿಕ್ಸ್‌ ಕಂಚು, ಕಾಮ​ನ್‌​ವೆಲ್ತ್‌ ಗೇಮ್ಸ್‌ ಚಿನ್ನ ಗೆದ್ದಿ​ದ್ದ​ರು.

ಮಹಿಳಾ ಟಿ20 ವಿಶ್ವಕಪ್: ಆಸ್ಟ್ರೇಲಿಯಾ 6ನೇ ಬಾರಿ ವಿಶ್ವಚಾಂಪಿಯನ್‌..!

2023ರ ಫೆಬ್ರವರಿ ತಿಂಗಳಿನಲ್ಲಿ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಎದುರು 19 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದ ಆಸ್ಟ್ರೇಲಿಯಾ ಆರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೇಪ್‌ಟೌನ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸೀಸ್ 6 ವಿಕೆಟ್ ಕಳೆದುಕೊಂಡು 156 ರನ್ ಕಲೆಹಾಕಿತು. ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಆರು ವಿಕೆಟ್ ಕಳೆದುಕೊಂಡು 137 ರನ್ ಗಳಿಸಲಷ್ಟೇ ಶಕ್ತವಾಯತು.