ಆಗಸ್ಟ್ 1 ರಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಆಂಗ್ಲರ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿಯುವವರು ಯಾರು? ಈ ಪ್ರಶ್ನೆ ಇದೀಗ ಟೀಂ ಇಂಡಿಯಾ ನಾಯಕ ಕೊಹ್ಲಿ ಹಾಗೂ ರವಿ ಶಾಸ್ತ್ರಿ ಉತ್ತರ ಹುಡುಕುತ್ತಿದ್ದಾರೆ. ಇದಕ್ಕೆ ಮಾಜಿ ನಾಯಕ ಸೌರವ್ ಗಂಗೂಲಿ ಸಲಹೆ ನೀಡಿದ್ದಾರೆ.
ಕೋಲ್ಕತ್ತಾ(ಜು.30): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗಿರುವ ಟೀಂ ಇಂಡಿಯಾಗೆ ಪ್ಲೇಯಿಂಗ್ 11 ಆಯ್ಕೆ ಕಠಿಣವಾಗಿದೆ. ಪ್ರತಿ ಸ್ಥಾನಕ್ಕೂ ಕನಿಷ್ಠ ಮೂವರು ಸರ್ಧಿಗಳಿದ್ದಾರೆ. ಹೀಗಾಗಿ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿಗೆ ತಂಡದ ಆಯ್ಕೆ ತಲೆನೋವು ತಂದಿದೆ.
ಟೆಸ್ಟ್ ಪಂದ್ಯದಲ್ಲಿ ಆರಂಭಿಕರ ಪಾತ್ರ ತುಂಬಾ ಮುಖ್ಯ. ಉತ್ತಮ ಆರಂಭ ಪಂದ್ಯದಲ್ಲಿ ಮೇಲುಗೈ ಸಾಧಿಸಲು ಸಹಕಾರಿಯಾಗಿದೆ. ಹೀಗಾಗಿ ಮೊದಲ ಟೆಸ್ಟ್ ಪಂದ್ಯದಲ್ಲಿ ಯಾರನ್ನ ಕಣಕ್ಕಿಳಿಸಬೇಕು ಅನ್ನೋ ಚರ್ಚೆ ಶುರುವಾಗಿದೆ.
ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕೆಎಲ್ ರಾಹುಲ್ ಹಾಗೂ ಮುರಳಿ ವಿಜಯ್ ಕಣಕ್ಕಿಳಿಯಬೇಕು ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಸಲಹೆ ನೀಡಿದ್ದಾರೆ. ಶಿಖರ್ ಧವನ್ ಏಕದಿನ ಮಾದರಿಯಲ್ಲಿ ಅತ್ಯುತ್ತಮ ಆರಂಭಿಕ. ಆದರೆ ವಿದೇಶಿ ಪಿಚ್‌ಗಳಲ್ಲಿ ಧವನ್ ಟೆಸ್ಟ್ ಫಾರ್ಮ್ ಉತ್ತಮವಾಗಿಲ್ಲ ಎಂದು ಗಂಗೂಲಿ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇಂಗ್ಲೆಂಡ್, ಸೌತ್ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಪಿಚ್‌ಗಳಲ್ಲಿ ಶಿಖರ್ ಧವನ್ ಇದುವರೆಗೆ ಗಳಿಸಿರೋದು 397 ರನ್, ಸರಾಸರಿ 22.05. ಆದರೆ ಮುರಳಿ ವಿಜಯ್ 1162 ರನ್ ಸಿಡಿಸಿದರೆ, ಕೆಎಲ್ ರಾಹುಲ್ 4 ಪಂದ್ಯದಿಂದ 160 ರನ್ ದಾಖಲಿಸಿದ್ದಾರೆ.
