ದುಬೈ(ಡಿ.14): ಮೊದಲ ಗೇಮ್‌'ನ ಹಿನ್ನಡೆಯನ್ನು ಅತ್ಯದ್ಭುತವಾಗಿ ಮೆಟ್ಟಿನಿಂತ ಭಾರತದ ಎರಡನೇ ಶ್ರೇಯಾಂಕಿತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ವಿಶ್ವ ಸೂಪರ್ ಸಿರೀಸ್ ಫೈನಲ್ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದ್ದಾರೆ.

‘ಬಿ’ ಗುಂಪಿನ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು, ಜಪಾನ್ ಆಟಗಾರ್ತಿ ಅಕಾನಿ ಯಮಗುಚಿ ವಿರುದ್ಧ 12-21, 21-8, 21-15ರ ಮೂರು ಗೇಮ್‌'ಗಳಲ್ಲಿ ಗೆಲುವು ಪಡೆದರು. ಈ ಗೆಲುವಿನೊಂದಿಗೆ ಗುಂಪಿನಲ್ಲಿ ಎರಡನೇ ಸ್ಥಾನಕ್ಕೆ ಸಿಂಧು ಏರಿದ್ದು, ಗುರುವಾರ ನಡೆಯಲಿರುವ ಪಂದ್ಯದಲ್ಲಿ ಇದೇ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಸುನ್ ಯು ವಿರುದ್ಧ ಸೆಣಸಲಿದ್ದಾರೆ. ಚೀನಾ ಓಪನ್ ಫೈನಲ್‌'ನಲ್ಲಿ ಮುಖಾಮುಖಿಯಾಗಿದ್ದ ಸುನ್ ವಿರುದ್ಧ ಸಿಂಧು ಗೆಲುವು ಪಡೆದು ಚೊಚ್ಚಲ ಚೀನಾ ಸೂಪರ್ ಸಿರೀಸ್ ಜಯಿಸಿದ್ದರು.

ಅಂದಹಾಗೆ ದಿನದ ಮೊದಲಲ್ಲಿ ನಡೆದ ‘ಬಿ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ರಿಯೊ ಒಲಿಂಪಿಕ್ ಚಾಂಪಿಯನ್, ಸ್ಪೇನ್ ಆಟಗಾರ್ತಿ ಕರೋಲಿನ್ ಮರಿನ್ ವಿರುದ್ಧ ಸುನ್ 21-18, 24-22ರ ಎರಡು ನೇರ ಗೇಮ್‌'ಗಳಲ್ಲಿ ಗೆಲುವು ಸಾಧಿಸಿ ಅಗ್ರಸ್ಥಾನ ಪಡೆದರು.

ತಿರುಗೇಟು

ಮೊದಲ ಗೇಮ್‌'ನಲ್ಲಿ ಪ್ರಖರ ಆಟದಿಂದ ಮೇಲುಗೈ ಸಾಧಿಸಿದ ಜಪಾನ್ ಆಟಗಾರ್ತಿಗೆ ಸಿಂಧು ಬಹುಬೇಗನೆ ತಿರುಗೇಟು ನೀಡಿದರು. ಎರಡನೇ ಗೇಮ್‌'ನಲ್ಲಿ ಅತ್ಯಬ್ಬರದ ಆಟವಾಡಿದ ಸಿಂಧು ಶಕ್ತಿಶಾಲಿ ಸ್ಟ್ರೋಕ್‌ಗಳಿಂದ ಯಮಗುಚಿಗೆ ಕಂಟಕರಾದರು. ಸಿಂಧುವಿನ ಸಿಡಿಲಬ್ಬರದ ಆಟದೆದುರು ನಿಲ್ಲಲಾಗದ ಆಕೆ, ಕೇವಲ ಎಂಟು ಪಾಯಿಂಟ್ಸ್‌ಗಳನ್ನೇ ಕಲೆಹಾಕಲು ಸಾಧ್ಯವಾಯಿತು. ಇತ್ತ, ನಿರ್ಣಾಯಕವಾಗಿದ್ದ ತೃತೀಯ ಗೇಮ್‌'ನಲ್ಲಿಯೂ ಸಿಂಧು ಸವಾಲಿಗೆ ಪ್ರತಿಸ್ಪರ್ಧೆ ನೀಡಲು ಯಮಗುಚಿಗೆ ಸಾಧ್ಯವಾಗಲಿಲ್ಲ.