ಭಾನುವಾರ ಪಂದ್ಯದ ಕೊನೇ ದಿನವಾಗಿದ್ದು, ಪಂದ್ಯ ಹೆಚ್ಚೂ ಕಮ್ಮಿ ಡ್ರಾದತ್ತ ಸಾಗಿರುವುದನ್ನು ಖಚಿತಪಡಿಸಿದೆ.

ಮುಂಬೈ(ಫೆ.18): ಮೂರನೇ ಕ್ರಮಾಂಕಿತ ಆಟಗಾರ ಶ್ರೇಯಸ್ ಅಯ್ಯರ್ (85) ತೋರಿದ ದಿಟ್ಟ ಪ್ರತಿರೋಧದೊಂದಿಗೆ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕೈಕ ಅಭ್ಯಾಸ ಪಂದ್ಯದಲ್ಲಿ ಭಾರತ ಎ ತಂಡ ತಿರುಗೇಟಿಗೆ ಪ್ರಯತ್ನಿಸಿದೆ. ಆದಾಗ್ಯೂ ಎರಡನೇ ದಿನದಾಟದ ಅಂತ್ಯಕ್ಕೆ 51 ಓವರ್‌ಗಳಲ್ಲಿ 4 ವಿಕೆಟ್‌ಗೆ 176 ರನ್ ಗಳಿಸಿರುವ ಆತಿಥೇಯರ ವಿರುದ್ಧ ಕಾಂಗರೂ ಪಡೆ ತುಸು ಮೇಲುಗೈ ಸಾಧಿಸಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಕಲೆಹಾಕಿದ ಬೃಹತ್ ಮೊತ್ತ (469/7 ಡಿಕ್ಲೇರ್) ಕ್ಕೆ ಉತ್ತರವಾಗಿ ತುಸು ಆಕ್ರಮಣಕಾರಿಯಾಗಿಯೇ ಬ್ಯಾಟ್ ಮಾಡಿದ ಶ್ರೇಯಸ್ ಅಯ್ಯರ್ ಒಬ್ಬರನ್ನು ಹೊರತುಪಡಿಸಿ ಆತಿಥೇಯ ತಂಡದ ಬ್ಯಾಟಿಂಗ್ ಅಷ್ಟೇನೂ ಹೇಳಿಕೊಳ್ಳುವಂತಿರಲಿಲ್ಲ. ದಿನದಾಟ ನಿಂತಾಗ ಶ್ರೇಯಸ್ ಜತೆಗೆ ದೆಹಲಿ ಬ್ಯಾಟ್ಸ್‌ಮನ್ ರಿಷಭ್ ಪಂತ್ 3 ರನ್ ಗಳಿಸಿ ಕ್ರೀಸ್‌'ನಲ್ಲಿದ್ದಾರೆ. ಭಾನುವಾರ ಪಂದ್ಯದ ಕೊನೇ ದಿನವಾಗಿದ್ದು, ಪಂದ್ಯ ಹೆಚ್ಚೂ ಕಮ್ಮಿ ಡ್ರಾದತ್ತ ಸಾಗಿರುವುದನ್ನು ಖಚಿತಪಡಿಸಿದೆ.

ಆರಂಭಿಕ ಹಿನ್ನಡೆ

ಪ್ರವಾಸಿ ತಂಡದ ನಾಯಕ ಸ್ವೀವನ್ ಸ್ಮಿತ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ಬಳಿಕ ಬ್ಯಾಟಿಂಗ್‌'ಗಿಳಿದ ಭಾರತ ಎ ತಂಡ, ಕೇವಲ 19 ರನ್ ಗಳಿಸುವಷ್ಟರಲ್ಲೇ ಆರಂಭಿಕ ಅಖಿಲ್ ಹೆರ್ವಾಡ್ಕರ್ ವಿಕೆಟ್ ಕಳೆದುಕೊಂಡಿತು. ಆನಂತರ ಜತೆಯಾದ ಪ್ರಿಯಾಂಕ ಪಾಂಚಲ್ (36) ಮತ್ತು ಶ್ರೇಯಸ್ ಅಯ್ಯರ್ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಲು ಮುಂದಾದರೂ, ಆಸೀಸ್ ಸ್ಪಿನ್ನರ್ ನಾಥನ್ ಲಿಯೊನ್ ಬೌಲಿಂಗ್‌ನಲ್ಲಿ ಪೀಟರ್ ಹ್ಯಾಂಡ್‌'ಸ್ಕಂಬ್‌'ಗೆ ಕ್ಯಾಚಿತ್ತು ಕ್ರೀಸ್ ತೊರೆದರು. ಬಳಿಕ ಅಂಕಿತ್ ಬಾವ್ನೆ ಅವರನ್ನು ಕೂಡಿಕೊಂಡ ಶ್ರೇಯಸ್, ಹೋರಾಟ ಮುಂದುವರೆಸಿದರು. ಆದರೆ, ಈ ಜೋಡಿಯನ್ನು ವೇಗಿ ಜಾಕ್ಸನ್ ಬರ್ಡ್ ಬೇರ್ಪಡಿಸಿದರು. 25 ರನ್ ಮಾಡಿದ್ದ ಬಾವ್ನೆಯನ್ನು ಎಲ್‌'ಬಿ ಬಲೆಗೆ ಕೆಡವಿದರೆ, ತದನಂತರ ಆಡಲಿಳಿದ ನಾಯಕ ಹಾರ್ದಿಕ್ ಪಾಂಡ್ಯ (19) ಇದೇ ಬರ್ಡ್ ಬೌಲಿಂಗ್‌'ನಲ್ಲಿ ವಿಕೆಟ್‌ಕೀಪರ್ ಮ್ಯಾಥ್ಯೂ ವೇಡ್‌ಗೆ ಕ್ಯಾಚಿತ್ತು ಹೊರನಡೆದರು. ದಿನದಾಟದ ಅಂಚಿನಲ್ಲಿ ಬಿದ್ದ ಈ ವಿಕೆಟ್ ಪ್ರವಾಸಿಗರು ಮೇಲುಗೈ ಸಾಧಿಸಲು ನೆರವಾಯಿತು.

ಸ್ಕೋರ್ ವಿವರ

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 469/7

ಮಿಚೆಲ್ ಮಾರ್ಶ್ 75

ಮ್ಯಾಥ್ಯೂ ವೇಡ್ 64

ಭಾರತ ಎ ಮೊದಲ ಇನ್ನಿಂಗ್ಸ್ 176/4

ಶ್ರೇಯಸ್ ಅಯ್ಯರ್ 85*

ಅಂಕಿತ್ ಬಾವ್ನೆ 25