ನಿಗದಿತ 50 ಓವರ್‌ಗಳಲ್ಲಿ ಭಾರತ ‘ಬಿ’ 8 ವಿಕೆಟ್ ನಷ್ಟಕ್ಕೆ 327 ರನ್ ಕಲೆಹಾಕಿತು.

ವಿಶಾಖಪಟ್ಟಣಂ(ಮಾ.25): ಕಳಪೆ ಫಾರ್ಮ್'ನಿಂದಾಗಿ ಟೀಂ ಇಂಡಿಯಾದಿಂದ ಹೊರಬಿದ್ದಿರುವ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅಮೋಘ ಶತಕ ಸಿಡಿಸುವ ಮೂಲಕ ದೇವಧರ್ ಟ್ರೋಫಿಯಲ್ಲಿ ಭಾರತ ‘ಬಿ’ ತಂಡಕ್ಕೆ ಟೂರ್ನಿಯಲ್ಲಿ ಶುಭಾರಂಭ ಮಾಡಲು ನೆರವಾಗಿದ್ದಾರೆ. ಧವನ್ ಭರ್ಜರಿ ಶತಕ ಸಿಡಿಸುವ ಮೂಲಕ ಮತ್ತೆ ಟೀಂ ಇಂಡಿಯಾಗೆ ಕಮ್'ಬ್ಯಾಕ್ ಮಾಡುವ ಮುನ್ಸೂಚನೆ ನೀಡಿದ್ದಾರೆ.

ಇಂದಿನಿಂದ ಆರಂಭಗೊಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತ ಭಾರತ ‘ಬಿ’ ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡಿತು. ನಾಯಕ ಪಾರ್ಥೀವ್ ಪಟೇಲ್ ಹಾಗೂ ಶಿಖರ್ ಧವನ್ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಉತ್ತಮ ಆರಂಭ ಪಡೆದುಕೊಂಡಿತು. ಅರ್ಧಶತಕದ ಬಳಿಕ ಪಾರ್ಥೀವ್ ಕ್ರೀಸ್ ತೊರೆದರೆ, ಜಾರ್ಖಂಡ್‌'ನ ಇಶಾಂಕ್ ಜಗ್ಗಿ ಜೊತೆ ಸೇರಿ ಧವನ್ ಇನ್ನಿಂಗ್ಸ್ ಬೆಳೆಸಿದರು.

3ನೇ ವಿಕೆಟ್‌'ಗೆ ಶತಕದ ಜೊತೆಯಾಟವಾಡಿದ ಈ ಜೋಡಿ, ತಂಡ ಬೃಹತ್ ಮೊತ್ತ ಪೇರಿಸಲು ನೆರವಾಯಿತು. ಧವನ್ (128) ಗಳಿಸಿ ಔಟಾದರೆ, ಜಗ್ಗಿ (53) ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಕೆಳ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಅಕ್ಷರ್ ಪಟೇಲ್, ತಂಡ 300 ರನ್‌'ಗಳ ಗಡಿ ದಾಟುವಂತೆ ನೋಡಿಕೊಂಡರು. ನಿಗದಿತ 50 ಓವರ್‌ಗಳಲ್ಲಿ ಭಾರತ ‘ಬಿ’ 8 ವಿಕೆಟ್ ನಷ್ಟಕ್ಕೆ 327 ರನ್ ಕಲೆಹಾಕಿತು. ಭಾರತ ‘ಎ’ ಪರ ಸಿದ್ಧಾರ್ಥ್ ಕೌಲ್ 5 ವಿಕೆಟ್ ಕಬಳಿಸಿ ಮಿಂಚಿದರು.

ಬೃಹತ್ ಗುರಿ ಬೆನ್ನತ್ತಲು ಇಳಿದ ಭಾರತ ‘ಎ’ಗೆ ಮಯಾಂಕ್ ಅಗರ್ವಾಲ್ ಹಾಗೂ ಮನ್‌'ದೀಪ್ ಸಿಂಗ್ ಭರ್ಜರಿ ಆರಂಭ ನೀಡುವ ಸೂಚನೆ ನೀಡಿದರಾದರೂ, ಅದು ಸಾಧ್ಯವಾಗಲಿಲ್ಲ. ಮಯಾಂಕ್ 34 ರನ್ ಗಳಿಸಿ ನಿರ್ಗಮಿಸಿದರೆ, ಅನುಭವಿ ಮನೋಜ್ ತಿವಾರಿ 37 ರನ್‌'ಗೆ ಆಟ ನಿಲ್ಲಿಸಿದರು. ರಿಶಬ್ ಪಂತ್ ಸ್ಫೋಟಕ ಆಟಕ್ಕೆ ಭಾರತ ‘ಬಿ’ ಬೌಲರ್‌ಗಳು ಅವಕಾಶ ನೀಡಲಿಲ್ಲ. ಅನುಭವಿ ದಾಂಡಿಗ ಅಂಬಟಿ ರಾಯುಡು (92) ಏಕಾಂಗಿ ಹೋರಾಟ ನಡೆಸಿದರಾದರೂ, ತಂಡಕ್ಕೆ ಇದರಿಂದ ಲಾಭವಾಗಲಿಲ್ಲ. ಕೆಳ ಕ್ರಮಾಂಕದಲ್ಲಿ ದೀಪಕ್ ಹೂಡಾ (46) ವಿಸ್ಫೋಟಕ ಬ್ಯಾಟಿಂಗ್ ನಡೆಸುವ ಪ್ರಯತ್ನ ನಡೆಸಿದರಾದರೂ ಅವರಿಗೆ ಸರಿಯಾದ ಬೆಂಬಲ ದೊರಕಲಿಲ್ಲ.

ಅಂತಿಮವಾಗಿ, ಭಾರತ ‘ಎ’ 48.2 ಓವರ್‌'ಗಳಲ್ಲಿ 304 ರನ್‌'ಗಳಿಗೆ ಸರ್ವಪತನಗೊಂಡಿತು. ಭಾರತ ‘ಬಿ’ ಪರ ಧವಳ್ ಕುಲ್ಕರ್ಣಿ ಹಾಗೂ ಅಕ್ಷಯ್ ಕರ್ನೇವಾರ್ ತಲಾ 3 ವಿಕೆಟ್ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್: ಭಾರತ ‘ಬಿ’ : 327/(ಧವನ್ 128, ಇಶಾಂಕ್ 53, ಪಾರ್ಥೀವ್ 50, ಸಿದ್ಧಾರ್ಥ್ ಕೌಲ್ 59/5)

ಭಾರತ ‘ಎ’: 304/10(ರಾಯುಡು 92, ದೀಪಕ್ ಹೂಡಾ 46 ಕರ್ನೇವಾರ್ 60/3)